Komal Kumar's 25th movie "Kuteera" begins

ಕೋಮಲ್ ಕುಮಾರ್ ನಟನೆಯ 25ನೇ ಚಿತ್ರ “ ಕುಟೀರ” ಆರಂಭ - CineNewsKannada.com

ಕೋಮಲ್ ಕುಮಾರ್ ನಟನೆಯ 25ನೇ ಚಿತ್ರ “ ಕುಟೀರ” ಆರಂಭ

ಕಂಸಾಳೆ ಫಿಲಂಸ್ ಲಾಂಛನದಲ್ಲಿ ಮಧು ಮರಿಸ್ವಾಮಿ ನಿರ್ಮಿಸುತ್ತಿರುವ, ಅನೂಪ್ ಅಂಟೋನಿ ನಿರ್ದೇಶನದ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ 25ನೇ ಚಿತ್ರಕ್ಕೆ “ಕುಟೀರ” ಎಂದು ಹೆಸರಿಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ನಂತರ “ಕುಟೀರ”ದ ಬಗ್ಗೆ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

ನಾಯಕ ಕೋಮಲ್ ಮಾತನಾಡಿ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25 ನೇ ಚಿತ್ರವಿದು ನಾನು ಬಹಳ ಇಷ್ಟಪಡುವ ಹಾರಾರ್ ಕಾಮಿಡಿ ಫ್ಯಾಂಟಸಿ ಜಾನರ್ ನ ಚಿತ್ರ. ಈ ಹಿಂದೆ ನಾನು ಕೆಲವು ಹಾರಾರ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ ” ಕುಟೀರ” ಎಂದರೆ ಮನೆ ಎಂದರು.

ಈ ಚಿತ್ರದಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳು ಏನು ಮಾಡುತ್ತದೆ ಎಂಬುದನ್ನು ನಿರ್ದೇಶಕರು ಕಾಮಿಡಿ ಮೂಲಕ ತೋರಿಸಲಿದ್ದಾರೆ. ಈ ಚಿತ್ರದಲ್ಲಿ ಸಿಜಿ ವರ್ಕ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮಧು ಮರಿಸ್ವಾಮಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರ ತಾರಾಬಳಗ “ಕುಟೀರ” ಚಿತ್ರದಲ್ಲಿದೆ. ನನ್ನ ಮೂವತ್ತು ವರ್ಷಗಳ ಸಿನಿಜರ್ನಿಯಲ್ಲಿ ನೀವು ನೀಡುತ್ತಾ ಬಂದಿರುವ ಪ್ರೋತ್ಸಾಹ ಹಾಗೆ ಮುಂದುವರೆಯಲಿ ಎಂದರು.

ನಾಯಕಿ ಪ್ರಿಯಾಂಕ ತಿಮ್ಮೇಶ್ ಮಾತನಾಡಿ ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗೇಶ್ ಅವರಿಗೆ ಧನ್ಯವಾದ. ಈ ಕಥೆ ಬರೆದಾಗಲೇ ಕೋಮಲ್ ಅವರೆ ನಾಯಕ ಅಂದುಕೊಂಡಿದ್ದೆ. ನಿರ್ಮಾಪಕರ ಬಳಿಯೂ ಹೇಳಿದ್ದೆ. ಕೋಮಲ್ ಅವರು ಕಥೆ ಕೇಳಿ ಇಷ್ಟಪಟ್ಟರು. ಮಾರ್ಚ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ ಎಂದರು.

ನಿರ್ದೇಶಕ ಅನೂಪ್ ಆಂಟೋನಿ ಮಾತನಾಡಿ, ಯಶ್ ಶೆಟ್ಟಿ, ಕಾಕ್ರೋಜ್ ಸುಧೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಿ.ಜಿ.ಭರತ್ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಸಂಭಾಷಣೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಚಿತ್ರ ಆರಂಭವಾಗಲೂ ಪ್ರಮುಖ ಕಾರಣರಾದ ಸಾಜಿದ್ ಖುರೇಶಿ ಅವರಿಗೆ ಹಾಗೂ ನನ್ನ ಮಾವ ಯೋಗೇಶ್ ಅವರಿಗೆ ವಿಶೇಷ ಧನ್ಯವಾದ. ಕೋಮಲ್ ಸರ್ ನಾಯಕರಾಗಿ ನಟಿಸುತ್ತಿರುವುದು ಖುಷಿಯಾಗಿದೆ. ನಮ್ಮ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ಮಧು ಮರಿಸ್ವಾಮಿ.

ನನ್ನದು ಈ ಚಿತ್ರದಲ್ಲಿ ಆಂಗ್ಲೋ ಇಂಡಿಯನ್ ಪಾತ್ರ ಎಂದು ನಾಯಕಿ ಪ್ರಿಯಾಂಕ ತಿಮ್ಮೇಶ್ ತಿಳಿಸಿದರು. ಯೋಗೇಶ್, ಸಂಗೀತ ನಿರ್ದೇಶಕ ಭರತ್ ಬಿ.ಜೆ, ಛಾಯಾಗ್ರಾಹಕ ಅರುಣ್ ಸುರೇಶ್, ಸಂಭಾಷಣೆಕಾರ ಶಂಕರ್ ರಾಮನ್ ಹಾಗೂ ಕಲಾವಿದರಾದ ಯಶ್ ಶೆಟ್ಟಿ, ಕಾಕ್ರೋಜ್ ಸುಧೀ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin