“ಅಣ್ಣ ಫ್ರೆಂ ಮೆಕ್ಸಿಕೋ” ಚಿತ್ರದಲ್ಲಿ ಮತ್ತೆ ಜೊತೆಯಾದ “ಬಡವ ರಾಸ್ಕಲ್” ಜೋಡಿ

ಚಿತ್ರರಂಗದಲ್ಲಿ ಬಡವರ ಮಕ್ಕಳು ಬೆಳಿಬೇಕು ಎನ್ನುವ ಕಾಳಜಿ, ಕಳಕಳಿ ಹೊಂದಿರುವ ಡಾಲಿ ಧನಂಜಯ ಅವರು ನಿರ್ಮಾಣ ಮಾಡಿದ್ದ “ ಬಡವ ರಾಸ್ಕಲ್ “ ಚಿತ್ರವನ್ನು ಶಂಕರ್ ಗುರು ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ಚಿತ್ರರಂಗದಲ್ಲಿ ಹೊಸ ಹೊಸದಂದು ಭವರಸೆ ಮತ್ತು ನಿರೀಕ್ಷೆ ಹುಟ್ಟುಹಾಕಿತ್ತು.

ಇದೀಗ ಡಾಲಿ ಧನಂಜಯ ಮತ್ತು ನಿರ್ದೇಶಕ ಶಂಕರ್ ಗುರು “ಅಣ್ಣ ಫ್ರೆಂ ಮೆಕ್ಸಿಕೋ” ಚಿತ್ರದ ಮೂಲಕ ಮತ್ತೊಮ್ಮೆ ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದು. ಐರಾ ಫಿಲ್ಮ್ಸ್ ಕೂಡ ಜೊತೆಯಾಗಿ ಕೈ ಜೋಡಿಸಿದೆ.
ನಟರಾಕ್ಷಸ ಡಾಲಿ ಧನಂಜಯ್ ಜನ್ಮದಿನಕ್ಕೆ ಸಣ್ಣದೊಂದು ಝಲಕ್ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ “ಅಣ್ಣ ಫ್ರೆಂ ಮೆಕ್ಸಿಕೋ” ಚಿತ್ರತಂಡವೀಗ ಸದ್ದಿಲ್ಲದೇ ಮುಹೂರ್ತ ಮುಗಿಸಿ ಚಿತ್ರೀಕರಣದ ಅಖಾಡಕ್ಕೆ ಹೆಜ್ಜೆ ಇಡಲು ತಯಾರಾಗಿದೆ.

ಬಂಡೆ ಮಹಾಕಾಳಿ ದೇಗುಲದಲ್ಲಿ ಧನಂಜಯ್ ಹಾಗೂ ಶಂಕರ್ ಗುರು ಜೋಡಿಯ “ಅಣ್ಣ ಫ್ರೆಂ ಮೆಕ್ಸಿಕೋ” ಸಿನಿಮಾದ ಮುಹೂರ್ತ ನೆರವೇರಿದೆ. ರಾಯಲ ಸ್ಟುಡಿಯೋಸ್‍ನ ಪಾಲುದಾರರಾದ ನಟಿ,ನಿರೂಪಕಿ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದರು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು. ಸ್ನೇಹಿತ ಹಾಗು ಹಿತೈಷಿಗಳಾದ ಮೃಣಾಲ್ ಹೆಬ್ಬಾಳ್ಕರ್ ರವರು ಸಿನಿಮಾದ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ.

“ಅಣ್ಣ ಫ್ರೆಂ ಮೆಕ್ಸಿಕೋ” ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕ ಆಕ್ಷನ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದು. ಜನವರಿ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ, ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇನ್ನು, ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ-2, ಝೀಬ್ರಾ ಹಾಗೂ ಚಿತ್ರದಲ್ಲಿ ಧನು ನಟಿಸುತ್ತಿದ್ದಾರೆ. ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.