ಮೋಷನ್ ಪಿಕ್ಚರ್ಸ್ ತೆಕ್ಕೆಗೆ ‘ಕಬ್ಜ’ ಚಿತ್ರದ ಹಿಂದಿ ಅವತರಣಿಕೆ ಹಕ್ಕು
‘ಕಬ್ಜ’ ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ತೆಕ್ಕೆಗೆ. ಇಂದು ಹಿಂದಿ ಟೀಸರ್ ಬಿಡುಗಡೆ
ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ.
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.
‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಉಪೇಂದ್ರ, ‘ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ ಸಹ ಈ ಕುರಿತು ಮಾತನಾಡಿದ್ದು, ‘ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ’ ಎಂದಿದ್ದಾರೆ.
‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ.
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.