ರಾಜಕೀಯ ವಿಡಂಬನೆಯ ಚಿತ್ರ “ಪಾಲಿಟಿಕ್ಸ್ ಕಲ್ಯಾಣ” ಶೀಘ್ರ ತೆರೆಗೆ
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟಲ್ ಚಿತ್ರಗಳದೇ ಕಾರುಬಾರು. ಅಂತಹ ವಿಭಿನ್ನ ಕಂಟೆಂಟ್ ವುಳ್ಳ “ಪಾಲಿಟಿಕ್ಸ್ ಕಲ್ಯಾಣ”ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಐಪ್ಲಿಕ್ಸ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಹಾಗೂ ವಿ.ಮನೋಹರ್ ಹಾಡುಗಳನ್ನು ಬಿಡುಗಡೆ ಮಾಡಿ ಶುಭಹಾರೈಸಿದರು.
ನಿರ್ದೇಶಕ ಕವಿ ರಾಜೇಶ್, ನಮ್ಮ ಚಿತ್ರದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿದಂತೆ ಅನೇಕ ಕಲಾವಿದರ ದಂಡೆ ಇದೆ. ಕೇವಲ ಐದು ದಿನಗಳಲ್ಲಿ ಒಂದೇ ಕಲ್ಯಾಣ ಮಂಟಪದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಡಿಸೆಂಬರ್ ನಲ್ಲಿ ತೆರೆಗೆ ತರುವ ಪ್ರಯತ್ನ ನಡೆಯತ್ತಿದೆ ಎಂದರು.
ನನ್ನ ನಿರ್ಮಾಣದ ಮೊದಲ ಚಿತ್ರವಿದು. ಉತ್ತಮ ಕಥೆಯುಳ್ಳ ಚಿತ್ರವೂ ಹೌದು. ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ವೀಕ್ಷಿಸಿ. ಕನ್ನಡ ನಿರ್ಮಾಪಕರನ್ನು ಉಳಿಸಿ ಎಂದರು ನಿರ್ಮಾಪಕ ಗಣೇಶ್ ಕೃಷ್ಣಮೂರ್ತಿ.
ಜೆ.ಎಂ.ಪ್ರಹ್ಲಾದ್ ಅವರು ಉತ್ತಮ ಕಥೆ ಬರೆದಿದ್ದಾರೆ. ರಾಜಕೀಯ ವಿಡಂಬನೆಯ ಕಥೆಯನ್ನು ಹಾಸ್ಯದ ಮೂಲಕ ನಿರ್ದೇಶಕ ಕವಿ ರಾಜೇಶ್ ತೋರಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ವಿ.ಮನೋಹರ್.
ಸಂಗೀತ ನಿರ್ದೇಶನದೊಂದಿಗೆ ಛಾಯಾಗ್ರಹಣ ಹಾಗೂ ಸಂಕಲನವನ್ನು ಮಾಡಿರುವ ರೋಹನ್ ದೇಸಾಯಿ, ನೃತ್ಯ ನಿರ್ದೇಶಕರಾದ ತ್ರಿಭುವನ್, ಪ್ರಭು ಮಾಸ್ಟರ್ ಹಾಗೂ ಕಲಾವಿದರಾದ ದತ್ತಾತ್ರೇಯ ಕುರುಹಟ್ಟಿ , ಸಸ್ಯ ಹಾಗೂ ವಿಜಯ ಭಾಸ್ಕರ್ ಚಿತ್ರದ ಕುರಿತು ಮಾತನಾಡಿದರು.
ಕನ್ನಡದಲ್ಲಿ ರಾಜಕೀಯ ಕುರಿತಾದ ಚಿತ್ರಗಳು ಸಾಕಷ್ಟು ಬಂದಿದೆ ಹಾಗೂ ಬರುತ್ತಿದೆ. ಆದರೆ ರಾಜಕೀಯ ವಿಡಂಬನೆಯ ಕುರಿತಾದ ಚಿತ್ರಗಳು ಕಡಿಮೆ. “ಪಾಲಿಟಿಕ್ಸ್ ಕಲ್ಯಾಣ” ರಾಜಕೀಯ ವಿಡಂಬನೆಯ ಕುರಿತಾದ ಚಿತ್ರ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ಮಿಸಿರುವ ಗಣೇಶ್ ಕೃಷ್ಣಮೂರ್ತಿ ಈ ಚಿತ್ರದ ನಿರ್ಮಾಪಕರು. ನಾನು ಹೇಳಿದ ಕಥೆ ಮೆಚ್ಚಿ ಗಣೇಶ್ ಅವರು ನಿರ್ಮಾಣ ಮಾಡಿದರು. ಕವಿ ರಾಜೇಶ್ ಈ ಚಿತ್ರದ ನಿರ್ದೇಶಕರು. ಚಿತ್ರ ಬಿಡುಗಡೆಗೆ ಸಿದ್ದವಾಗಿದೆ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ತಿಳಿಸಿದರು.
ಪಂಕಜ್ ಎಸ್ ನಾರಾಯಣ್, ವಿ.ಮನೋಹರ್, ಶಂಕರ್ ಅಶ್ವಥ್, ಮಿಮಿಕ್ರಿ ಗೋಪಿ, ಗಿರಿಜಾ ಲೋಕೇಶ್, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟಿ, ಸುನೇತ್ರ ಪಂಡಿತ್, ಹನುಮಂತೇ ಗೌಡ, ಪಾಪ ಪಾಂಡು ಚಿದಾನಂದ್, ನಾಗೇಂದ್ರ ಶಾ, ಸಸ್ಯ, ವಿಜಯ ಭಾಸ್ಕರ್, ನಿಶ್ಚಿತ ಶೆಟ್ಟಿ, ರಜನಿ, ತನುಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.