Review; ಸಂಜು ವೆಡ್ಸ್ ಗೀತಾ-2 ; ದೃಶ್ಯ ವೈಭವದಲ್ಲಿ ಮಿಂದೆಂದ ಮಧುರ ಪ್ರೇಮ ಕಾವ್ಯ..

ಚಿತ್ರ ; ಸಂಜು ವೆಡ್ಸ್ ಗೀತಾ
ನಿರ್ದೇಶನ : ನಾಗಶೇಖರ್
ತಾರಾಗಣ : ಶ್ರೀನಗರ ಕಿಟ್ಟಿ, ರಚಿತಾ ರಾಮ್, ಸಂಪತ್ ರಾಜ್, ರಂಗಾಯಣ ರಘು, ಸಾಧುಕೋಕಿಲ, ಚೇತನ್ ಚಂದ್ರ, ತಬಲ ನಾಣಿ ಮತ್ತಿತರರು
ರೇಟಿಂಗ್ : * 3.5 /5
ಸಂಜು ವೆಡ್ಸ್ ಗೀತಾ, ಕನ್ನಡದಲ್ಲಿ ಹೊಸ ಅಲೆ ಸೃಷ್ಡಿ ಮಾಡುವ ಜೊತೆಗೆ ಎಲ್ಲರ ಮನ ಗೆದ್ದಿದ್ದ ಚಿತ್ರ. ಇದೀಗ ಹನ್ನೆರಡು ವರ್ಷಗಳ ಬಳಿಕ ಅದದ ಮುಂದುವರಿದ ಭಾಗ ” ಸಂಜು ವೆಡ್ಸ್ ಗೀತಾ- 2 ಈ ವಾರ ತೆರೆಗೆ ಬಂದಿದೆ.
ರೇಷ್ಮೆ ಬೆಳಗಾರರ ನೋವು, ನಲಿವು, ಸಮಸ್ಯೆ ,ಸಂಕಷ್ಟಗಳ ಜೊತೆ ಜೊತೆಗೆ ಬಡರೈತ ಮತ್ತು ಶ್ರೀಮಂತ ಮನೆತನದ ಮಿಸ್ ಕರ್ನಾಟಕ ಬೆಡಗಿಯ ಮುದ್ದಾದ ಪ್ರೇಮಕಾವ್ಯ. ಜೊತೆಗೆ ದೃಶ್ಯ ವೈಭವದ ಶ್ರೀಮಂತಿಕೆ ನೋಡುಗರ ಮನ ಗೆದ್ದಿದೆ.
ನಿರ್ದೇಶಕ ನಾಗಶೇಖರ್ ಸಿನಿಮಾ ಅಂದರೆ ಅಲ್ಲಿ ಇಂಪಾದ ಹಾಡು, ಕಣ್ತುಂಬಿಕೊಳ್ಳುವ ದೃಶ್ಯ ವೈಭವ ಜೊತೆಗೆ ಉತ್ತಮವಾದ ಕತೆಯೂ ಚಿತ್ರದಲ್ಲಿರುತ್ತೆ. ಅದು ಸಂಜು ಗೀತಾ ಮುಂದುವರಿದ ಭಾಗದಲ್ಲಿಯೂ ಮುಂದುವರಿದಿದೆ.
ಆತ ಬಡ ರೈತ ಸಂಜು (ಶ್ರೀನಗರ ಕಿಟ್ಟಿ) ಆಕೆಯೋ ಆಗರ್ಭ ಶ್ರೀಮಂತ ಮನೆತನದ ಹುಡುಗಿ ಗೀತಾ (ರಚಿತಾ ರಾಮ್ ) ಮೊದಲೇ ಸುಂದರಿ ಜೊತೆಗೆ ಮಿಸ್ ಕರ್ನಾಟಕ ಪ್ರಶಸ್ತಿ ತನ್ನದಾಗಿಸಿಕೊಂಡ ಸುಂದರಿ. ಮಿಸ್ ಇಂಡಿಯಾ ಪ್ರಶಸ್ತಿ ಪಡೆಯಬೇಕು ಎನ್ನುವ ತವಕದಲ್ಲಿರುವ ಬೆಡಗಿ.
ಅಮ್ಮ ಇಲ್ಲದ ಮಗಳಿಗೆ ಅಪ್ಪ ಅಮ್ಮನಾಗಿ ಮುದ್ದಾಗಿ ಬೆಳಸುವ ಅಪ್ಪ, ಪ್ರೀತಿ ಕುರುಡು ಎನ್ನುವ ಮಾತಿಗೆ ಅನ್ವರ್ಥವಾಗುವ ರೀತಿ ಬಡ ರೈತನ ಮೇಲೆ ಅನುರಾಗ ಮೂಡಿ ಎಲ್ಲವನ್ನು ತ್ಯಜಿಸಿ ಪ್ರೀತಿಸಿದ ಹುಡುಗನ ಜೊತೆ ಹೆಜ್ಜೆ ಹಾಕುತ್ತಾಳೆ. ಪತ್ನಿಯ ಸಹಕಾರ ಮತ್ತು ಬೆಂಬಲದಿಂದ ಬಡ ರೈತನೂ ಕೂಡ ಶ್ರೀಮಂತನಾಗಿ ಬಿಡುತ್ತಾನೆ. ಈ ನಡುವೆ ಗರ್ಭಿಣಿಯಾಗುವ ಗೀತಾ ,ಬಸುರಿ ಬಯಕೆ ತೀರಿಸಿಕೊಳ್ಳುವ ಆಸೆ ವ್ಯಕ್ತಪಡಿಸುತ್ತಾಳೆ.

ಅತಿಯಾಗಿ ಮುದ್ದು ಮಾಡಿದ ಮಗಳು ತಮ್ಮಿಂದ ದೂರ ಹೋದಳು ಎನ್ನುವ ಕೊರಗು ಮತ್ತು ಕೋಪ ಹೊಟ್ಟೆಯಲ್ಲಿ ಕಟ್ಟಿಕೊಂಡ ಅಪ್ಪ ಮಗಳ ಆಸೆಗೆ ತಣ್ಣೀರೆರೆಚುತ್ತಾನೆ.ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆದುಕೊಳ್ಳುತ್ತದೆ. ನಡೆಯ ಬಾರದ ಘಟನೆ ನಡದು ಹೋಗುತ್ತೆ. ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯಿಂದ ಪಾರಾಗಲು ಸಂಜು ಮತ್ತು ಗೀತಾ ಸ್ವಿಟ್ಜರ್ಲೆಂಡ್‍ಗೆ ತೆರಳುತ್ತಾರೆ. ಈ ದಂಪತಿ ಅಲ್ಲಿಗೆ ಹೋಗಿದ್ಯಾಕೆ.. ಅದರ ಹಿಂದಿನ ಕಾರಣ ಏನು ಎನ್ನುವುದು ಕುತೂಹಲದ ಸಂಗತಿ. ಅದು ಏನು ಎನ್ನುವುದು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ನಾಗಶೇಖರ್ ಮುದ್ದಾದ ಪ್ರೇಮಕಥೆಯ ಜೊತೆ ದೃಶ್ಯ ವೈಭವ ಕಟ್ಟಿಕೊಟ್ಟಿದ್ದಾರೆ. ಇದು ಚಿತ್ರದ ಹೈಲೈಟ್‍ಗಳಲ್ಲಿ ಒಂದು. ರೇಷ್ಮೆ ಬೆಳೆಗಾರರ ಸಂಕಷ್ಠಗಳನ್ನು ಮನಸ್ಸಿಗೆ ಮುಟ್ಟುವ ರೀತಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಸಂಜು ವೆಡ್ಸ್ ಗೀತಾ -2 ಕುತೂಹಲದೊಂದಿಗೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ನಾಯಕ ಶ್ರೀನಗರ ಕಿಟ್ಟಿ, ನಾಯಕಿ ರಚಿತಾ ರಾಮ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಇನ್ನುಳಿದಂತೆ ಸಂಪತ್ ರಾಜ್ ರಂಗಾಯಣ ರಘು, ತಬಲಾ ನಾಣಿ, ಸಾಧುಕೋಕಿಲಾ, ಚೇತನ್ ಚಂದ್ರ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬು ಪ್ರಯತ್ನ ಮಾಡಿದ್ದಾರೆ.
ಸತ್ಯ ಹೆಗಡೆ ಕ್ಯಾಮರಾ,ಶ್ರೀಧರ್ ಸಂಭ್ರಮ ಸಂಗೀತ, ಮತ್ತು ಕವಿರಾಜ್ ಗೀತಾ ಸಾಹಿತ್ಯ ಇಷ್ಡವಾಗುತ್ತದೆ. ನಿರ್ಮಾಪಕ ಛಲವಾದಿ ಕುಮಾರ್ , ಸಂಜು ವೆಡ್ಸ್ ಗೀತಾ ಚಿತ್ರದ ಮೂಲಕ ದೃಶ್ಯ ವೈಭವವನ್ನು ಶ್ರೀಮಂತಿಕೆಯಿಂದ ಕಟ್ಟಿಕೊಟ್ಟಿರುವುದು ಚಿತ್ರದುದ್ದಕ್ಕೂ ಕಾಣುತ್ತದೆ. ಅದರಲ್ಲಿಯೂ ಸ್ವಿಟ್ಜರ್ಲೆಂಡ್ ಸೌಂದರ್ಯವನ್ನು ಕ್ಯಾಮರ ಕಣ್ಣಲ್ಲಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾರೆ. ಸಂಜು ವೆಡ್ಸ್ ಗೀತಾ – 2 ಚಿತ್ರ ಕೊಟ್ಟ ಕಾಸಿಗೆ ಮಾಡದ ಚಿತ್ರ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /