ಸಖತ್ ಸ್ಪೂಕಿಯಾಗಿದೆ “ಸ್ಪೂಕಿ ಕಾಲೇಜ್” ಚಿತ್ರದ ಟ್ರೇಲರ್
ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿರುವ “ಸ್ಪೂಕಿ ಕಾಲೇಜ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕುತೂಹಲ ಹುಟ್ಟಿಸಿರುವ ಈ ಚಿತ್ರದ ಟ್ರೇಲರ್ ಸಖತ್ “ಸ್ಪೂಕಿ” ಯಾಗಿದೆ.
“ಸ್ಪೂಕಿ” ಎಂದರೆ ಭಯ. ಈ ಭಯವನ್ನು ನಮ್ಮ ಚಿತ್ರದಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಿದ್ದೇನೆ ಎನ್ನಬಹುದು. ಧಾರವಾಡದ ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕಾಲೇಜ್ ನಲ್ಲಿ ನಮ್ಮ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ದಾಂಡೇಲಿ ಅಭಯಾರಣ್ಯದಲ್ಲೂ ಚಿತ್ರೀಕರಣ ಮಾಡಿದ್ದೇವೆ. “ವೀರ ಕೇಸರಿ” ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ನಾಯಕ ವಿವೇಕ್ ಸಿಂಹ ಹಾಗೂ ನಾಯಕಿ ಖುಷಿ ರವಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ ಎನ್ನಬಹುದು. ನಮ್ಮ ಕನಸನ್ನು ನನಸು ಮಾಡಿದ ನಿರ್ಮಾಪಕ ಪ್ರಕಾಶ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಭರತ್.
ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದರಿಂದ ಬಜೆಟ್ ಸ್ವಲ್ಪ ಹೆಚ್ಚಾಯಿತು. ಇಡೀ ತಂಡದ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜನವರಿ 6 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹೆಚ್.ಕೆ.ಪ್ರಕಾಶ್.
“ಚೂರಿಕಟ್ಟೆ” ಚಿತ್ರದಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಆನಂತರ “ಪ್ರೀಮಿಯರ್ ಪದ್ಮಿನಿ” ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡೆ. ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ. ನನ್ನದು ಕಾಲೇಜ್ ಹುಡುಗನ ಪಾತ್ರ ಎಂದರು ನಾಯಕ ವಿವೇಕ್ ಸಿಂಹ.
ಎರಡುವರ್ಷಗಳ ನಂತರ ನನ್ನ ಸಿನಿಮಾ ಬಿಡುಗೆಯಾಗುತ್ತಿದೆ. “ದಿಯಾ” ಚಿತ್ರದಲ್ಲಿ ಎಲ್ಲರನ್ನೂ ಅಳಿಸಿದ್ದೆ. ಈ ಚಿತ್ರದಲ್ಲಿ ಭಯಪಡಿಸುತ್ತೇನೆ ಎಂದು ನಾಯಕಿ ಖುಷಿ ರವಿ ತಿಳಿಸಿದರು.
ಚಿತ್ರದಲ್ಲಿ ನಟಿಸುರುವ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಶೃತಿ ರಾವ್ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಮನೋಹರ್ ಜೋಶಿ ಸೇರಿದಂತೆ ಅನೇಕ ತಂತ್ರಜ್ಞರು “ಸ್ಪೂಕಿ ಕಾಲೇಜ್” ಕುರಿತು ಮಾತನಾಡಿದರು.