ಕಲ್ಯಾಣಕುವರ ಡಾ. ಚನ್ನಬಸವ ಪಟ್ಟದೇವರು ಟ್ರೈಲರ್ ಬಿಡುಗಡೆ

ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಎಂಬ ಚಿತ್ರ ನಿರ್ಮಿಸಿ ನಟಿಸಿದ್ದ ವಿಷ್ಣುಕಾಂತ್ ಅವರೀಗ ಕಲ್ಯಾಣಕುವರ ಎಂಬ ಧಾರ್ಮಿಕ, ಐತಿಹಾಸಿಕ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳ ಹಿಂದೆ ಗಡಿನಾಡು ಬೀದರ್ ನಲ್ಲಿ ನಿಜಾಮರ ಆಳ್ವಿಕೆ ಇದ್ದ ಕಾಲದಲ್ಲಿ ಕನ್ನಡ ಭಾಷೆಯ ಬಳಕೆ ವಿರಳವಾಗಿತ್ತು. ಅಂಥಾ ಜಾಗದಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿದ ಡಾ. ಚನ್ನಬಸವ ಪಟ್ಟದೇವರು ಸ್ಥಾಪಿಸಿದರು. ಅವರನ್ನು ಎಲ್ಲರೂ ಆಧುನಿಕ ಬಸವಣ್ಣ ಎಂದೇ ಕರೆಯುತ್ತಿದ್ದರು. ಜಾತಿ ಬೇಧ ಭಾವ ತೊಡೆದುಹಾಕಿ, ಎಲ್ಲೆಡೆ ಸಮಾನತೆಯ ಮಂತ್ರ ಸಾರುತ್ತ ಎಲ್ಲರಿಗೂ ಲಿಂಗದೀಕ್ಷೆ ನೀಡಿದವರು. ಅವರ ಜೀವನವೇ ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಇಂಥ ಮಹಾತ್ಮರ ಜೀವನದ ಕಥೆಯನ್ನು ಈಗಬಿ.ಜೆ. ವಿಷ್ಣುಕಾಂತ್ ಅವರು ಬೆಳ್ಳಿತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಹೆಸರು ಕಲ್ಯಾಣಕುವರ. ಈ ಚಿತ್ರಕ್ಕೆ ವಿಷ್ಣುಕಾಂತ್ ಅವರೇ ನಿರ್ದೇಶನ ಹಾಗೂ ನಿರ್ಮಾಣ ಮಾಡುವುದರ ಜೊತೆಗೆ ಡಾ.ಚನ್ನಬಸವರ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಸೇರಿದಂತೆ ಮೂವರು ಛಾಯಾಗ್ರಾಹಕರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಹಿರಿಯನಟಿ ಭವ್ಯ ಅವರು ಜಯದೇವಿ ತಾಯಿ ಲಿಗಾಡೆ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಿರಾದಾರ್, ಸಂಜುಬಸಯ್ಯ, ಕಿಶೋರ್ ಚಕ್ರವರ್ತಿ, ಭರತ್ ವಿಷ್ಣುಕಾಂತ್, ಸಂಜಯ್ ಸೂರಿ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊನ್ನೆ ಪ್ರಸಾದ್ ಲ್ಯಾಬ್ ನಲ್ಲಿ ಈ ಚಿತ್ರದ. ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣುಕಾಂತ್, ಇಂಥಾ ಚಿತ್ರಗಳನ್ನು ಮಾಡುವಾಗ ತುಂಬಾ ಅಧ್ಯಯನ ಮಾಡಬೇಕು. ಹಾಗೇ ನಾನು ಕೂಡ ಬೀದರ್ ನವನೇ ಆಗಿದ್ದರಿಂದ ಚನ್ನಬಸವರ ಬಗ್ಗೆ ತಿಳಿದುಕೊಂಡಿದ್ದೆ. ಈಗ ಸಿನಿಮಾಮಾಡಬೇಕೆಂದಾಗ ಅವರ ಜೀವನವನ್ನು ಅವರ ಹತ್ತಿರದವರಿಂದ, ಕುಟುಂಬದವರಿಂದ ತಿಳಿದುಕೊಂಡು ಚಿತ್ರಕಥೆಯಲ್ಲಿ ಅಳವಡಿಸಿಕೊಂಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು. ನಟಿ ಭವ್ಯ, ವೈಜನಾಥ ಬಿರಾದಾರ್, ಸಂಗೀತ ನಿರ್ದೇಶಕ ಅಭಿಮನ್ ರಾಯ್ ಸೇರಿದಂತೆ ಚಿತ್ರತಂಡದವರೆಲ್ಲ ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು.