ಮಾರ್ಚ್ 22 ರಂದು “ಅವತಾರ ಪುರುಷ 2” ಚಿತ್ರ ತೆರೆಗೆ: ಮತ್ತೆ ಕಮಾಲ್ ಮಾಡಲು ಸಜ್ಜು

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ “ಅವತಾರ ಪುರುಷ 2” ಚಿತ್ರ ಮಾರ್ಚ್ 22 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಮೂಲಕ ಈ ಜೋಡಿ ಮತ್ತೆ ಕಮಾಲ್ ಮಾಡಲು ಸಜ್ಜಾಗಿದೆ.

ನಿರ್ದೇಶಕ ಸಿಂಪಲ್ ಸುನಿ, ಎರಡು ವರ್ಷಗಳಿಂದ ಸ್ನೇಹಿತರು ಹಾಗೂ ಅಭಿಮಾನಿಗಳು “ಅವತಾರ ಪುರುಷ 2” ಯಾವಾಗ ರಿಲೀಸ್ ಎಂದು ಕೇಳುತ್ತಿದ್ದರು. ಈಗ ನಮ್ಮ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಇದೇ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಭಾಗ ನೋಡಿದವರಿಗು ಹಾಗೂ ನೋಡದವರಿಗೂ ಈ ಚಿತ್ರ ಇಷ್ಟವಾಗುವುದಂತು ಖಂಡಿತ. ಅಂತಹ ಉತ್ತಮ ಮನೋರಂಜನಾ ಚಿತ್ರವಿದು.
ಶರಣ್ ಅವರು ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಕುಮಾರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲಾವಿದರ ಹಾಗೂ ತಾಂತ್ರಿಕವರ್ಗದವರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು.

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿ, “ಅವತಾರ ಪುರುಷ 2” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೋಹನ್ ಅವರು ಚಿತ್ರದ ವಿತರಣೆ ಮಾಡುತ್ತಿದ್ದಾರೆ. ನೋಡುಗರಿಗೆ ಈ ಚಿತ್ರ ಮನೋರಂಜನೆಯ ರಸದೌತಣ ನೀಡುವುದು ಖಚಿತ. ಸದ್ಯದಲ್ಲೇ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು
ನಾಯಕ ಶರಣ್ ಮಾತನಾಡಿ , ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸಿನಿಮಾ ಪ್ರೀತಿ ನನಗೆ ಬಹಳ ಇಷ್ಟ ನನ್ನನ್ನು ಕೂಡ ಬಹಳಷ್ಟು ಜನ “ಅವತಾರ ಪುರುಷ 2” ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದರು. ಚಿತ್ರದ ಎರಡನೇ ಭಾಗ ಇಷ್ಟು ಕುತೂಹಲ ಹುಟ್ಟಿಸಿದೆ ಎಂದರೆ ನಿಜಕ್ಕೂ ಮೊದಲ ಭಾಗ ಎಲ್ಲರಿಗೂ ಇಷ್ಟವಾಗಿದೆ ಎಂದು ಅರ್ಥ. ನಾನು, ನನ್ನ ಯಾವ ಸಿನಿಮಾವನ್ನು ಮೊದಲು ನೋಡುವುದಿಲ್ಲ. ಅಭಿಮಾನಿಗಳ ಜೊತೆಗೆ ಚಿತ್ರಮಂದಿರದಲ್ಲೇ ನೋಡುತ್ತೇನೆ. ಈ ಚಿತ್ರವನ್ನು ನೋಡಲು ನಾನು ಸಹ ಕಾತುರದಿಂದ ಕಾಯುತ್ತಿದ್ದೇನೆ. ಕೆಲವರು ಚಿತ್ರ ಸ್ವಲ್ಪ ತಡವಾಯಿತು ಎನ್ನುತ್ತಿದ್ದಾರೆ. ಹಾಗೆನಿಲ್ಲ. ಮೊದಲ ಭಾಗ ಕೂಡ 22 ರಲ್ಲೇ ಬಿಡುಗಡೆಯಾಗಿತ್ತು. ಇದು ಕೂಡ 22 ರಂದೆ ಬಿಡುಗಡೆಯಾಗುತ್ತಿದೆ. ಮೊದಲ ಭಾಗ 2022 ರಲ್ಲಿ. ಎರಡನೇ ಭಾಗ 2024 ರ ಮಾರ್ಚ್ 22 ರಂದು ಎಂದರು.

ನಾಯಕಿ ಆಶಿಕಾ ರಂಗನಾಥ್ ಬಹಳ ದಿನಗಳ ನಂತರ ನನ್ನ ಅಭಿನಯದ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದೆ. ಒಳ್ಳೆಯ ತಂಡದೊಂದಿಗೆ ಚಿತ್ರ ಮಾಡಿರುವ ಖುಷಿಯಿದೆ. ದಯವಿಟ್ಟು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು
ನಟ ಶ್ರೀನಗರ ಕಿಟ್ಟಿ ಮಾತನಾಡಿ ಈ ಚಿತ್ರದಲ್ಲಿ ಕುಮಾರ ಎಂಬ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಹೇಳಿದರು.

150 ರಿಂದ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ವಿತರಕ ಮೋಹನ್ ತಿಳಿಸಿದರು. ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ವಿಲಿಯಂ ಡೇವಿಡ್ ಮಾಹಿತಿ ನೀಡಿದರು.