ತೆರೆಯ ಮೇಲೆ ಚಿತ್ರಕಲಾವಿದನ “ಪರಿಸ್ಥಿತಿ”
- ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು ಆ ವ್ಯಕ್ತಿ ಅಥವಾ ಆತನ ಸುತ್ತಲೂ ಇರುವ ಜನ ತೆಗೆದುಕೊಳ್ಳುವ ನಿರ್ಧಾರಗಳು ಆತನ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಅದೇರೀತಿ ರಸ್ತೆಯಲ್ಲಿ ಚಿತ್ರಬಿಡಿಸುತ್ತ ಜೀವನ ಸಾಗಿಸುವ ಕಲಾವಿದನೊಬ್ಬನ ಜೀವನದಲ್ಲಿ ಎದುರಾದ “ಪರಿಸ್ಥಿತಿ”ಯನ್ನು ಹೇಳುವ ಚಿತ್ರವೇ “ಪರಿಸ್ಥಿತಿ”.
“ಹಾರ್ಟ್ ಬೀಟ್” ಸೇರಿದಂತೆ ಸಾಕಷ್ಟು ಪ್ರಸಿದ್ಧ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್.ಎಸ್. ಗಣೇಶ್ ನಾರಾಯಣ್ ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದಾರೆ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿತು.ಶಿವಾನಿ ಫಿಲಂಸ್ ಮೂಲಕ ಎಂ.ಸಿ.ಎಂ.ಆರಾಧ್ಯ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ನಿರ್ಮಾಪಕ ಭಾಸ್ಕರ ನಾಯ್ಕ, ನವರಸನ್, ಶ್ರೀ ಕ್ರೇಜಿಮೈಂಡ್ಸ್ ಮುಂತಾದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು.
ಗಣೇಶ್ ನಾರಾಯಣ್ ನನ್ನ ಕ್ಲಾಸ್ ಮೆಟ್, ಇವರು ಯಾವಾಗಲೋ ಸಿನಿಮಾ ಮಾಡಬೇಕಿತ್ತು. ಈಗ ಒಂದೊಳ್ಳೆ ಸಿನಿಮಾ ಮೂಲಕ ಹೊಸಹೆಜ್ಜೆ ಇಟ್ಟಿದ್ದಾರೆ, ಒಳ್ಳೆಯದಾಗಲಿ ಎಂದು ನಾಗೇಂದ್ರ ಅರಸ್ ಶುಭ ಹಾರೈಸಿದರು.ನಿರ್ಮಾಪಕ ಆರಾಧ್ಯ ಮಾತನಾಡಿ ನಾನು ಗಣೇಶ್ ನಾರಾಯಣ್ ಬಹಳ ದಿನಗಳ ಸ್ನೇಹಿತರು. ಒಮ್ಮೆ ಹೀಗೇ ಮಾತಾಡುವಾಗ ಗಣೇಶ್, ಒಂದು ಷಾರ್ಟ್ ಫಿಲಂ ಮಾಡೋಣ ಎಂದು ಹೇಳಿದರು. ನಂತರ ಅದು ಸಿನಿಮಾನೇ ಆಯಿತು. ಲೋ ಬಜೆಟ್ ಮೂವೀ ಆದರೂ ಸಿನಿಮಾ ರಿಚ್ ಆಗಿ ಬಂದಿದೆ. ರಮಣಿ, ತಂಗಾಳಿ ನಾಗರಾಜ್, ಅಜಿತ್ ಮೂರು ಜನರನ್ನು ಕೋವಿಡ್ ನಲ್ಲಿ ಕಳೆದುಕೊಂಡೆವು. ನಮಗೆ ಮಧು, ಮುರಳಿ (ಯುಎಸ್) ನಿರ್ಮಾಣದಲ್ಲಿ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರಕಲಾವಿದನಾಗಿ ಗಣೇಶ್ ನಾರಾಯಣ್ ಅವರೇ ಅಭಿನಯಿಸಿದ್ದು, ನಮ್ರತಾ, ಅಜಿತ್ ಕುಮಾರ್, ಸಾಯಿಕೃಷ್ಣರೆಡ್ಡಿ, ತಂಗಾಳಿ ನಾಗರಾಜ್, ಶಿಲ್ಪಾ, ಜೋತಿರಾಜನ್ ತಾರಾಬಳಗದಲ್ಲಿದ್ದಾರೆ. ಗಣೇಶ್ ನಾರಾಯಣ್ ಅವರೇ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಗೌತಮ್ ಮನು ಛಾಯಾಗ್ರಹಣ ಮಾಡಿದ್ದಾರೆ.