'Chola' Teaser Released: Rural star Anjan shines in the role of Rugad

`ಚೋಳ’ ಚಿತ್ರದ ಟೀಸರ್ ಬಿಡುಗಡೆ:ರಗಡ್ ಪಾತ್ರದಲ್ಲಿ ಮಿಂಚಿದ ರೂರಲ್ ಸ್ಟಾರ್ ಅಂಜನ್ - CineNewsKannada.com

`ಚೋಳ’ ಚಿತ್ರದ ಟೀಸರ್ ಬಿಡುಗಡೆ:ರಗಡ್ ಪಾತ್ರದಲ್ಲಿ ಮಿಂಚಿದ ರೂರಲ್ ಸ್ಟಾರ್ ಅಂಜನ್

ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರುವ `ಚೋಳ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಸುರೇಶ್ ಡಿ.ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಭಿನ್ನ ಕಥಾ ಹಂದರ ಒಳಗೊಂಡಿದೆ.

ಅಂಜನ್ ಅಕ್ಷರಶಃ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ ಸಿನಿಮಾ ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಎಲ್ಲ ದಿಕ್ಕುಗಳಲ್ಲಿಯೂ ಗಮನ ಸೆಳೆದಿದೆ. ನಿರ್ದೇಶಕರಾಗಿ ಬಡ್ತಿ ಪಡೆದಿರುವ ಸುರೇಶ್ ಡಿ.ಎಂ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ. ನಿರ್ಮಾಪಕರಾಗಿದ್ದುಕೊಂಡೇ ಭಿನ್ನ ಅಭಿರುಚಿ ಸಾಬೀತುಪಡಿಸಿದ್ದರು, ಈಗ ಚೋಳ ಮೂಲಕ ನಿರ್ದೇಶಕರಾಗಿ ಸದ್ದು ಮಾಡುತ್ತಿದ್ದಾರೆ.

ಪಕ್ಕಾ ರಗಡ್ ಕಥೆಯೊಂದಿಗೆ ಸುರೇಶ್ ಅವರು ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.ಈ ಮೂಲಕ. ಪ್ರೇಕ್ಷಕರ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.

ರೂರಲ್ ಸ್ಟಾರ್ ಅಂಜನ್, ಸಿಕ್ಕ ಸೀಮಿತ ಅವಕಾಶದಲ್ಲಿಯೇ ಪ್ರತಿಭೆ ಸಾಬೀತು ಪಡಿಸಿಕೊಂಡಿದ್ದವರು. ಹುಡುಗನಿಗೆ ಸರಿಯಾದ ಅವಕಾಶ ಸಿಕ್ಕರೆ ಹೀರೋ ಆಗಿ ನೆಲೆ ಕಂಡುಕೊಳ್ಳುತ್ತಾರೆಂಬಂತೆ ಪ್ರೇಕ್ಷಕರೇ ಅಭಿಪ್ರಾಯ ಪಟ್ಟಿದ್ದರು. ಕಡೆಗೂ ಸುರೇಶ್ ಡಿ.ಎಂ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಫಲವಾಗಿಯೇ ಅಂಜನ್ ಮಾಸ್ ಮೂಡಿನಲ್ಲಿ ಆರ್ಭಟಿಸಿದ್ದಾರೆ. ಟೀಸರ್ ನೋಡಿದವರೆಲ್ಲರೂ ಖುಷಿಗೊಂಡಿದ್ದಾರೆ.

ಸುರೇಶ್ ಡಿ.ಎಂ ಸೃಷ್ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ.ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ.

ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾ£ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.

ಚೋಳ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಬಹುತೇಕರ ಗಮನ ಬೇರೆತ್ತಲೋ ವಾಲಿಕೊಂಡಿತ್ತು. ಆದರೆ, ಇದೊಂದು ಆಧುನಿಕ ದಿನಮಾನದ ಕಥನ ಎನ್ನುವುದನ್ನು ಈ ಟೀಸರ್ ಸಾರಿ ಹೇಳಿದೆ.

ಪ್ರೀತಿ, ರೌಡಿಸಂ ಸೇರಿದಂತೆ ಅನೇಕ ಅಂಶಗಳನ್ನು ಸದರಿ ಕಥನ ಒಳಗೊಂಡಿದೆ. ಅದು ನಿಜಕ್ಕೂ ಭಿನ್ನವಾಗಿದೆ ಎಂಬುದು ಈ ಟೀಸರ್ ಮುಖೇನ ಜಾಹೀರಾಗಿದೆ. ಈಗಾಗಲೇ ಒಂದಷ್ಟು ಭಾಗಗಳ ಚಿತ್ರೀಕರಣ ಸುಸೂತ್ರವಾಗಿ ನೆರವೇರಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲು ಸುರೇಶ್ ಅವರು ಪ್ಲಾನು ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಚೋಳ ಬಗೆಗಿನ ಒಂದಷ್ಟು ಮಾಹಿತಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin