ಮಾನವೀಯತೆ ಮುಂದೆ ಹಣ, ಅಧಿಕಾರ ಗೌಣ ಎನ್ನುವ ಸಂದೇಶಾತ್ಮಕ ಚಿತ್ರ : “ನಾಟ್ ಔಟ್”
ಚಿತ್ರ: ನಾಟ್ ಔಟ್
ನಿರ್ದೇಶನ: ಅಂಬರೀಷ್ ಎಂ
ತಾರಾಗಣ: ಅಜಯ್ ಪೃಥ್ವಿ, ರಚನಾ ಇಂದರ್, ರವಿಶಂಕರ್, ಕಾಕ್ರೋಚಿ ಸುಧಿ, ಸಲ್ಮಾನ್, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದ ಗೌಡ ಮತ್ತಿತರರು
ರೇಟಿಂಗ್ : *** 3/5

ಪುರುಷೋತ್ತಮನ ಪ್ರೇಮಪ್ರಸಂಗ'' ಚಿತ್ರದ ಬಳಿಕ ಯುವನಟ ಅಜಯ ಪೃಥ್ವಿ ನಟನೆಯ ಮತ್ತೊಂದು ಚಿತ್ರ ನಾಟ್ ಔಟ್” ತೆರೆಗೆ ಬಂದಿದೆ. ಜೀವನದ ಒದ್ದಾಟ, ಗುದ್ದಾಟ, ಬಡ್ಡಿ ಹಣ ಬದುಕಿನಲ್ಲಿ ನಡೆಯುವ ಸಂದಿಗ್ಧ ಪರಿಸ್ಥಿತಿಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ಚಿತ್ರ ಇದು.
ಜೀವನದಲ್ಲಿ ಹಣ,ಅಂತಸ್ತು ಅಧಿಕಾರ ಮುಖ್ಯವಲ್ಲ, ಮಾನವೀಯತೆ ಮುಖ್ಯ ಎನ್ನುವ ಸಂದೇಶವಿರುವ ಚಿತ್ರ ಇದು. ಜೀವನದಲ್ಲಿ ಹಾರಾಡಿ ಮೆರೆದವರೆಲ್ಲಾ ಹಣ ಅಧಿಕಾರ ಇದ್ದಾಗ ಮಾತ್ರ ಜನ, ವ್ಯಕ್ತಿ ಇಲ್ಲ ಎನ್ನುವುದು ತಿಳಿದರೆ ಜೊತೆಯಲ್ಲಿರುವ ಮಂದಿ ಯಾರೂ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.
ನಿರ್ದೇಶಕ ಅಂಬರೀಷ್ ಎಂ, ನಿತ್ಯದ ಬದುಕಿನ ಜಂಟಾಟ, ಮದ್ಯಮ ವರ್ಗದ ಜೀವನ,ವಿದೇಶದಲ್ಲಿ ಬದುಕು ಕೆಲಸ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಳ್ಳುವ ಹಂಬಲ, ತಂದೆಯ ನೆನಪಿಗೆ ಜಮೀನು ಉಳಿಸಿಕೊಳ್ಳುವ ಹಂಬಲ, ಬಡ್ಡಿಗಾಗಿ ಹಣ ನೀಡಿ ಜನರ ರಕ್ತ ಹೀರುವ ರಕ್ತ ಪಿಪಾಸುಗಳ ಅಟ್ಟಹಾಸದ ವಿಷಯವನ್ನು ನೈಜತೆಗೆ ಹತ್ತಿರವಾಗಿ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಕತಾರ್ನಲ್ಲಿ ಉದ್ಯೋಗ ಹುಡುಕಿಕೊಳ್ಳಲು ಕಂಪನಿಯೊಂದರಲ್ಲಿ ಸಂದರ್ಶನ ಎದುರಿಸಿದ ಅಂಬುಲೆನ್ಸ್ ಚಾಲಕ ಅಜಯ್- ಅಜಯ್ ಪೃಥ್ವಿ, ಮತ್ತು ನರ್ಸ್ ಶ್ರೀದೇವಿ- ರಚನಾ ಇಂದರ್, ವಿದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹಾತೊರೆಯವ ಯುವ ಜೋಡಿಗಳು. ಅದಕ್ಕೆ ಹಣ ಹೊಂದಿಸಲು ಪರದಾಟ.

ಬಡ್ಡಿ ನೀಡಿ ಜನರ ಪ್ರಾಣ ಹಿಂಡುವ ಒಂಟಿಕೊಪ್ಪಲು ದೇವರಾಜ- ರವಿಶಂಕರ್ ಬಳಿ ಪಡೆದ ಸಾಲು ತೀರಿಸಲು ಇನ್ನಿಲ್ಲದ ಕಸರತ್ತು ಮಾಡುವ ಅಜಯ್, ದೇವರಾಜನಿಂದ ನೊಂದ ಬೆಂದು ಹೋದ ವಿದೇಶದಿಂದ ಬಂದ ಶ್ರೀಧರ- ಗೋಪಾಲಕೃಷ್ಣ ದೇಶಪಾಂಡೆ ತಂದೆಯ ಜಮೀನು ಉಳಿಸಿಕೊಳ್ಳಲು ಹೋರಾಟ ನಡೆಸಿದವ. ಇಂತಹ ವೇಳೆ ದೇವರಾಜನನ್ನು ಮಟ್ಟಹಾಕಲು ನಡೆಸಿದ ಹೋರಾಟ ರೋಚಕ. ಜೊತೆಗೆ ಕತಾರ್ನಲ್ಲಿ ಉದ್ಯೋಗ ಪಡೆಯಬೇಕು ಎನ್ನುವ ಕಸನು ಕಂಡ ಯುವ ಜೋಡಿ ಆಸೆ ಈಡೇರುತ್ತಾ ಎನ್ನುವುದು ಚಿತ್ರದ ಕುತೂಹಲ.
ಚಿತ್ರದಲ್ಲಿ ನಿರ್ದೇಶಕ ಅಂಬರೀಷ್ ಸರಳವಾದ ಕಥೆಯನ್ನು ಮುಂದಿಟ್ಟುಕೊಂಡು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ನಾಯಕ ಅಜಯ್ ಪೃಥ್ವಿ ಅಂಬುಲೆನ್ಸ್ ಚಾಲಕನಾಗಿ ಗಮನ ಸೆಳೆದಿದ್ದಾರೆ. ಉತ್ತಮ ಕಥೆ ಸಿಕ್ಕರೆ ಭವಿಷ್ಯದಲ್ಲಿ ಉತ್ತಮ ನಟನಾಗಿ ರೂಪುಗೊಳ್ಳುವ ಭರವಸೆ ನೀಡಿದ್ದಾರೆ.

ಚಿತ್ರದಲ್ಲಿ ಅಜಯ್ ಪೃಥ್ವಿ ನಾಯಕನಾಗಿದ್ದರೂ ಕಥೆಗೆ ನಾಯಕ ಹಿರಿಯ ನಟ ರವಿಶಂಕರ್, ತಮ್ಮ ನಟನೆ ಹಾವ ಭಾವದಿಂದ ಇಡೀ ಚಿತ್ರದುದ್ದಕೂ ಹಿಡಿದಿಡುವ ಕೆಲಸ ಮಾಡಿದ್ದಾರೆ. ನಟಿ ರಚನಾ ಇಂದರ್, ಗೋಪಾಲಕೃಷ್ಣ ದೇಶಪಾಂಡೆ, ಕಾಕ್ರೋಚ್ ಸುಧಿ, ಗೋವಿಂದೇಗೌಡ, ಸಲ್ಮಾನ್ ಪಾತ್ರಗಳ ಮೂಲಕ ಗಮನ ಸೆಳದಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಹಾಲೇಶ್ ಕ್ಯಾಮರ ಚಿತ್ರಕ್ಕಿದೆ.

