“ಜಾಂಟಿ ಸನ್ ಆಫ್ ಜಯರಾಜ್” ಚಿತ್ರದ ತಾಯಿಯ ಕುರಿತ ಭಾವುಕ ಗೀತೆ ಬಿಡುಗಡೆ
“ಜಾಂಟಿ ಸನ್ ಆಫ್ ಜಯರಾಜ್” ಚಿತ್ರದ ‘ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ, ಅಮ್ಮ ಕ್ಷಮಿಸು’ ಎನ್ನುವ ಭಾವುಕ ಗೀತೆಯನ್ನು ನಿರ್ದೇಶಕ ಪ್ರೇಮ್ ಹಾಡಿದ್ದು ವಿಕಟಕವಿ ಯೋಗರಾಜಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಬಿಡುಗಡೆ ಮಾಡಿದ್ದಾರೆ. ತಾಯಿಯ ಕುರಿತ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ಸುಗೂರುಕುಮಾರ್ ನಿರ್ಮಾಣ ಮಾಡಿದ್ದು ಕತೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಜಯರಾಜ್ ಮತ್ತು ನಿವಿಷ್ಕಾಪಾಟೀಲ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಹಾಡು ಬಿಡುಗಡೆ ಮಾಡಿದ ನಿರ್ದೇಶಕ ಯೋಗರಾಜ ಭಟ್ ಮಾತನಾಡಿ ಬದುಕಲ್ಲಿ ನಾವು ಏನೇ ತಪ್ಪು ಮಾಡಿದರೂ ಕ್ಷಮಿಸುವ ಗುಣ ಇರೋದು ತಾಯಿಗೆ ಮಾತ್ರ. ಇಂತಹ ವಿಷಯ ಹೆಕ್ಕಿಕೊಂಡು ಸಾಹಿತ್ಯ ರಚಿಸಿದ ಆನಂದರಾಜ್, ಸಂಗೀತ ಸಂಯೋಜಕ ಮತ್ತು ಧ್ವನಿ ನೀಡಿದ ಜೋಗಿ ಪ್ರೇಮ್‍ಗೆ ಅಭಿನಂದನೆಗಳು. ಅಮ್ಮನನ್ನು ಕ್ಷಮಿಸು ಅಂತದ್ದು, ಪ್ರಕೃತಿನೇ ಕ್ಷಮಿಸು ಅಂತದ್ದು. ಇವತ್ತಿನ ಕಾಲಘಟ್ಟದಲ್ಲಿ ಚಿಕ್ಕಪುಟ್ಟ ಸಿನಿಮಾಗಳಿಗೆ ಹರಸಲು ಇಷ್ಟೋಂದು ಜನ ಸೇರಿದ್ದೀರಾ. ನಿಮ್ಮಗಳ ಹಾರೈಕೆ ಇದೇ ರೀತಿ ಎಲ್ಲಾ ಸಿನಿಮಾಗಳ ಮೇಲಿರಲಿ ಎಂದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಚೌಧರಿ ಮಾತನಾಡಿ ನಾವು ಎಲ್ಲವನ್ನು ಅಮ್ಮನಿಂದ ಮಾಡಿಸಿಕೊಳ್ತಿವಿ. ಆದರೆ ಥ್ಯಾಂಕ್ಸ್ ಹೇಳೋದನ್ನು ಮರೆಯುತ್ತೇವೆ. ಇಂದಿನ ಗೀತೆ ಮನಮುಟ್ಟುವಂತಿದೆ. ಹಾಡು ಬರೆದ ಆನಂದರಾಜ್‍ರನ್ನು ತಾಯಿಯಾಗಿ ಅಪ್ಪಿಕೊಂಡು ತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಆನಂದ್ ರಾಜ್ ಮಾತನಾಡಿ, ಅಮ್ಮನ ಗೀತೆಗೆ ಪಲ್ಲವಿ ಬರೆದು ರಾಗ ಸಂಯೋಜಿಸಲು ವಿಜೇತಮಂಜೇಹ ಅವರಿಗೆ ಕಳುಹಿಸಲಾಯತು. ಟ್ಯೂನ್ ಸಿದ್ದಪಡಿಸಿದ್ದನ್ನು ಕೇಳಿ, ಖಂಡಿತ ಹಿಟ್ ಆಗುತ್ತೆ ಅಂತ ಹೇಳಿದೆ. ರಸ್ತೆ ಇನ್ನಿತರ ಸ್ಥಳಗಳಲ್ಲಿ ತಪ್ಪು ಮಾಡಿದರೆ ತಕ್ಷಣವೆ ಸಾರಿ ಕೇಳುತ್ತೇವೆ. ಆದರೆ ಹೆತ್ತು, ಹೊತ್ತು ಬೆಳೆಸಿದ ಅಮ್ಮನ ಬಳಿ ಕ್ಷಮಿಸು ಅಂತ ಕೇಳೋದಿಲ್ಲ ಎಂದರು
ಸಿನಿಮಾ ಮೂಲಕ ಎಲ್ಲಾ ತಾಯಂದರಿಗೂ ಸಾರಿ ಅಂತ ಕೇಳುತ್ತೇವೆ. ಸಿನಿಮಾದ ಕ್ಲೈಮಾಕ್ಸ್‍ದಲ್ಲಿ ಬರುತ್ತದೆ. ಆತ ತಾಯಿ ಆಸೆಪಟ್ಟಂತೆ ಸಮಾಜದಲ್ಲಿ ಬದುಕದೆ, ತನ್ನದೆ ಹಾದಿಯಲ್ಲಿ ಸಾಗುತ್ತಾನೆ. ಅದು ಸ್ವಾರ್ಥ, ಹುಡುಗಿ ಇರಬಹುದು. ಕೊನೆಗೆ ಅಮ್ಮನೇ ಸರ್ವಸ್ವ ಎಂದು ತಿಳಿದಾಗ ಹಿನ್ನಲೆಯಲ್ಲಿ ಹಾಡು ಬರುತ್ತದೆ. ಕೆಲವು ಗಾಯಕರಿಗೆ ಅವರದೇ ಆದ ಧ್ವನಿ ಇರುತ್ತದೆ. ನಮ್ಮ ಜೋಗಿ ಪ್ರೇಮ್ ಸರ್ ಒಳಗೆ ತಾಯಿ ಇದ್ದಾಳೆ. ಅದಕ್ಕೆ ಅಮ್ಮನ ಕುರಿತಾಗಿ ಅವರು ಹಾಡಿದ ಗೀತೆಗಳು ಇಂದಿಗೂ ಆಲಿಸುವಂತಾಗಿದೆ ಎಂದರು

ನಾಯಕ ಅಜಿತ್ ಜಯರಾಜ್ ಮಾತನಾಡುತ್ತಿದ್ದ ವೇಳೆ ವೇದಿಕೆ ಕೆಳಗೆ ಆಸೀನರಾಗಿದ್ದ ಅವರ ತಾಯಿಯ ಕಣ್ಣುಗಳು ಒದ್ದೆಯಾಗಿದ್ದವು. ಉಳಿದಂತೆ ನಾಯಕಿ ನಿವಿಷ್ಕಾಪಾಟೀಲ್, ಪೆಟ್ರೋಲ್‍ಪ್ರಸನ್ನ, ಸಂಗೀತ ನಿರ್ದೇಶಕ ವಿಜೇತ್‍ಮಂಜೇಯ್ಯ ಅನುಭವಗಳನ್ನು ಹಂಚಿಕೊಂಡರು.
ತಾರಾಗಣದಲ್ಲಿ ರಾಜವರ್ಧನ್, ಶರತ್‍ಲೋಹಿತಾಶ್ವ, ಕಿಶನ್, ಸೋನುಪಾಟೀಲ್, ಸಚ್ಚಿನ್‍ಪುರೋಹಿತ್, ಮೈಕೋನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಅರ್ಜುನ್ ಆಕೋಟ್, ಹಿನ್ನಲೆ ಶಬ್ದ ಅಲೆಕ್ಸ್ ಅವರದಾಗಿದೆ.


