Exclusive interview : ನಾನೊಬ್ಬ ನಿರ್ದೇಶಕರ ನಟ: ವಿನೋದ್ ಪ್ರಭಾಕರ್ ಕೈಯಲ್ಲಿ ಸಾಲು ಸಾಲು ಚಿತ್ರಗಳು
ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಟೈಗರ್ ಪ್ರಭಾಕರ್ ಪುತ್ರ ಮರಿ ಟೈಗರ್ ಎಂದೇ ಖ್ಯಾತಿ ಪಡೆದಿರುವ ನಟ ವಿನೋದ್ ಪ್ರಭಾಕರ್ ಚಿತ್ರರಂಗ ನಂಟಿನೊಂದಿಗೆ ಬೆಳದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಂಡಿತು. ಕಷ್ಟದ ದಿನಗಳನ್ನೆ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಬ್ಯುಸಿ ನಟರಾಗಿದ್ದಾರೆ. ಜೊತೆಗೆ ನಿರ್ಮಾಪಕರೂ ಆಗಿದ್ದಾರೆ.
“ ಬೆಚ್ಚನೆ ಮನೆ ಇರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಚೆಯನರಿವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚ ಹಚ್ಚಂದ
ಸ್ವರ್ವಜ್ಞ…….

ದಾರ್ಶನಿಕರ ವಾಣಿ, ನಟ ವಿನೋದ್ ಪ್ರಬಾಕರ್ ಅವರಿಗೆ ಅಕ್ಷರಷಃ ಅನ್ವಯವಾಗಲಿದೆ. ಕಷ್ಟದ ದಿನಗಳಲ್ಲಿ ಬದುಕಿಗೆ ಬೆಳಕಾಗಿ ಬಂದು, ನಾ ಇದ್ದೇನೆ ಹೆದರಬೇಡ ಮುನ್ನುಗ್ಗು ಎಂದು ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚು ಮಾಡಿ, ಪ್ರೀತಿಸಿದ ಹುಡಗನ್ನೇ ಮದುವೆಯಾಗಿ ಚಿತ್ರರಂಗದಲ್ಲಿ ನೆಲೆ ನಿಂತುಕೊಳ್ಳುವಂತೆ ಮಾಡುವಲ್ಲಿ ಬೆಂಗಾವಲು ಮತ್ತು ಬೆನ್ನಲುಬಾಗಿ ಅವರೇ ನಿಶಾ ವಿನೋದ್ ಪ್ರಭಾಕರ್.
ಪ್ರಭಾಕರ್ ಎನ್ನುವ ದೈತ್ಯ ಶಕ್ತಿ ಜೊತೆಗಿದ್ದರೂ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಪರದಾಡಿದ ನಟ ವಿನೋದ್ ಪ್ರಭಾಕರ್ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿವೆ. ಒಂದರ ಹಿಂದೆ ಒಂದು ಬಿಡುಗಡೆಗೆ ಸಜ್ಜಾಗಿವೆ. ಅದರಲ್ಲಿ ಮೊದಲಿಗೆ “ಫೈಟರ್ “ಚಿತ್ರ ತೆರೆಗೆ ಬರಲಿದೆ.
“ಫೈಟರ್” ಚಿತ್ರದ ವಿಡಿಯೋ ಹಾಡು ಬಿಡುಗಡೆ ಬಳಿಕ ಮಾತಿಗೆ ಸಿಕ್ಕ ನಟ ವಿನೋದ್ ಪ್ರಭಾಕರ್ ಜೀವನದ ಅನೇಕ ಸಂಗತಿಗಳನ್ನು ಅನಾವರಣ ಮಾಡಿ, ತನ್ನ ಗೆಲುವಿಗೆ, ಈ ಮಟ್ಟಕ್ಕೆ ಬೆಳೆದು ನಿಲ್ಲಲು ಪತ್ನಿ ನಿಶಾ ಅವರೇ ಕಾರಣ ಎನ್ನುತ್ತಲೇ ಭಾವುಕರಾದರು. ಈ ಮೂಲಕ ಪತ್ನಿ ಮೇಲೆ ಗೌರವ ಮತ್ತು ಪ್ರೀತಿ ಅವರ ಪ್ರತಿ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

ಬದುಕಿಗೆ ಬೆಳೆಗಾಗಿ ಬಂದ ಪತ್ನಿ ನಿಶಾ:
ಚಿತ್ರರಂಘಕ್ಕೆ ಬಂಡ ಎಲ್ಲವೂ ಅರಿವಾಗುವ ವೇಳೆಗೆ ಮೂರು ಸಿನಿಮಾ ಮಾಡಿದ್ದೆ. ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದು ಗೊತ್ತಿರಲಿಲ್ಲ. ಆ ಬಳಿಕ “ ಮೂರು ವರ್ಷ ಸಿನಿಮಾ ಇರಲಿಲ್ಲ. ಹೊಸಕರೆಹಳ್ಳಿ ಮನೆಯಲ್ಲಿ ಕಿಟಕಿ ಬಾಗಿಲು ಮುಂದೆ ದಿನಾ ಬೆಳಗಾದರೆ ಕೆಲಸಕ್ಕೆ ಹೋಗಿ ಬರುವವರನ್ನು ನೋಡಿ ಕಾಲ ಕಳೆದಿದ್ದೇನೆ. ಕೆಲಸವಿಲ್ಲ ,ಕೈಯಲ್ಲಿ ಕಾಸಿಲ್ಲ. ಅಮ್ಮ, ಎದ್ದೋಗಿ ತಿಂಡಿ ತಿನ್ನು ಅನ್ನುವ ತನಕ ಕಿಟಕಿ ಬಾಗಿಲ ಬಳಿಯೇ ಕುಳಿತುಕೊಳ್ಳುತ್ತಿದ್ದೆ.
ನಾನು ಏನೂ ಅಲ್ಲದಿದ್ದಾಗ, ನನ್ನ ಬಳಿ ಹಣವಿಲ್ಲದಾಗಲೂ ಪ್ರೀತಿಸಿದ ಹುಡುಗಿ ಕೈ ಹಿಡಿದು ಮುನ್ನೆಡೆಸಿದ್ದಾರೆ. ಕಷ್ಟದಲ್ಲಿದ್ದಾಗಲೂ ಯಾವುದಕ್ಕೂ ಗಮನ ಕೊಡದೆ ಬೆನ್ನೆಲುಬಾಗಿ ನಿಂತು, ಜೀವನದ ಅರ್ಧಾಂಗಿಯಾಗಿ ಬಂದು ಬದುಕು ಸರಿತೂಗಿಸಿಕೊಂಡು ಹೋಗುತ್ತಿದ್ದಾರೆ. ಇಂದು ಬದುಕಿನಲ್ಲಿ ,ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ಪತ್ನಿ ನಿಶಾ ಕಾರಣ ಎಂದರು.
ಪತ್ನಿ ನಿಶಾ ಚಿತ್ರರಂಗದಲ್ಲಿ ಸರಿ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಸಿ, ಜೀವನ ಅಂದ್ರೆ ಹಾಗಲ್ಲ, ಹೀಗೆ ಎನ್ನುವುದನ್ನು ಪರಿಚಯ ಮಾಡಿದಾಕೆ. ನಟನನ್ನು ನಿರ್ಮಾಪಕನ್ನಾಗಿ ಮಾಡಿದ್ದಾರೆ. ಬದುಕಿನಲ್ಲಿ ಬಂದ ಭಾಗ್ಯದ ಬೆಳಕು ನಿಶಾ ಎನ್ನುವ ಭಾವ ವ್ಯಕ್ತಪಡಿಸಿದರು.

ನಾನೊಬ್ಬ ನಿರ್ದೇಶಕರ ನಟ:
ನಿರ್ದೇಶಕರು ಹೇಗೆ ಹೇಳುತ್ತಾರೋ ಹಾಗೆ ಮಾಡುವುದು ನನ್ನ ಕೆಲಸ. ನಾನೊಬ್ಬ ನಿರ್ದೇಶಕನ ನಟ. ಚಿತ್ರದಲ್ಲಿ ಕಥೆ, ಸನ್ನಿವೇಶ ಹೇಗಿರುತ್ತದೆಯೋ ಹಾಗೆ ನಟಿಸುತ್ತೇನೆ. ಫೈಟರ್ ಚಿತ್ರದಲ್ಲಿ “ಐ ವಾಂಟ್ ಫಾಲೋ ಯೂ” ಹಾಡಿನಲ್ಲಿಯೂ ಕೂಡ ಕಥೆ ಬಯಸಿದ ಹಾಗೆ ನಿರ್ದೇಶಕರು ಹೇಳಿದ ಹಾಗೆ ಕೆಲಸ ಮಾಡಿದ್ದೇನೆ
ನನ್ನ ಸಾಮರ್ಥ್ಯ ನನಗೆ ಗೊತ್ತಿದೆ:
ನನ್ನ ಚಿತ್ರಗಳಿಗೆ ಎಷ್ಟು ಬಂಡವಾಳ ಹಾಕಿದರೆ ಅದು ಮರಳಿ ಬರುತ್ತದೆ ಎನ್ನುವ ಸಾಮಥ್ರ್ಯದ ಅರಿವು ನನಗಿದೆ. ಹೀಗಾಗಿ ಯಾರಾದರೂ 10 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನೇ ಬೇಡ ಎನ್ನುತ್ತೇನೆ. ಐದಾರು ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡಿ ಎನ್ನುತ್ತೇನೆ. ನಿರ್ಮಾಪಕ ಹಾಕಿದ ಬಂಡವಾಳ ವಾಪಸ್ ಬರಬೇಕು,ಅದುವೇ ನನ್ನ ಗುರಿ, ನನ್ನ ಸಾಮಥ್ರ್ಯಕ್ಕಿಂತ 25 ರಿಂದ 50 ಲಕ್ಷ ಮಾತ್ರ ಹಾಕಿ ಅದರ ಮೇಲೆ ಹಾಕಬೇಡಿ ಎಂದು ಹೇಳುತ್ತೇನೆ.

10 ಕೋಟಿ ಬಂಡವಾಳ ಹಾಕಿ 5ರಿಂದ 6 ಕೋಟಿ ಹಣ ವಾಪಸ್ ಬಂದರೆ ನಿರ್ಮಾಪಕರಿಗೆ ನಾಲ್ಕೈದು ಕೋಟಿ ನಷ್ಟವಾಗುತ್ತದೆ. ಇದರಿಂದ ಆ ನಿರ್ಮಾಪಕ ನನಗೆ ಮತ್ತೆ ಚಿತ್ರ ನಿರ್ಮಾಣ ಮಾಡುವುದಿಲ್ಲ. ಜೊತೆಗೆ ನನಗಾಗಿ ಚಿತ್ರ ನಿರ್ಮಾಣ ಮಾಡಲು ಮುಂದಾಗುವ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹಾಕಲು ಹಿಂಜರಿಯುತ್ತಾರೆ. ಹೀಗಾಗಿ ನಿರ್ಮಾಪಕನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದರು.
ಕೆರಿಯರ್ನಲ್ಲಿ ಮೊದಲ ಯಶಸ್ವಿ ಚಿತ್ರ ಟೈಸನ್:
ಟೈಸನ್ ಚಿತ್ರದಿಂದ ಹೆಚ್ಚು ಲಾಭವಾಗಿದೆ, ಹೀಗಾಗಿ ಆ ನಿರ್ಮಾಪಕ ಬಾಬು ರೆಡ್ಡಿ ಅವರು ಯಾವಾಗ ಬಂದರೂ ಆವರಿಗಾಗಿ ಸಿನಿಮಾ ಮಾಡುತ್ತೇನೆ. ಅವರು ಬಂಡವಾಳ ಹಾಕದಿದ್ದರೂ ಸರಿ ಅವರ ಬ್ಯಾನರ್ ಹೆಸರಲ್ಲಿ ನಿರ್ಮಾಣ ಮಾಡಲು ನಾವೇ ಬಂಡವಾಳ ಹಾಕಿ ಬಂದ ಲಾಭದಲ್ಲಿ ಶೇರು ಕೊಡುತ್ತೇವೆ ಎನ್ನುವ ದೊಡ್ಡ ಗುಣ ಪ್ರದರ್ಶಿಸಿದರು ವಿನೋದ್ ಪ್ರಭಾಕರ್.
ನನ್ನ ಕೆರಿಯರ್ನಲ್ಲಿ ಯಶಸ್ಸು ಕಂಡ ಮೊದಲ ಚಿತ್ರ ಟೈಸನ್, ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾರ್ ಕ್ಲಾಪ್ ಮಾಡಿ ಹಸಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಟೈಗರ್ ಟಾಕೀಸ್ನಿಂದ ಮೊದಲ ನಿರ್ಮಾಣ:
“ಟೈಗರ್ ಟಾಕೀಸ್ ಅಡಿ ನಿರ್ಮಾಣ ಮಾಡಿರುವ ಲಂಕಾಸುರ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ನಿರ್ಮಾಣ ಮಾಡುವ ಸಮಯದಲ್ಲಿ ದುಡ್ಡಿಗಾಗಿ ಯಾರೆಲ್ಲಾ ಮನೆ ಮುಂದೆ ಬೆಳ್ಳಂ ಬೆಳಗ್ಗೆ ಪತ್ನಿ ಜೊತೆ ಹೋಗಿದ್ದೇವೆ ಕೆಲವರು, ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ನೈತಿಕವಾಗಿ ಬೆಂಬಲಕ್ಕೆ ನೀಡಿದ್ದಾರೆ. ಇನ್ನೂ ಕೆಲವರು ತಂತ್ರಜ್ಷರು ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಅದನ್ನು ಮರೆಯಲು ಸಾಧ್ಯವಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ ಡಿಸೆಂಬರ್ನಲ್ಲಿ ತೆರೆಗೆ ತರುವ ಉದ್ದೇಶವಿದೆ.
ಮತ್ತೊಮ್ಮೆ ಡಿ ಬಾಸ್ ಜೊತೆ ಸಿನಿಮಾ
“ನವಗ್ರಹ” ಚಿತ್ರದ ಬಳಿಕ “ರಾಬರ್ಟ್” ಚಿತ್ರದಲ್ಲಿ ದರ್ಶನ್ ಸಾರ್ ಜೊತೆ ಕೆಲಸ ಮಾಡಿದ್ದೇನೆ, ಅವಕಾಶ ಮತ್ತು ಒಳ್ಳೆಯ ಕಥೆ ಹೊಂದಿಕೆಯಾಗುವ ಪಾತ್ರ ಸಿಕ್ಕರೆ ಕಂಡಿತಾ ಡಿ ಬಾಸ್ ಜೊತೆ ಸಿನಿಮಾ ಮಾಡುವೆ ಎಂದಿದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕುಡಿ ಬಾಸ್ ಜೊತೆ ಈಗ ಮಾಡಿರುವ ಎರಡೂ ಚಿತ್ರಗಳು ಒಳ್ಳೆಯ ಹೆಸರು ತಂದಿಕೊಟ್ಟಿವೆ. ಜೊತೆಗೆ ಮೇಲಾಗಿ ದರ್ಶನ್ ಸಾರ್ ಅವರ ಅಭಿಮಾನ, ವಿಶ್ವಾಸ ಗಳಿಸಿದ್ದೇನೆ. ಅವರನ್ನು ಬಾಸ್ ಎಂದೇ ಕರೆಯುವುದು. ಅವರು ಟೈಗರ್ ಎನ್ನುತ್ತಾರೆ. ಇಬ್ಬರ ನಡುವಿನ ಬಾಂಧವ್ಯ ಚೆನ್ನಾಗಿದೆ. ಅದನ್ನು ಕೊನೆ ತನಕ ಕಾಪಾಡಿಕೊಳ್ಳಲಾಗುವುದು.
ಚಿತ್ರದ ಪ್ರೊಡಕ್ಷನ್ ಸಂಸ್ಥೆ ಆರಂಭ ಮಾಡ್ತೇನೆ ಎಂದಾಗ ಡಿ ಬಾಸ್ ಖುಷಿಯಿಂದ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಯಾವಾಗ ನನ್ನ ಕಡೆ ಸಹಾಯ ಬೇಕು ಬಾ ಎನ್ನುವ ದೊಡ್ಡ ಗುಣ ಪ್ರದರ್ಶಿಸಿದ್ದಾರೆ. ಅದರ ಪ್ರೀತಿಯ,ಬೆಂಬಲವೇ ನನಗೆ ಶ್ರೀರಕ್ಷೆ, ಹೀಗಾಗಿ ಒಮ್ಮೆಯೂ ಹಣಕಾಸಿನ ವಿಷಯ ಅವರ ಬಳಿ ಪ್ರಸ್ತಾಪ ಮಾಡಿಲ್ಲ. ನಾನು ಅವರನ್ನು ಬಾಸ್ ಎಂದೇ ಕರೆಯುವುದು ಅವರು ಟೈಗರ್ ಎನ್ನುತ್ತಾರೆ. ನಮ್ಮಿಬ್ಬರ ಮಧ್ಯೆ ಅವರು ಹಿರಿಯಣ್ಣನ ಸ್ಥಾನದಲ್ಲಿದ್ದಾರೆ.
ಬಿರುದು ಬಾವಲಿಗಳಿಂದ ಕರೆಯಬೇಡಿ:
ನನ್ನನ್ನು ಅಭಿಮಾನಿಗಳು ಮರಿ ಟೈಗರ್ ಸೇರಿದಂತೆ ಯಾವುದೇ ಬಿರುದುಗಳಿಂದ ಕರೆಯಬೇಡಿ, ಬರೀ ವಿನೋದ್ ಪ್ರಭಾಕರ್ ಎಂದು ಕರೆಯಿರಿ ಸಾಕು. ನಿಮ್ಮ ಅಭಿಮಾನ, ಪ್ರೀತಿಗೆ ಸದಾ ಚಿರಋಣಿ. ಸಾಮಾನ್ಯ ನಟನಾಗಿ ಅಭಿಮಾನಿಗಳು ಹೃದಯ ಗೆಲ್ಲಬೇಕು ಎನ್ನುವ ಆಸೆ ಮತ್ತು ಗುರಿ ನನ್ನದು ಎಂದರು

“ಫೈಟರ್” ಚಿತ್ರ ಬಿಡುಗಡೆ ಸಜ್ಜು
ಸದ್ಯ ಸಾಲು ಸಾಲು ಚಿತ್ರಗಳು ಕೈಯಲ್ಲಿವೆ. ಈ ಹಂತಕ್ಕೆ ಬರಲು ಪರಿಶ್ರಮ ಅಷ್ಟಿಷ್ಟಲ್ಲ. ಚಿತ್ರರಂಗದಲ್ಲಿ ಮೊದಲಿಗೆ ನಾನೊಬ್ಬ “ಫೈಟರ್”. ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದರು ನಟ ವಿನೋದ್ ಪ್ರಭಾಕರ್.
ಮುಂದಿನ ತಿಂಗಳು ಫೈಟರ್ ಚಿತ್ರ ತೆರೆಗೆ ಬರಲಿದೆ.ಆದಾದ ನಂತರ ಟೈಗರ್ ಟಾಕೀಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಿರುವ “ ಲಂಕಾಸುರ” ನವಂಬರ್ ಅಥವಾ ಡಿಸೆಂಬರ್ನಲ್ಲಿ ತೆರೆಗೆ ತರುವ ಉದ್ದೇಶಹೊಂದಲಾಗಿದೆ. “ಮಾದೇವ “ತೆರೆಗೆ ಬರಲಿವೆ ಇದರ ಜೊತೆಗೆ ಇನ್ನಷ್ಟು ಹೊಸ ಯೋಜನೆಗಳಿವೆ ಅವುಗಳನ್ನು ಮುಂದಿನ ದಿನದಲ್ಲಿ ವಿವಿರ ನೀಡಲಾಗುವು ಎಂದು ಹೇಳಿದರು

ಫೈಟರ್ ಆಗುವ ಕನಸು ಕಂಡಿದ್ದದವನು ನಾನು ನಟನಾಗಿದ್ದೇನೆ. ಜಾಕಿಚಾನ್, ಬ್ರೂಸ್ಲಿ ಅವರನ್ನು ನೋಡಿ ಸಾಹಸ ದೃಶ್ಯಗನ್ನು ಕಲಿತುಕೊಂಡಿದ್ದೇನೆ. ಕನ್ನಡಲ್ಲಿ ಅಣ್ಣಾವ್ರ, ಅಂಬರೀಷಣ್ಣ, ವಿಷ್ಣು ಸಾರ್, ಶಂಕರಣ್ಣ ಅವರ ಸಿನಿಮಾಗಳು ಸ್ಪೂರ್ತಿ ನೀಡಿವೆ ಎಂದಿದ್ದಾರೆ
ಮೊದಲ ನಿರ್ಮಾಣದಲ್ಲಿ ಎಲ್ಲರನ್ನೂ ಪ್ರೀತಿಯಿಂದ ನೋಡಿದ್ದೇವೆ:
ನಮ್ಮದೇ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ನಲ್ಲಿ ಮೂಡಿ ಬಂದಿರುವ “ಲಂಕಾಸುರ” ಚಿತ್ರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ದುಡ್ಡು ಕಡಿಮೆ ಕೊಟ್ಟಿಲ್ಲ, ನಾವು ಏನೂ ಊಟ ಮಾಡುತ್ತೇಯೋ ಅದನ್ನು ಇಡೀ ಸೆಟ್ಗೆ ಕೊಟ್ಟಿದ್ದೇವೆ. ನಮ್ಮೊಂದಿಗೆ ಅವರೂ ಚೆನ್ನಾಗಿ ಇರಬೇಕೆನ್ನುವ ಆಸೆ ನಮ್ಮದು ಎಂದರು.
ಚಿತ್ರೀಕರಣ ಸೆಟ್ನಲ್ಲಿ ಊಟ ಮಿಕ್ಕರೆ ಅದನ್ನು ವೇಸ್ಟ್ ಮಾಡಲು ಬಯಸುವುದಿಲ್ಲ, ಅನಾಥಾಶ್ರಮಕ್ಕೆ ಕಳುಹಿಸಿಕೊಡುತ್ತೇವೆ. ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದವರು ಕೆಲಸ ಮುಗಿದ ನಂತರ ಕ್ಯಾರವಾನ್ ಬಂದು ಹಣ ಪಡೆಯಬೇಕು. ಕೆಲಸ ಮಾಡಿದ್ದೂ ಅಲ್ಲದೆ ಅವರು ಕೈ ಕಟ್ಟಿ ನಿಲ್ಲುವುದು ಇಷ್ಟವಿಲ. ಎಲ್ಲರನ್ನು ಒಂದೇ ರೀತಿ ನೋಡುತ್ತೇವೆ ಎಂದರು
ನಿರ್ದೇಶನ ಮಾಡುವ ಆಸೆ ಇದೆ

ಮರಿ ಟೈಗರ್ ಚಿತ್ರ ನಿರ್ದೇಶನ ಮಾಡುವ ವೇಳೆ ಹಿರಿಯ ನಿರ್ದೇಶಕ ಪಿ.ಎನ್ ಸತ್ಯ ಅವರು ನಿನ್ನಲ್ಲಿ ನಿರ್ದೇಶಕ ಇದ್ದಾನೆ ಮುಂದೊಂದು ದಿನ ಅವಕಾಶ ಸಿಕ್ಕರೆ ನಿರ್ದೇಶನ ಮಾಡು ಎಂದು ಹುರುದುಂಬಿಸಿದವರು ಪಿ,ಎನ್ ಸತ್ಯ. ಅವಕಾಶ ಮತ್ತು ಒಳ್ಳೆಯ ಕಥೆ ಸಿಕ್ಕರೆ ನಿರ್ದೇಶನ ಮಾಡುವೆ
ಪಿ ಆರ್ ಕೆ ಪ್ರೊಡಕ್ಷನ್ ಮಾದರಿ
ಪಿಆರ್ಕೆ ಪ್ರೊಡಕ್ಷನ್ ಮಾದರಿಯಲ್ಲಿ ಹೊಸಬರಿಗೂ ನಮ್ಮ ನಿರ್ಮಾಣ ಸಂಸ್ಥೆಯಿಂದ ಚಿತ್ರ ನಿರ್ಮಿಸುವ ಗುರಿ ಇದೆ. ಈ ಮೂಲಕ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಡುವ ಜೊತೆಗೆ ಒಳ್ಳೆಯ ಕಂಟೆಂಟ್ಗಳಿಗೂ ಆದ್ಯತೆ ನೀಡುವುದು ನಮ್ಮ ಉದ್ದೇಶ ಎಂದರು.

