ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ

“ರಾಜಕುಮಾರ”, “ಜೇಮ್ಸ್”, “ಆರೆಂಜ್”, “ಕರಟಕ ದಮನಕ” ದಂತಹ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರಿಯಾ ಆನಂದ್ ಇದೀಗ ಬಹು ನಿರೀಕ್ಷಿತ “ಬಲರಾಮನ ದಿನಗಳು” ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಹಾಗೂ “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಚಿತ್ರ “ಬಲರಾಮನ ದಿನಗಳು”. ಇದು ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ ಕೂಡ.
ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಪ್ರಿಯಾ ಆನಂದ್ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ. “ಬಲರಾಮನ ದಿನಗಳು” 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ.
ಇತ್ತೀಚೆಗಷ್ಟೇ ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
“ಅಟ್ಟಕತ್ತಿ”, ” ಕಾಲ”, “ಕಬಾಲಿ”, “ಭೈರವ”, “ದಸರಾ”, “ಕಲ್ಕಿ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಭಾರತದ ಖ್ಯಾತ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ಸಂಯೋಜಿಸುತ್ತಿರುವ 51ನೇ ಚಿತ್ರ ಹಾಗೂ ಕನ್ನಡದ ಮೊದಲ ಚಿತ್ರ.

ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಹೀಗೆ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ ಹಾಗೂ ಆರಂಭದಿಂದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ “ಬಲರಾಮನ ದಿನಗಳು” ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಶ್ರೇಯಸ್ ತಿಳಿಸಿದ್ದಾರೆ.