ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” ಚಿತ್ರದ ಹುಟ್ಟುತ್ತಾ ನಾವು ಲಿರಿಕಲ್ ಹಾಡು ಬಿಡುಗಡೆ
ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ “ಜಲಂಧರ” ಚಿತ್ರದ “ಹುಟ್ಟುತ್ತಾ ನಾವು” ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಮನ್ವರ್ಷಿ ನವಲಗುಂದ ಬರದಿರುವ ಹಾಡನ್ನು ಅವಿನಾಶ್ ಬಸತ್ಕೂರ್ ಹಾಡಿದ್ದಾರೆ. ಜತಿನ್ ದರ್ಶನ್ ಸಂಗೀತ ನೀಡಿದ್ದಾರೆ.
ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಜಂಕಾರ್ ಮ್ಯೂಸಿಕ್ ನ ಭರತ್ ಜೈನ್, ನಾಯಕ ಪ್ರಮೋದ್ ಶೆಟ್ಟಿ ಸಹ ಜೊತೆಗಿದ್ದರು.
ಈ ವೇಳೆ ಮಾತನಾಡಿದ ನಟ ಪ್ರಮೋದ್ ಶೆಟ್ಟಿ. ಕಥೆಯನ್ನು ಕೊರೋನ ಪೂರ್ವದಲ್ಲಿ ಗೆಳೆಯ ಸ್ಟೆಪ್ ಆಫ್ ಲೋಕಿ ಹೇಳಿದ್ದರು. ಕಥೆ ಕೇಳಿ ತುಂಬಾ ಚೆನ್ನಾಗಿದೆ. ನಿರ್ಮಾಪಕರು ಸಿಗದಿದ್ದರೆ ನಾವೇ ನಿರ್ಮಾಣ ಮಾಡೋಣ. ನಿರ್ದೇಶನ ನಾನೇ ಮಾಡುತ್ತೇನೆ. ಆದರೆ ಸ್ವಲ್ಪ ಸಮಯ ಆಗಲಿ ಎಂದಿದ್ದೆ. ಆನಂತರ ನಿರ್ಮಾಪಕ ಮದನ್ ಅವರು ನಿರ್ಮಾಣದ ಸಾರಥ್ಯ ವಹಿಸಿಕೊಂಡರು ಎಂದರು
ಇದರಲ್ಲೂ ಪೊಲೀಸ್ ಅಧಿಕಾರಿ. ಆದರೆ ಗಂಭೀರವಾದ ಪಾತ್ರ. ಇದರಲ್ಲಿ ನಾನೊಬ್ಬನೇ ಹೀರೋ ಅಲ್ಲ. ಕಥೆ ಹಾಗೂ ಅಭಿನಯಿಸಿರುವ ಕಲಾವಿದರು ಎಲ್ಲಾ ನಾಯಕರೆ. ಕನಕಪುರ ಭಾಗದ ಜಾನಪದ ಕಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇಂದು ಬಿಡುಗಡೆಯಾಗಿರುವ ಹಾಡಿನಲ್ಲಿ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಮನ್ವರ್ಷಿ ನವಲಗುಂದ ಅವರು ಬರೆದಿರುವ ಸಾಹಿತ್ಯ ಮನ ಮುಟ್ಟುವಂತಿದೆ ಎಂದು ಮಾಹಿತಿ ನೀಡಿದರು
ಕಥೆಗಾರ ಹಾಗೂ ನಟ ಸ್ಟೆಪ್ ಆಫ್ ಲೋಕಿ ಮಾತನಾಡಿ ಕನಕಪುರದವನು. ನೀರಿನ ಬಗ್ಗೆ ನಮ್ಮ ಅಜ್ಜಿ ಹೇಳಿತ್ತಿದ್ದ ಕಥೆ, ನಾನು ಈ ಚಿತ್ರದ ಕಥೆ ಬರೆಯಲು ಸ್ಪೂರ್ತಿ. ಈ ಕಥೆಯನ್ನು ನಾನು ರಕ್ಷಿತ್ ಶೆಟ್ಟಿ ಅವರ ಸೈಟ್ ಬಳಿ ಪ್ರಮೋದ್ ಶೆಟ್ಟಿ ಅವರಿಗೆ ಹೇಳಿದ್ದೆ. ಪ್ರಮೋದ್ ಅವರು ತಕ್ಷಣ ಒಪ್ಪಿಕೊಂಡರು. ನಿರ್ಮಾಪಕರಿಗಾಗಿ ನಾನು ಇಡೀ ಬೆಂಗಳೂರು ಅಲೆದಿದ್ದೇನೆ. ಆಗ ನನಗೆ ಸಿಕ್ಕಿದ್ದು ಮದನ್ ಅವರು. ಅವರ ಜೊತೆಗೆ ಸಹ ನಿರ್ಮಾಪಕರಾದ ಚಂದ್ರಮೋಹನ್ ಸಿ ಎಲ್, ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಸಹ ನಿರ್ಮಾಣಕ್ಕೆ ಜೊತೆಯಾದರು. ನಾನು ಈ ಚಿತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು
ನಿರ್ದೇಶಕ ವಿಷ್ಣು ವಿ ಪ್ರಸನ್ನ ಮಾತನಾಡಿ ಲೋಕಿ ಅವರು ಕಥೆ ಬರೆದಿದ್ದು, ನಾನು ನಿರ್ದೇಶಿಸಿದ್ದೇನೆ. ಜೀವನ ಎಲ್ಲರಿಗೂ ಅಮೂಲ್ಯ. ಸಾವು ಹೇಗಾದರೂ ಬರಬಹುದು. ಅದರಲ್ಲೂ ಜಲದ ಹತ್ತಿರ ಹೋದಾಗ ಹುಷಾರಗಿರಬೇಕು. ಜೀವನದ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಕೂಡ ಮಾಡಿದ್ದೇವೆ. ನಮ್ಮ ಚಿತ್ರದ ಕಥೆ, ಜಲದೊಳಗಿನ ಕಥೆ. ಅಪರೂಪದ ಕಥೆ ಒಂದೊಳ್ಳೆ ಸಿನಿಮಾ ನಿರ್ದೇಶಿಸಿರುವ ಸಂತೋಷವಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು
“ಟಗರು ” ಖ್ಯಾತಿಯ ರಿಶಿಕಾ ರಾಜ್ ಮಾತನಾಡಿ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಜೋಡಿಯಾಗಿ ನಟಿಸಿದ್ದೇನೆ ಎಂದು ತಿಳಿಸಿದರು.
“ಅಧ್ಯಕ್ಷ” ಖ್ಯಾತಿಯ ಆರೋಹಿತ ಗೌಡ ತಮ್ಮ ಪಾತ್ರದ ಬಗ್ಗೆ ಹೇಳಿದರು.
ನಿರ್ಮಾಪಕ ಮದನ್ ಎಸ್ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಗೀತರಚನೆಕಾರ ಮನ್ವರ್ಷಿ ನವಲಗುಂದ, ಸಂಗೀತ ನಿರ್ದೇಶಕ ಜತಿನ್ ದರ್ಶನ್, ಛಾಯಾಗ್ರಾಹಕ ಸರಿನ್ ರವೀಂದ್ರನ್, ನಟ ರಘು ರಾಮನಕೊಪ್ಪ ಹಾಗೂ ಸಹ ನಿರ್ಮಾಪಕ ರಮೇಶ್ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಲ ರಾಜವಾಡಿ, ನವೀನ್ ಸಾಗರ್ , ಪ್ರತಾಪ್ ನನಸು , ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್ ಮತ್ತು ಅಂಬು, ನಟರಾಜ್ ಬೆಳ್ಳಿದೀಪ, ವಿಶಾಲ್ ಪಾಟೀಲ್ “ಜಲಂಧರ್” ಚಿತ್ರದ ತಾರಾಬಳಗದಲ್ಲಿದ್ದಾರೆ. ರಶ್ಮಿತ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.