"Tequila" about drugs: Release next month

ಮಾದಕ ವಸ್ತುಗಳ ಸುತ್ತ “ಟಕೀಲ” : ಮುಂದಿನ ತಿಂಗಳು ಬಿಡುಗಡೆ - CineNewsKannada.com

ಮಾದಕ ವಸ್ತುಗಳ ಸುತ್ತ “ಟಕೀಲ” : ಮುಂದಿನ ತಿಂಗಳು ಬಿಡುಗಡೆ

ಜಡ್, ಹೂ ಅಂತೀಯಾ ಉಹೂ ಅಂತೀಯಾ, ಮೀಸೆ ಚಿಗುರಿದಾಗ ಚಿತ್ರಗಳ ನಿರ್ದೇಶಕ ಕೆ.ಪ್ರವೀಣ್ ನಾಯಕ್ ಬಹಳ ದಿನಗಳ ನಂತರ ಆಕ್ಷನ್‍ಕಟ್ ಹೇಳಿರುವ ಚಿತ್ರ “ಟಕೀಲಾ”. ಮರಡಿಹಳ್ಳಿ ನಾಗಚಂದ್ರ ನಿರ್ಮಾಣದ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಚಿತ್ರದ 2 ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು

ನಟ ಧರ್ಮ ಕೀರ್ತಿರಾಜ್, ನಿಖಿತಾಸ್ವಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ, ನಿರ್ದೇಶಕ ಪ್ರವೀಣ್‍ನಾಯಕ್ ಕೂಡ ಅಭಿನಯಿಸಿದ್ದಾರೆ.

ನಿರ್ದೇಶಕ ಪ್ರವೀಣ್ ನಾಯಕ್ ಮಾತನಾಡಿ ಮನಸಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ, ಮನಸಿನ ಸಮಸ್ಯೆಗಳನ್ನು ನೋಡ್ತಾ ನೋಡ್ತಾ ಜನರ ಮನಸ್ಥಿತಿ ಅವಲೋಕಿಸಿದಾಗ ಎಲ್ಲರಿಗೂ ಒಂದಲ್ಲ ಒಂದು ಚಿಂತೆಯಿರುತ್ತೆ ಅನ್ನೋದು ಗೊತ್ತಾಯ್ತು, ಇದೆಲ್ಲವನ್ನೂ ಸೇರಿಸಿ ನಾನು, ನನ್ನ ಪತ್ನಿ ಸೇರಿ ನೈಜತೆಗೆ ಹತ್ತಿರವಾಗುವ ಕಥೆ ಬರೆದೆವು. ಜೀವನದಲ್ಲಿ ಮನುಷ್ಯನಿಗೆ ಅವಕಾಶ ಸಿಗುತ್ತೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಇದ್ದರೆ, ಮತ್ತೆ ಎರಡನೇ ಅವಕಾಶ ಸಿಗದೇ ಇರಬಹುದು, ಹಾಗಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ ಎಂದರು.

ತುಂಬಾ ತಡವಾಗಿ ನಿರ್ಧಾರ ತಗೊಂಡರೆ ಅದು ಕೂಡ ಉಪಯೋಗಕ್ಕೆ ಬರಲ್ಲ, ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು, ಡ್ರಗ್ಸ್ ಅನ್ನೋದು ಸುಳಿ ಇದ್ದಹಾಗೆ, ಅದನ್ನು ಕುತೂಹಲದಿಂದ ಮುಟ್ಟಿ ನೋಡೋ ಪ್ರಯತ್ನ ಮಾಡಬಾರದು ಅನ್ನೋದು ಚಿತ್ರದ ಕಾನ್ಸೆಪ್ಟ್. ಚಿತ್ರದಲ್ಲಿ 2 ಹಾಡುಗಳಿದ್ದು ನಾನು ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದೇವೆ. ಚಿತ್ರದಲ್ಲಿ ಸ್ವಲ್ಪ ಅಡಲ್ಟ್ ಕಂಟೆಂಟ್ ಕೂಡ ಬರುತ್ತೆ, ಹಾಗಂತ ಯಾವುದನ್ನೂ ವಲ್ಗರ್ ಆಗಿ ತೋರಿಸಿಲ್ಲ, ಕ್ಲಾಸ್ ಆಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ಜೀವನದಲ್ಲಿ ನೋಡಿದ, ಕೇಳಿದ ಅನುಭವಗಳೇ ಈ ಸಿನಿಮಾವಾಗಿದೆ. ಸೈಕಾಲಜಿ ಜತೆಗೆ ಸ್ಪಿರಿಚುಯಾಲಿಟಿ ಬೆರೆಸಿ ಮಾಡಿದ ಚಿತ್ರವಿದಾಗಿದ್ದು, ಈ ಮೂಲಕ ಒಂದು ಅರಿವು ಮೂಡಿಸುವ ಪ್ರಯತ್ನ ಎನ್ನಬಹುದು, ಟೈಟಲ್ ಸಾಂಗ್ ಒಂದೇ ದಿನದಲ್ಲಿ ಒಂದೂವರೆ ಲಕ್ಷ ವೀಕ್ಷಣೆಯಾಗಿದೆ ಎಂದು ಹೇಳಿದರು.

ನಿರ್ಮಾಪಕ ನಾಗಚಂದ್ರ ಮಾತನಾಡಿ ಮೊದಲು ಚಿಕ್ಕದಾಗಿ ಮಾಡೋಣ ಅಂದುಕೊಂಡದ್ದು ನಂತರ ದೊಡ್ಡದಾಯ್ತು. ಅಲ್ಲದೆ ಹಲವಾರು ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ಚಿತ್ರವನ್ನು ವಿತರಕ ಜಯಣ್ಣ ರಿಲೀಸ್ ಮಾಡುತ್ತಿದ್ದಾರೆ, ಕರ್ನಾಟಕದಾದ್ಯಂತ 150ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಟಕೀಲ ತೆರೆಗೆ ಬರಲಿದೆ ಎಂದರು,

ನಾಯಕ ಧರ್ಮ ಕೀರ್ತಿರಾಜ್ ಮಾತನಾಡಿ ಸಿನಿಮಾದಲ್ಲಿ ಅಭಿನಯಿಸಲು ಕಾರಣ ನಿರ್ಮಾಪಕ ನಾಗಚಂದ್ರ, ಅವರಿಗೆ ಈ ಚಿತ್ರದಿಂದ ಒಳ್ಳೇ ಹೆಸರು ಬರಲಿ, ತಂದೆಯವರಿಗೆ ಪ್ರವೀಣ್ ನಾಯಕ್ ಅವರ ಜತೆ ಸಿನಿಮಾ ಮಾಡ್ತಿದೀನಿ ಎಂದಾಗ ಮಾಡು ಅಂಥವರ ಬಳಿ ಕಲಿಯುವುದು ಬಹಳಷ್ಟಿರುತ್ತೆ ಎಂದು ಪ್ರೋತ್ಸಾಹಿಸಿದರು. ಸಿನಿಮಾ ಮೂಲಕ ನನಗೆ ಖಂಡಿತ ಒಳ್ಳೇ ಹೆಸರು ಬರುತ್ತೆ ಎಂಬ ನಂಬಿಕೆಯಿದೆ, ಒಬ್ಬ ಬ್ಯುಸಿನೆಸ್ ಮ್ಯಾನ್ ಪಾತ್ರ ಮಾಡಿದ್ದು, ಆತ ಯಾವುದೋ ಒಂದು ಚಟಕ್ಕೆ ಬಿದ್ದಾಗ ಏನೆಲ್ಲ ಆಗಬಹುದೆಂದು ತೋರಿಸಲಾಗಿದೆ ಎಂದರು.

ನಾಯಕಿ ನಿಖಿತಾಸ್ವಾಮಿ ಮಾತನಾಡಿ ನನಗೆ ಕಥೆ ಹೇಳಿದಾಗ ತುಂಬಾ ಚಾಲೆಂಜಿಂಗ್ ಪಾತ್ರ ಎನಿಸಿತು, ಇದರಲ್ಲಿ ಹಲವಾರು ಶೇಡ್ಸ್ ಬರುತ್ತೆ, ನನ್ನಿಂದಾದ ಎಫರ್ಟ್ ಹಾಕಿದ್ದೇನೆ ಎಂದರು.

ಸಂಗೀತ ನಿರ್ದೇಶಕ ರೇಣುಕುಮಾರ್, ನಟ ಸಂಕಲನಕಾರ ನಾಗೇಂದ್ರ ಅರಸ್, ಸಹ ನಿರ್ಮಾಪಕರಾದ ಶಂಕರ ರಾಮರೆಡ್ಡಿ, ಚನ್ನತಿಮ್ಮಯ್ಯ ಮುಂತಾದವರು ಟಕೀಲಾ ಚಿತ್ರದ ಕುರಿತಂತೆ ಮಾತನಾಡಿದರು. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ, ಗಿರೀಶ್ ಅವರ ಸಂಕಲನ, ಪ್ರಶಾಂತ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin