Sanju Film Review : ” ಸಂಜು” – ಸಂಬಂಧಗಳ ಸೂಕ್ಷ್ಮತೆ ಅನಾವರಣ
ಚಿತ್ರ: ಸಂಜು
ನಿರ್ದೇಶನ: ಯತಿರಾಜ್
ತಾರಾಗಣ: ಮನ್ವಿತ್, ಸಾತ್ವಿಕಾ, ಬಲ ರಾಜವಾಡಿ, ಯತಿರಾಜ್, ಕುರಿ ರಂಗ, ಸುಂದರಶ್ರೀ, ಸಂಗೀತ ಅನಿಲ್, ಅಪೂರ್ವ, ಮಹಂತೇಶ್ ಮತ್ತಿತರರು
ರೇಟಿಂಗ್ : * 3/5
ಕನ್ನಡದಲ್ಲಿ ಆಗಾಗ ಮನಸ್ಸು ಮುಟ್ಟುವ ಮತ್ತು ತಟ್ಟುವ ಸಿನಿಮಾಗಳು ಬರುತ್ತಿವೆ. ಇಂತಹ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಪ್ರಯತ್ನದ ಚಿತ್ರ ” ಸಂಜು”.
ಪತ್ರಕರ್ತರಾಗಿ, ನಟರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಯತಿರಾಜು, ಸುಂದರ ಪರಿಸರದ ಹಿನ್ನೆಲೆಯನ್ನಿಟ್ಟುಕೊಂಡು ಪ್ರೀತಿ, ಪ್ರೇಮ,ಸಂಬಂಧಗಳ ಜೊತೆ ಕಾಡುವ ವಿಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಒಂದು ಮಾದರಿಯ ಸಿನಿಮಾ ಯಶಸ್ಸು ಕಂಡರೆ ಅದೇ ಜಾನರ್ ಹಿಂದೆ ಬೆನ್ನು ಬೀಳುವ ಸಮಯದಲ್ಲಿ ನಿರ್ದೇಶಕರು ಮುದ್ದಾದ ಪ್ರೀತಿ, ಪ್ರೇಮದ ಸೂಕ್ಷ್ಮತೆಯನ್ನು ಅನಾವರಣ ಮಾಡುವ ಜೊತೆ ಜೊತೆಗೆ ಕುಟುಂಬ, ಸಂಬಂಧಗಳ ತಾಕಲಾಟ, ಪರದಾಟ, ಭಾವನೆಗಳ ಒದ್ದಾಟ , ಜೊತೆಗೆ ತಾಯಿ- ಮಗನ ಬಾಂಧವ್ಯದ ತಿರುಳು ಹೊಂದಿದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ
ಇದ ಚಿತ್ರದ ಹೈಲೈಟ್.
ಸುಂದರ ಪರಿಸರದ ಹಿನ್ನೋಟದಲ್ಲಿ ಒಂಟಿ ಬಸ್ ನಿಲ್ದಾಣ, ಬಸ್ಸಿಗಾಗಿ ಕಾಯುವ ಸರಸ್ವತಿ (ಸಾತ್ವಿಕ ) ಅಲ್ಲಿಗೆ ಬರುವ ಸಂಜು ( ಮನ್ವಿತ್) ಇಬ್ಬರೂ ಅಪರಿಚಿತರು ಜೊತೆಗೆ ತಮ್ಮದೇ ಆದ ಸಮಸ್ಯೆಗಳಲ್ಲಿ ಸಿಲುಕಿದವರು. ಒಂದು ರೀತಿ ಸಮಾನ ಮನಸ್ಕರು ಇಬ್ಬರ ಸಮಸ್ಯೆಗಳಿಂದ ಹತ್ತಿರವಾದವರು. ಮೊದಲ ನೋಟದಲ್ಲಿ ಪ್ರೀತಿಯ ಬಲೆಯಲ್ಲಿ ಸಿಲುಕಿದವರು
ಬಸ್‍ಗಾಗಿ ಕಾದು ಕುಳಿತ ಜೋಡಿ ತಮ್ಮ ತಮ್ಮ ಜೀವನದಲ್ಲಿ ನಡೆದ ಘಟನೆಯಿಂದ ಬೇಸತ್ತವರು .ಆಗಷ್ಟೇ ಪ್ರೀತಿಸಿದ ಹುಡುಗನ ಮುಂದೆ ನಾನು ವಿಷ ಸೇವಿಸಿದ್ದೇನೆ. ನನ್ನನ್ನು ಕಾಪಾಡು ಎಂದು ಆಕೆ ಕೇಳಿಕೊಳ್ಳುತ್ತಾಳೆ.ಅಷ್ಟಕ್ಕೂ ಯಾಕೆ ವಿಷ ಕುಡಿದಳು, ಅದರ ಹಿಂದಿನ ಕಥೆ ಏನು ಎನ್ನುವುದು ಚಿತ್ರದ ಕಥನ ಕುತೂಹಲ.ಅದು ತಿಳಿಯಬೇಕಾದರೆ ಸಂಜು ಒಮ್ಮೆ ನೋಡಿದರೆ ಚೆನ್ನ.
ಪ್ರೀತಿ,ಪ್ರೇಮದ ವ್ಯಾಮೋಹದಲ್ಲಿ ಬಿದ್ದು ಕುಡಿತದ ದಾಸನಾದ ಸಂಜುವಿಗೆ ತಾಯಿಯ ಮಗನ್ನು ಉಳಿಸಿಕೊಳ್ಳಲು ಮದ್ಯ ತಂದುಕೊಡುವ ದೃಶ್ಯ ಹಲವರ ಮನ ಕಲಕುವಂತಿದೆ.
ತಾಯಿ ಮಗನ ವಾತ್ಸಲ್ಯ ಬಾಂಧವ್ಯದ ಎಳೆಯನ್ನು ಮನಸ್ಸಿಗೆ ಮುಟ್ಟುವ ನಿರ್ದೇಶಕ ಯತಿರಾಜ್ ವಾಸ್ತವ ನೆಲೆಗಟ್ಟಿನಲ್ಲಿ ಚಿತ್ರ ಕಟ್ಟಿಕೊಟ್ಟಿದ್ದಾರೆ . ಜೊತೆಗೆ ಪ್ರಕೃತಿ ಮಡಿಲಲ್ಲಿ ಪ್ರೀತಿಯ ವಿಷಯವನ್ನು ಮುಂದಿಟ್ಟುಕೊಂಡು ಕಥೆ ಹೇಳಿರುವ ವಿಧಾನ, ಜಾಣತನ ಅವರ ಆಲೋಚನೆ ,ನಿರೂಪಣಾ ಶೈಲಿಯಲ್ಲಿ ವಿಭಿನ್ನತೆ ಪ್ರದರ್ಶಿಸಿದ್ದಾರೆ. ಚಿತ್ರಕಥೆಯ ಮೇಲೆ ಒಂದಷ್ಟು ಬಿಗಿ ಹಿಡಿತ ಸಾಧಿಸಿದರೆ ಅತ್ಯುತ್ತಮ ಚಿತ್ರವಾಗಿಸಬಹುದಿತ್ತು.
ನಾಯಕ ಮನ್ವಿತ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ನಟಿ ಸಾತ್ವಿಕಾ ಕೂಡ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಸಂಜು ಚಿತ್ರದಲ್ಲಿ ಗಟ್ಟಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ
ಕಲಾವಿದರಾಗಿಯೂ ಯತಿರಾಜ್ ಗಮನ ಸೆಳೆದಿದ್ದಾರೆ. ಸಂಗೀತ ಅನೀಲ್, ಅಪೂರ್ವ, ಬಾಲ ರಾಜವಾಡಿ, ಸುಂದರ ಶ್ರೀ ಸೇರಿದಂತೆ ಹಲವು ಪಾತ್ರಗಳೂ ಮನಸ್ಸು ತಟ್ಟಲಿವೆ. ವಿದ್ಯಾ ನಾಗೇಶ್ ಕ್ಯಾಮರ, ವಿಜಯ್ ಹರಿತ್ಸದ ಹಾಡು ಚಿತ್ರಕ್ಕೆ ಪೂರಕವಾಗಿದೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – ****