ವಿಭಿನ್ನ ಪ್ರೇಮ ಕಥೆಯ “ಮೋಡ ಕವಿದ ವಾತಾವರಣ” ಚಿತ್ರದ ಟೀಸರ್ ಬಿಡುಗಡೆ
“ಒಂದು ಸರಳ ಪ್ರೇಮಕಥೆ ಸಿನಿಮಾ” ಬಳಿಕ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆಯಿಂದ ಬರುತ್ತಿರುವ ಚಿತ್ರ “ಪ್ರೇಮ ಕಥೆ ಮೋಡ ಕವಿದ ವಾತಾವರಣ” ಚಿತ್ರ ಇದೇ 26 ರಂದು ಬಿಡುಗಡೆಯಾಗಲಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಈ ಚಿತ್ರದ ಮೂಲಕ ಸಿಂಪಲ್ ಸುನಿ ತಮ್ಮ ಗರಡಿ ಹುಡುಗ ಶೀಲಮ್ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯ ಮಾಡುತ್ತಿದ್ದಾರೆ. ಶೀಲಮ್ ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಮೋಡ ಕವಿದ ವಾತಾವರಣದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.
ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ಚಿತ್ರದ ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಈ ಚಿತ್ರದ ಚಾಲೆಂಜ್ ಏನೂ ಎಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ ಎನ್ನುವುದು ಗೊತ್ತು. ಚಿತ್ರದ ಅರ್ಧ ಪಾರ್ಟ್ ಥಿಯೇಟರ್ ನಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ ನಲ್ಲಿಯೇ ನೋಡಬೇಕು. ಹೀಗಾಗಿ ಅರ್ಧ ಸಿನಿಮಾದಲ್ಲಿ ಟ್ರೇಲರ್ ಕಟ್ ಮಾಡಬೇಕು. ನಾಯಕ ಶೀಲಮ್ ಚೆನ್ನಾಗಿ ನಟಿಸಿದ್ದಾರೆ. ಒಂದು ಸರಳ ಪ್ರೇಮ ಕಥೆ ಆದ್ಮೇಲೆ ನಿರ್ಮಾಪಕ ರಮೇಶ್ ಸರ್ ನಮ್ಮ ಟೀಂ ಜೊತೆ ಕೈ ಜೋಡಿಸಿರುವುದಕ್ಕೆ ಪಾಸಿಟಿವ್ ವೈಬ್ಸ್ ಇದೆ ಎಂದರು.

ನಾಯಕ ಶೀಲಮ್ ಮಾತನಾಡಿ, ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಹೀರೋ ಟೀಸರ್ ಎಲ್ಲರಿಗೂ ಇಷ್ಟವಾಗಿz=ದೆ. ಹೀರೋ ಎಂದರೆ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ದರೂ ಆಗಲು ಆಗುವುದಿಲ್ಲ. ಡ್ಯಾನ್ಸ್, ಫೈಟ್ ಬರುತ್ತೆ. ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ದರು ನಾನು ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ ಎಂದು ಹೇಳಿದರು

‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್ ಅವರೆ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ ಸಿನಿಮಾಗಿದೆ.

