The film crew of "Vidyarthi Vidyarthi Niare" has completed the shooting

ಚಿತ್ರೀಕರಣ ಪೂರ್ಣಗೊಳಿಸಿದ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರತಂಡ - CineNewsKannada.com

ಚಿತ್ರೀಕರಣ ಪೂರ್ಣಗೊಳಿಸಿದ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರತಂಡ

ಅರುಣ್ ಅಮುಕ್ತ ನಿರ್ದೇಶನದ, ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವೀಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡಿದೆ.ಚಿತ್ರೀಕರಣ ಶುರುವಾದಲ್ಲಿಂದ ಆರಂಭವಾಗಿ ಇಲ್ಲಿಯವರೆಗೂ ನಿರ್ದೇಶಕರು ಅತ್ಯಂತ ಕ್ರಿಯಾಶೀಲವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಬಂದಿದ್ದಾರೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಪ್ರಶಾಂತ್ ಸಂಬರ್ಗಿ, ಹಿರಿಯ ನಟಿ ಭವ್ಯಾ, ಸುನೀಲ್ ಪುರಾಣಿಕ್, ರಘು ರಾಮನಕೊಪ್ಪ ಮುಂತಾದವರು ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿ ಅವರೆಲ್ಲರೂ ಸಿನಿಮಾದ ಬಗ್ಗೆ, ಚಿತ್ರತಂಡ ಮತ್ತು ಚಿತ್ರೀಕರಣದ ಅನುಭವಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಈ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಕೊಳ್ಳುವಂತೆ ಮಾಡಿದ್ದಾರೆ. ಇದೇ ವೇದಿಕೆಯಲ್ಲಿ ಪಾತ್ರಗಳನ್ನು ಪರಿಚಯಿಸುವ ವೀಡಿಯೋ ಮತ್ತು ತಾಂತ್ರಿಕ ವರ್ಗವನ್ನು ಪರಿಚಯಿಸೋ ವೀಟಿಯನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲಾಯಿತು.

ನಿರ್ದೇಶಕ ಅರುಣ್ ಅಮುಕ್ತ ಪಕ್ಕಾ ಪ್ಲಾನ್ ಮಾಡಿಕೊಂಡು, ಅಂದುಕೊಂಡಂತೆಯೇ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಅವ್ಯಾಹತವಾಗಿ ಐವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಜಿ ಕಶ್ಯಪ್ ಮಾಹಿತಿ ನೀಡಿದರು. ಕುಂಬಳ ಕಾಯಿ ಒಡೆದಾದ ನಂತರದಲ್ಲೀಗ ಬಿರುಸಿನಿಂದ ಪೆÇಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಜೂನ್ ಹೊತ್ತಿಗೆಲ್ಲ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು, ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲಿಯೇ ಈ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ರಾಪರ್ ಚಂದನ್ ಶೆಟ್ಟಿ ಇದೀಗ ನಾಯಕ ನಟನಾಗಿಯೂ ರೂಪಾಂತರಗೊಂಡಿದ್ದಾರೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಂತೂ ಅವರದ್ದು ಭಿನ್ನ ಶೇಡುಗಳನ್ನು ಹೊಂದಿರುವ ಪಾತ್ರವಂತೆ. ಅವರ ಪಾತ್ರಕ್ಕೆ ಮೂರು ಆಯಾಮಗಳಿವೆ. ಆ ಮೂರೂ ಪಾತ್ರಗಳಿಗಾಗಿ ಅವರು ತಿಂಗಳಳುಗಟ್ಟಲೆ ಶ್ರಮವಹಿಸಿ ತಯಾರಿ ನಡೆಸಿದ್ದಾರೆ. ಆ ಮೂರೂ ಶೇಡುಗಳ ಒಂದಕ್ಕೊಂದು ತದ್ವಿರುದ್ಧ ದಿಕ್ಕಿನವುಗಳು. ಚಂದನ್ ಅಸಲೀ ವ್ಯಕ್ತಿತ್ವಕ್ಕೆ ವಿರುದ್ಧವಾಗಿರೋ ಆ ಪಾತ್ರಗಳನ್ನು ನಿಭಾಯಿಸೋದು ಸವಾಲಾಗಿತ್ತಂತೆ. ಆದರೆ, ಅವಿರತವಾದ ಶ್ರಮದಿಂದ, ಅದೆಲ್ಲದಕ್ಕೂ ನ್ಯಾಯ ಸಲ್ಲಿಸಿದ ಖುಷಿ ಚಂದನ್ ಅವರಲ್ಲಿದೆ. ಆ ಬಗ್ಗೆ ಚಿತ್ರತಂಡದಲ್ಲೂ ಒಂದು ಮೆಚ್ಚುಗೆ ಇದ್ದೇ ಇದೆ.

ಅರುಣ್ ಅಮುಕ್ತ ಪಾಲಿಗಿದು ಮಹತ್ವಾಕಾಂಕ್ಷೆಯ ಚಿತ್ರ. ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ.

ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin