ಧರ್ಮ ಕೀರ್ತಿರಾಜ್ ನಟನೆಯ “ತಲ್ವಾರ್” ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ
ಮಮ್ತಾಜ್ ಚಿತ್ರ ನಿರ್ದೇಶಿಸಿದ್ದ ಮುರಳಿ ಸಾರಥ್ಯದ ಮತ್ತೊಂದು ಚಿತ್ರ ತಲ್ವಾರ್. ಧರ್ಮ ಕೀರ್ತಿರಾಜ್ ನಾಯಕನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ ಕೊನೆಯ ವಾರ ತೆರೆಗೆ ಬರುತ್ತಿದೆ.
ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಮೊದಲ ಗೀತೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮಾಸ್ ಕಂಟೆಂಟ್ ಒಳಗೊಂಡಿರುವ ಈ ಚಿತ್ರದ `ಪಲ್ ಮರುಕಳಿಸಿತೇನೋ..’ ಎಂಬ ಮಧುರ ಗೀತೆ ಬಿಡುಗಡೆಯಾಗಿದೆ.
ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸುರೇಶ್ ಬೈರಸಂದ್ರ ಮೊದಲಬಾರಿಗೆ ನಿರ್ಮಾಪಕರಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಾಯಕನಟ ಧರ್ಮ ಕೀರ್ತಿರಾಜ್ ಮಾತನಾಡಿ `ಇದೊಂದು ಆಕ್ಷನ್ ಹಾಗೂ ಮದರ್ ಸೆಂಟಿಮೆಂಟ್ ಕಥೆ ಒಳಗೊಂಡ ಚಿತ್ರ. ಇದರಲ್ಲಿ ನನ್ನ ಗೆಟಪ್ ಬೇರೆ ಥರ ಇರುತ್ತದೆ. ನನಗಿದು ಸ್ಪೆಷಲ್ ಸಿನಿಮಾ ಎನ್ನಬಹುದು. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಹುಡುಗನ ಪಾತ್ರ ನನ್ನದು. ಆನಂತರ ಆತನಿಗೆ ಪಶ್ಚಾತ್ತಾಪವಾಗಿ ಏನು ಮಾಡುತ್ತಾನೆ ಎಂಬುದನ್ನು ತಲ್ವಾರ್ ಸಿನಿಮಾ ಮೂಲಕ ಹೇಳಿದ್ದೇವೆ’ ಎಂದರು.

ನಿರ್ದೇಶಕ ಮುರಳಿ ಮಾತನಾಡಿ, ರೌಡಿಸಂ ಹಾಗೂ ಸಂಬಂಧಗಳ ಸುತ್ತ ನಡೆವ ಕಥೆ ಒಳಗೊಂಡ ಚಿತ್ರ. ನಿರ್ದೇಶಕನಾಗಿ ಮೂರನೇ ಪ್ರಯತ್ನ. ಹಾಸ್ಟೆಲ್‍ನಲ್ಲಿದ್ದಾಗ ನಡೆದ ನೈಜಘಟನೆ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಧರ್ಮ ಜೊತೆ ಎರಡನೇ ಸಿನಿಮಾ. ನಾನು ಧರ್ಮ ಅವರಿಗೆ ಮೊದಲು ಕಥೆ ಹೇಳಿದ್ದು, ನಂತರ ನಿರ್ಮಾಪಕರಿಗೆ. ಚಿತ್ರಕ್ಕಾಗಿ ಸ್ಟ್ರಗಲ್ ಮಾಡತಾ ಮೂರು ವರ್ಷ ಶೂಟಿಂಗ್ ಮಾಡಿದ್ದೇವೆ. ನಾಲ್ಕು ಆಕ್ಷನ್‍ಗಳು ಚಿತ್ರದ ಹೈಲೈಟ್ ಎಂದರು.
ಚಿತ್ರದ ನಿರ್ಮಾಪಕ ಕಮ್ ಛಾಯಾಗ್ರಾಹಕ ಬಿ.ಎಂ. ಸುರೇಶ್ ಮಾತನಾಡಿ ಈ ಕಥೆ ಕೇಳಿದಾಗ ಒಂದು ರೂಪ ತೆಗೆದುಕೊಳ್ಳುತ್ತದೆ ಎಂದು ಅನಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಈ ಚಿತ್ರದ ಮೂರು ಗೀತೆಗಳು ಹಿಟ್ ಆಗುವ ಭರವಸೆಯಿದೆ’ ಎಂದರು.
ಉಮೇಶ್ ಬಣಕಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಸೋಮನಹಳ್ಳಿ ಜಯರಾಂ ಮತ್ತು ಬೈರೇಗೌಡ್ರು `ಮಜಾ ಭಾರತ’ ಅವಿನಾಶ್, ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ, ಸಿಂಗರ್ ವಿಜೇತ ತಮ್ಮ ಅನುಭವ ಹಂಚಿಕೊಂಡರು.
ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಅಭಿನಯಿಸಿದ್ದು, ಅವರಿಲ್ಲಿ ಎರಡು ಶೇಡ್ ಇರೋ ಪಾತ್ರ ಮಾಡಿದ್ದಾರೆ. ಉಳಿದ ತಾರಾಗಣದಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರು ಇದ್ದಾರೆ.

