“ಠಾಣೆ” ಚಿತ್ರಕ್ಕೆ ಶ್ರೀ ರವಿಶಂಕರ್ ಗುರೂಜಿ ಶುಭಹಾರೈಕೆ : ಸದ್ಯದಲ್ಲಿಯೇ ಸೆನ್ಸಾರ್ ಗೆ
ವಿಭಿನ್ನ ಕಥಾಹಂದರ ಹೊಂದಿರುವ “ಠಾಣೆ” ಗೆ C/O ಶ್ರೀರಾಮಪುರ ಎಂಬ ಅಡಿಬರಹವಿದೆ. ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್‍ನ ಶ್ರೀರವಿಶಂಕರ್ ಗುರೂಜಿ ಆಶ್ರಮಕ್ಕೆ “ಠಾಣೆ” ಚಿತ್ರತಂಡ ಭೇಟಿ ನೀಡಿ, ಗುರೂಜಿಆಶೀರ್ವಾದ ಪಡೆದರು. ನಂತರ ಗುರುಜೀ ಚಿತ್ರದ ಪೋಸ್ಟರ್ ವೀಕ್ಷಿಸಿ ಚಿತ್ರತಂಡಕ್ಕೆ ಆಶೀರ್ವಾದಿಸಿರುವುದು ತಂಡಕ್ಕೆ ಹೊಸ ಚೈತನ್ಯ ಮೂಡಿದೆ
ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ ಹಾಗೂ ಕನ್ನಡದ ಹೆಸರಾಂತ ಸಾಹಸ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಪ್ರವೀಣ್ “ಠಾಣೆ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ.
ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, “ದಿ ಸೂಟ್” ಚಿತ್ರದ ನಂತರ ಎಸ್ ಭಗತ್ ರಾಜ್ ನಿರ್ದೇಶಿಸಿರುವ “ಠಾಣೆ” ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ಸ್ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಕೆಲವೇ ದಿನಗಳಲ್ಲಿ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ. ಇದೇ ವರ್ಷದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರಲಿದೆ.
ರವಿಶಂಕರ್ ಗುರೂಜಿ ತಮ್ಮ ಸಂದೇಶದಲ್ಲಿ ಕನ್ನಡ ಚಿತ್ರರಂಗಕ್ಕೆ ಅದರದೆ ಆದ ಇತಿಹಾಸವಿದೆ. ಡಾ.ರಾಜಕುಮಾರ್ ಅವರಂತಹ ಕಲಾವಿದರು ಸಾಕಷ್ಟು ಸಮಾಜಮುಖಿ ಚಿತ್ರಗಳಲ್ಲಿ ನಟಿಸಿ ಮಾದರಿಯಾಗಿದ್ದಾರೆ. ಪ್ರವೀಣ್ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ನೋಡಿದಾಗ ಉತ್ತಮ ಚಿತ್ರ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಚಿತ್ರ ಯಶಸ್ವಿಯಾಗಲಿ ಹಾಗೂ ಚಿತ್ರತಂಡದವರಿಗೆ ಶುಭವಾಗಲಿ ಆಶೀರ್ವದಿಸಿದ್ದಾರೆ
ಬಿ.ವಿ.ರಾಜರಾಂ, ಬಾಲ್ ರಾಜ್ವಾಡಿ, ರೋಹಿತ್ ನಾಗೇಶ್, ಕುಲದೀಪ್, ಸಂತೋಷ್ ಕರ್ಕಿ, ಭೀಷ್ಮ ರಾಮಯ್ಯ, ನಾಗರಾಜ್, ಮಂಜುಳಾ, ಪಿ.ಡಿ.ಸತೀಶ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
“ಠಾಣೆ” 1962 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನಗರಗಳು ಬೆಳೆದರು, ಸ್ಲಂಗಳು ಬೆಳೆಯುವುದಿಲ್ಲ. ಅದು ಬೆಳೆಯಲು ಕೆಲವರು ಬಿಡುವುದು ಇಲ್ಲ. ಸ್ಲಂ ನಲ್ಲೇ ಹುಟ್ಟಿಬೆಳೆದ ಯುವಕನೊಬ್ಬ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯಿದು. ಆ ಕಾಲಘಟ್ಟದ ಕಥೆಯಾಗಿರುವುದರಿಂದ ಬೆಂಗಳೂರಿನ ಹಳೆ ಬಡಾವಣೆಗಳಾದ ಶ್ರೀರಾಮಪುರ, ಶಿವಾಜಿ ನಗರ ಮುಂತಾದ ಕಡೆ ಹಳೆಯ ಜಾಗಗಳನ್ನು ಹುಡುಕಿ ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ.ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಪ್ರವೀಣ್ ಜಾನ್ ಕಲಾ ನಿರ್ದೇಶನ, ನಿರ್ಮಾಣ ನಿರ್ವಹಣೆ ರವಿಚಂದ್ರ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರಿಗೂ ಸಾಹಸ ಸಂಯೋಜನೆ ಮಾಡಿ ಅನುಭವವಿರುವುದರಿಂದ ಅವರ ಅಭಿನಯದಲ್ಲಿ ಸಾಹಸ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ.