ನಟ ರಾಜೀವ್ ಹನು ಹುಟ್ಟುಹಬ್ಬಕ್ಕೆ ‘ಬೇಗೂರು ಕಾಲೋನಿ’ ಹೊಸ ಚಿತ್ರ ಘೋಷಣೆ
ಉಸಿರೇ ಉಸಿರೇ ಸಿನಿಮಾ ಮೂಲಕ ಇತ್ತೀಚೆಗೆಷ್ಟೇ ಪ್ರೇಕ್ಷಕರ ಎದುರು ಬಂದಿದ್ದ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಈಗ ಹೊಸ ಚಿತ್ರದ ಒಪ್ಪಿಕೊಂಡಿದ್ದಾರೆ. ಜನ್ಮದಿನದ ಪ್ರಯುಕ್ತ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.ರಾಜೀವ್ ಹೊಸ ಸಿನಿಮಾಗೆ ಬೇಗೂರು ಕಾಲೋನಿ ಎಂದು ಶೀರ್ಷಿಕೆ ಇಡಲಾಗಿದೆ. ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜೀವ್ ರಾಘವನಾಗಿ ಬಣ್ಣ ಹಚ್ಚಿದ್ದಾರೆ.
ಈ ಹಿಂದೆ ರಾಜೀವ ಎಂಬ ಸಿನಿಮಾ ನಿರ್ದೇಶಿಸಿದ್ದ ಫ್ಲೈಯಿಂಗ್ ಕಿಂಗ್ ಮಂಜು ಸಾರಥ್ಯದಲ್ಲಿ ಬೇಗೂರು ಕಾಲೋನಿ ಸಿನಿಮಾ ಮೂಡಿ ಬರ್ತಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಮಂಜು, ಗಲ್ಲಿ ಶಿವ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಲ್ಲವಿ ಪರ್ವ ಮತ್ತು ಕೀರ್ತಿ ಭಂಡಾರಿ ನಾಯಕಿಯಾಗಿ ಅಭಿನಯಿಸ್ತಿದ್ದು, ಪೋಸಾನಿ ಕೃಷ್ಣ ಮುರಳಿ, ರಾಜೀವ್ ಬೆಳವಾಡಿ, ಬಾಲ ರಾಜವಾಡಿ, ಸಯ್ಯದ್ ಸಲಾಂ, ಗಣೇಶ್ ನಾಯಕ್ ತಾರಾಬಳಗದಲ್ಲಿದ್ದಾರೆ.
ಬೇಗೂರು ಕಾಲೋನಿ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೇಗೂರು, ಸರ್ಜಾಪುರ, ಅತ್ತಿಬೆಲೆ, ಬೊಮ್ಮನಹಳ್ಳಿ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕಲ್ಟ್ ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಚಿತ್ರವನ್ನು ಶ್ರೀಮಾ ಸಿನಿಮಾಸ್ ಪ್ರೊಡಕ್ಷನ್ಸ್ ನಡಿ ಶ್ರೀನಿವಾಸ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ.
ಹೊಯ್ಸಳಾ , ಜಮಾಲಿಗುಡ್ಡ , ಜೆಸಿ ಸಿನಿಮಾ ಖ್ಯಾತಿಯ ಕಾರ್ತಿಕ್ ಎಸ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ, ಪ್ರಮೋದ್ ತಲ್ವಾರ್ ಸಂಕಲನವಿದೆ. ನಾಗೇಂದ್ರ ಪ್ರಸಾದ್, ಭರ್ಜರಿ ಚೇತನ್, ಪ್ರಮೋದ್ ಮರವಂತೆ, ಗೌಸ್ ಪೀರ್, ಶೇಖರ್ ಸೋವರ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಆಂಟೋನಿ ದಾಸ್, ಶಂಕರ್ ಮಹದೇವನ್, ಶ್ರೀಲಕ್ಷ್ಮಿ ಬೆಳ್ಮಣ್ಣು, ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬೇಗೂರು ಕಾಲೋನಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗುತ್ತಿದೆ.