ಕೆ.ರಾಮನಾರಾಯಣ್ ನಿರ್ದೇಶನ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕೆ ಮುಹೂರ್ತ

ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕೆ ಮುಹೂರ್ತ ನಡೆದಿದೆ. ಈ ಮೂಲಕ ನಿರ್ದೇಶಕ ರಾಮ್ ನಾರಾಯಣ್ ಮತ್ತೊಮ್ಮೆ ಮೋಡಿ ಮಾಡಲು ಮುಂದಾಗಿದ್ದಾರೆ.

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕಿ ವಿದ್ಯಾ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಸಂತೋಷ್ ಕುಮಾರ್ ಎ.ಕೆ, ನಿರ್ದೇಶಕ ಕೆ.ರಾಮನಾರಾಯಣ್, ನಾಯಕ ಮಡೆನೂರು ಮನು ಹಾಗೂ ನಾಯಕಿ ಮೌನ ಗುಡ್ಡೆಮನೆ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ಚಿತ್ರಕ್ಕೆ ರಾಮನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ.
ಮಡೆನೂರ್ ಮನು, ಮೌನ ಗುಡ್ಡೆಮನೆ, ದಿಗಂತ್, ಸೋನಾಲ್ ಮೊಂತೆರೊ,ಶರತ್ ಲೋಹಿತಾಶ್ವ, ತಬಲ ನಾಣಿ, ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.