ಗಗನ್ ಎಂಟರ್ ಪ್ರೈಸಸ್ ಜೊತೆ ಕೈ ಜೋಡಿಸಿದ ಖ್ಯಾತ ಬನಿಜಯ್ ಏಷ್ಯಾ ಕಂಪನಿ
ಗಗನ್ ಎಂಟರ್ ಪ್ರೈಸಸ್ ಜೊತೆ ಕೈ ಜೋಡಿಸಿದ ಖ್ಯಾತ ಬನಿಜಯ್ ಏಷ್ಯಾ ಕಂಪನಿ.ಮೊದಲ ಹೆಜ್ಜೆಯಾಗಿ “ರಾಣಿ” ಧಾರಾವಾಹಿ ನಿರ್ಮಾಣ .
ಗಗನ್ ಎಂಟರ್ ಪ್ರೈಸಸ್ ನ ಮೂಲಕ ಕೆ.ಎಸ್ ರಾಮ್ ಜಿ ಅವರು ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶಿಷ್ಟ ಧಾರಾವಾಹಿಗಳನ್ನು ನಿರ್ಮಿಸಿ , ನಿರ್ದೇಶಿಸಿ ಎಲ್ಲರ ಮನ ಗೆದ್ದಿದ್ದಾರೆ. “ಪುಟ್ಟ ಗೌರಿ ಮದುವೆ”, ” ಗೀತಾ”, “ನಾಗಿಣಿ 2”, “ರಾಮಾಚಾರಿ” ಮುಂತಾದ ಜನಪ್ರಿಯ ಧಾರಾವಾಹಿಗಳು ಕೆ.ಎಸ್ ರಾಮ್ ಜಿ ಅವರ ಸಾರಥ್ಯದಲ್ಲಿ ಬಂದಿದೆ ಹಾಗೂ ಬರುತ್ತಿದೆ. ಈಗ ಗಗನ್ ಎಂಟರ್ ಪ್ರೈಸಸ್ ಗೆ ಮತ್ತೊಂದು ಹೆಮ್ಮೆ. ಈಗಾಗಲೇ ವಿಶ್ವದ 22 ಕ್ಕೂ ಅಧಿಕ ಹೆಸರಾಂತ ಕಂಪನಿಗಳ ಜೊತೆ ಸಹಭಾಗಿತ್ವ ಹೊಂದಿರುವ ಬನಿಜಯ್ ಏಷ್ಯಾ ಕಂಪನಿ, ಈಗ ರಾಮ್ ಜಿ ಅವರ ಗಗನ್ ಎಂಟರ್ ಪ್ರೈಸಸ್ ನ ಜೊತೆ ಕೈ ಜೋಡಿಸಿದೆ. ಈ ಎರಡು ಪ್ರಸಿದ್ದ ಕಂಪನಿಗಳ ಸಹಭಾಗಿತ್ವದಲ್ಲಿ “ರಾಣಿ” ಧಾರಾವಾಹಿ ನಿರ್ಮಾಣವಾಗುತ್ತಿದ್ದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ ಮೂರರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.
ನಮ್ಮ ಗಗನ್ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಜನರ ಮನ ಗೆಲುತ್ತಿದೆ. ಈಗಾಗಲೇ 700 ಕ್ಕೂ ಅಧಿಕ ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈತನಕ ಸ್ವಮೇಕ್ ಧಾರಾವಾಹಿಗಳೆ ನಮ್ಮ ಸಂಸ್ಥೆಯಿಂದ ಹೊರಬರುತ್ತಿದೆ..
ಈಗ ಪ್ರಪಂಚದ 120 ದೇಶಗಳಲ್ಲಿ ವಿವಿಧ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಬನಿಜಯ್ ಏಷ್ಯಾ ಕಂಪನಿ ನಮ್ಮ ಸಂಸ್ಥೆ ಜೊತೆ ಕೈಜೋಡಿಸಿದೆ. ನಮ್ಮೆರೆಡು ಸಂಸ್ಥೆಗಳ ಸಹಭಾಗಿತ್ವದ ಮೊದಲ ಹೆಜ್ಹೆಯಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ “ರಾಣಿ” ಧಾರಾವಾಹಿ ನಿರ್ಮಾಣವಾಗುತ್ತಿದೆ. ನಾನೇ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದೇನೆ. ಮುಂದೆ ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ವೆಬ್ ಸೀರೀಸ್ ಮಾಡುವ ಯೋಜನೆ ಕೂಡ ಇದೆ. ನಮ್ಮ ಎಲ್ಲಾ ಪ್ರಯತ್ನಗಳಿಗೂ ನಿಮ್ಮ ಬೆಂಬಲವಿರಲಿ ಎಂದರು ಕೆ.ಎಸ್ ರಾಮ್ ಜಿ.
ಗಗನ್ ಎಂಟರ್ ಪ್ರೈಸಸ್ ಜೊತೆ ಸಹಭಾಗಿತ್ವ ಹೊಂದಿರುವುದು ನಮಗೆ ಖುಷಿ ತಂದಿದೆ. ರಾಮ್ ಜಿ ಅವರು ಹೇಳಿದಂತೆ ಮೊದಲ ಹೆಜ್ಜೆಯಾಗಿ “ರಾಣಿ” ಧಾರಾವಾಹಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಮುಂದೆ ಸಾಕಷ್ಟು ಜನಪ್ರಿಯ ಧಾರಾವಾಹಿಗಳು, ವೆಬ್ ಸೀರಿಸ್ ಹಾಗೂ ವೀಕೆಂಡ್ ಶೋಗಳನ್ನ ನಿರ್ಮಿಸುವ ಯೋಜನೆ ಇದೆ ಎಂದು ಬನಿಜಯ್ ಏಷ್ಯಾ ಕಂಪನಿಯ ಬ್ಯುಸಿನೆಸ್ ಹೆಡ್ ರಾಜೇಶ್ ಚಡ್ಡಾ ಮತ್ತು ಸೌತ್ ಅಸೋಸಿಯೇಟೆ ಪ್ರೆಸಿಡೆಂಟ್ ಜಗದೀಶ್ ಪಾಟೀಲ್ ಅವರು ತಿಳಿಸಿದರು.
“ರಾಣಿ” ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.