“ಕೆರೆಬೇಟೆ’ ಚಿತ್ರದ ವಿವಿಧ ಭಾಷೆಯ ಹಕ್ಕುಗಳ ಮಾರಾಟ: ನಟ ಗೌರಿಶಂಕರ್ ಮುಖದಲ್ಲಿ ಮಂದಹಾಸ
ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ದೇಶ ವಿದೇಶಗಳ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದ “ಕೆರೆಬೇಟೆ” ಚಿತ್ರ ತಂಡದಿಂದ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ನಟ, ನಿರ್ಮಾಪಕ ಗೌರಿ ಶಂಕರ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕನ್ನಡದ ಒಳ್ಳೆಯ ಪ್ರಯತ್ನಗಳು ಮತ್ತು ಕಂಟೆಂಟ್ ಆಧಾರಿತ ಚಿತ್ರಗಳಿಗೆ ಸದಾ ಬೆಂಬಲ ಪ್ರೋತ್ಸಾಹವಿರುತ್ತದೆ. ತುಸು ತಡ ಆಗಬಹುದು ಆದರೆ ಫಲಿತಾಂಶ ನಿಶ್ಚಿತ ಎನ್ನುವುದಕ್ಕೆ ಗೌರಿಶಂಕರ್ ನಟನೆ ಹಾಗು ನಿರ್ಮಾಣದ ಕೆರೆಬೇಟೆಯೇ ಸಾಕ್ಷಿ.
ಕೆರೆಬೇಟೆ ಚಿತ್ರದ ತೆಲುಗು, ಮಲಯಾಳಂ, ತಮಿಳು, ಡಬ್ಬಿಂಗ್ ರೈಟ್ಸ್ ಗಳು, ಹಾಗೂ ಕನ್ನಡ ಅವತರಣಿಕೆಯ ಸ್ಯಾಟಲೈಟ್ ಡಿಜಿಟಲ್ ಹಕ್ಕುಗಳು ಒಂದು ಒಳ್ಳೆ ಬೆಲೆಗೆ ಮಾರಾಟವಾಗಿದೆ. ಈ ಎಲ್ಲಾ ಹಕ್ಕುಗಳನ್ನು ಒಂದೇ ಸಂಸ್ಥೆ ಕೊಂಡುಕೊಂಡಿದೆ. “ಕೆರೆಬೇಟೆ” ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಹಕ್ಕು ಎರಡು ತಿಂಗಳ ಮುಂಚೆಯೇ ಮಾರಾಟವಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ, ನಿರ್ಮಾಪಕ ಗೌರಿಶಂಕರ್ ಕೆರೆಬೇಟೆ ಚಿತ್ರದ ವಿಚಾರವಾಗಿ ನಿಮ್ಮೆಲ್ಲರ ಇಲ್ಲಿಯವರೆಗಿನ ಸಹಕಾರಕ್ಕೆ ಧನ್ಯವಾದಗಳು, ಇನ್ನೇನಿದ್ದರೂ ನನ್ನ ಗುರಿ ಮುಂದಿನ ಒಳ್ಳೆಯ ಚಿತ್ರವನ್ನು ಮಾಡುವುದರ ಬಗ್ಗೆ ನಿಮ್ಮ ಪ್ರೀತಿ ಹಾಗೂ ಸಹಕಾರ ಯಾವಾಗ್ಲೂ ಇರುತ್ತೆ ಅನ್ನುವ ದೊಡ್ಡ ಭರವಸೆಯೊಂದಿಗೆ ಮುನ್ನುಗ್ಗುತ್ತೇನೆ ಎಂದು ವಿಶ್ವಾಸದ ಮಾತನಾಡಿದ್ದಾರೆ.