ತೊನ್ನು ಸಮಸ್ಯೆ ಕುರಿತ ಚಿತ್ರ ನಿರ್ಮಾಣವಾಗಲು ಪುನೀತ್ ರಾಜ್‍ಕುಮಾರ್ ಕಾರಣ: ನಟ ಮಹೇಶ್ ಗೌಡ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ತೊನ್ನು ಸಮಸ್ಯೆ ಕುರಿತ “ ಬಿಳಿಚುಕ್ಕಿ ಹಳ್ಳಿ ಹಕ್ಕಿ” ಚಿತ್ರ ಸಿದ್ದಗೊಂಡಿದ್ದು ತೆರೆಗೆ ಬರಲು ಸಜ್ಜಾಗಿದೆ, ಚಿತ್ರ ಆರಂಭವಾಗಲು ನಟ ಪುನೀತ್ ರಾಜ್ ಕುಮಾರ್ ಅವರ ಕಾರಣ, ಅವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಸಿನಿಮಾ ಆಯಿತು ಎಂದಿದ್ದಾರೆ ನಟ, ನಿರ್ದೇಶಕ, ನಿರ್ಮಾಪಕ ಮಹೇಶ್ ಗೌಡ.
ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಅಕ್ಟೋಬರ್ 24ರಂದು ತೆರೆಗೆ ಬರಲು ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾತಿಗಿಳಿದ ಮಹೇಶ್ ಗೌಡ, ಬೇರೊಂದು ಚಿತ್ರದ ಕಥೆ ಚರ್ಚೆಯ ವಿಚಾರವಾಗಿ ನಟ ಪುನೀತ್ ರಾಜ್ ಕುಮಾರ್ ಅವನ್ನು ಭೇಟಿ ಮಾಡಿದ್ದೆ. ನನ್ನ ಮೈಮೈಲೆ ಇದ್ದ ತೊನ್ನು ಸಮಸ್ಯೆ ಕೇಳಿ ಇದು ಏನು ಅಂದರು, ಅದಕ್ಕೆ ಬಿಳಿಚುಕ್ಕಿ ಅಥವಾ ತೊನ್ನು ಎನ್ನುವುದನ್ನು ಅವರಿಗೆ ತಿಳಿಸಿದ್ದೆ, ಆಗ ಅವರು ಮಹೇಶ್, ಸ್ವತಃ ನೀವೇ ತೊನ್ನಿನ ಸಮಸ್ಯೆ ಬಗ್ಗೆ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ತೊನ್ನಿನ ಸಮಸ್ಯೆ ಇರುವ ಮಂದಿಯ ಬಗ್ಗೆ ತಾತ್ಸಾರ ಮಾಡದಂತೆ ಅರಿವು ಮೂಡಿಸುವ ಚಿತ್ರ ಮಾಡಿ ಎಂದರು
ಆರಂಭದಲ್ಲಿ ಸರ್, ಇದು ನನ್ನ ಬಳಿ ಆಗುವುದಿಲ್ಲ ಎಂದೆ, ಅದಕ್ಕೆ ಅವರು, ಸಾಮಾನ್ಯ ವ್ಯಕ್ತಿಗಳು ಮೈ ಮೇಲೆ ಬಿಳಿಚುಕ್ಕೆ ಇಟ್ಟುಕೊಂಡು ಸಿನಿಮಾ ಮಾಡಬಹುದು ಆದರೆ ಅದು ಅಷ್ಟು ಪರಿಣಾಮಕಾರಿಯಾಗಿ ಮೂಡಿಬರುವುದಿಲ್ಲ, ನೀವೇ ಮಾಡಿ ಎಂದು ಪ್ರೋತ್ಸಾಹಿಸಿದ್ದರು,ಜೊತೆಗೆ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದ್ದರು, ಆನಂತರ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ, ಅಪ್ಪು ಸರ್ ಇಲ್ಲದಿರುವಾಗ ಅವರ ಬಗ್ಗೆ ಹೆಚ್ಚು ಮಾತನಾಡಿದರೆ ಸರಿ ಕಾಣುವುದಿಲ್ಲ ಎಂದು ಹೇಳಿದರು

ಅಪ್ಪು ಸರ್‍ಗೆ ಬೇರೊಂದು ಕಥೆ ಹೇಳಲು ಹೋಗಿ “ಬಿಳಿಚುಕ್ಕಿ ಹಳ್ಳಿಹಕ್ಕಿ” ಸಿನಿಮಾ ಮಾಡುವಂತಾಯಿತು. ಚಿತ್ರ ಸಿದ್ದವಾದ ಬಳಿಕ ನಟ ಶ್ರೀಮರುಳಿ ಅವರಿಗೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳಿದಾಗ ಮರು ಮಾತನಾಡದೆ ಚಿತ್ರವನ್ನು ಅರ್ಪಿಸಿದ್ದಾರೆ, ಜೊತೆಗೆ ವಿತರಕರನ್ನು ಹುಡುಕಿಕೊಟ್ಟಿದ್ದಾರೆ. ಅವರ ಸಹಕಾರ ಎಂದಿಗೂ ಮರೆಯುವುದಿಲ್ಲ ಎಂದು ಮಾಹಿತಿ ಹಂಚಿಕೊಂಡರು.
ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಅಂದಾಕ್ಷಣ ಮನೋರಂಜನೆ ಇರುವುದಿಲ್ಲ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾ. ಗಹನವಾದ ಕಥೆಯನ್ನಾದರೂ ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪುವುದು ಕಷ್ಟ. ಹಾಗಿರೋದರಿಂದಲೇ ದುಗುಡವನ್ನೂ ಕೂಡಾ ತೆಳು ಹಾಸ್ಯದ ಮೂಲಕ ದಾಟಿಸುತ್ತಲೇ ಸಾಮಾಜಿಕ ಸಂದೇಶ ನೀಡಲಾಗಿದೆಕುಟುಂಬ ಸಮೇತ ಕೂತು ನೋಡುವ ಈ ಪ್ರಯತ್ನ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವ ಭರವಸೆ ವ್ಯಕ್ತಪಡಿಸಿದರು.
ತಾತ್ಸಾರ ಬೇಡ: ಇರಲಿ ಸಹಕಾರ- ಶ್ರೀಮುರುಳಿ
ಬಿಳಿಚುಕ್ಕಿ ಅಥವಾ ತೊನ್ನು ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಬಗ್ಗೆ ಯಾವುದೇ ತಾತ್ಸಾರ ಬೇಡ. ಎಲ್ಲರ ಸಹಕಾರವಿರಲಿ ಎಂದು ನಟ ಶ್ರೀಮರುಳಿ ಮನವಿ ಮಾಡಿದ್ದಾರೆ
ತೊನ್ನಿನ ಸಮಸ್ಯೆಯಿಂದ ಬಳಲುತ್ತಿರುವ ಮಹೇಶ್ ಗೌಡ ಅವರ ಸ್ವತಃ ಸಮಸ್ಯೆ ಎದುರಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲು ಸಿನಿಮಾ ಮಾಡಿದ್ದಾರೆ, ಈ ರೀತಿಯ ಸಿನಿಮಾಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ಬೇಕು, ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲ ಎಂದು ಮಾತನಾಡುವುದಲ್ಲ. ಸಿನಿಮಾ ಬಂದಾಗ ಪ್ರೋತ್ಸಾಹ ಮಾಡಬೇಕು., ಎಲ್ಲರೂ ಸಹಕಾರ ನೀಡಿ ಎಂದರು
ಚಿತ್ರ ಕಥೆ ಕೇಳಿ ಚಿತ್ರವನ್ನು ಅರ್ಪಿಸುತ್ತಿದ್ದೇನೆ. ಜೊತೆಗೆ ವಿತರಕರನ್ನು ಹುಡುಕಿಕೊಟ್ಟಿದ್ದೇನೆ. ತೊನ್ನಿನ ಸಮಸ್ಯೆ ಇರುವ ಅಪರೂಪದ ಚಿತ್ರ ತೆರೆಗೆ ಬರುತ್ತಿದೆ, ಇಂತಹ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ ಮತ್ತಷ್ಟು ಚಿತ್ರ ಮೂಡಿಬರಲು ಸಹಕಾರ ನೀಡಿ ಎಂದು ಕೇಳಿಕೊಂಡರು.

ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದೆ ವೀಣಾ ಸುಂದರ್ ಮಾತನಾಡಿ, ತೊನ್ನು ಸಮಸ್ಯೆ ಇರುವ ಹುಡುಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಹಿಂಜರಿಯುವ ಪಾತ್ರ. ಆದರೆ ಮಗಳು ಅದನ್ನು ಲೆಕ್ಕಿಸದೆ ಮದುವೆ ಆಗುತ್ತಾಳೆ. ಆ ನಂತರ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರ ಒಳಗೊಂಡಿದ್ದು ನಾನು ಮಾಡಿದ ಪಾತ್ರ ಡಬ್ಬಿಂಗ್ ಮಾಡುವಾಗ ನೋಡಿ ನನಗೆ ಬೇಜಾರು ಆಯಿತು, ನಟ ಮಹೇಶ್ ಗೌಡ ಅವರ ಕ್ಷಮೆ ಕೂಡ ಕೇಳಿದ್ದೇನೆ ಎಂದರು
ಹಿರಿಯ ಕಲಾವಿದ ರವಿ ಭಟ್ ಮಾತನಾಡಿ ಹೇಳಿದ ಸಮಯಕ್ಕೂ ಮುಂಚಿತವಾಗಿ ಪೇಮೆಂಟ್ ಮಾಡಿದ ಅಪರೂಪದ ನಿರ್ಮಾಪಕ ಮಹೇಶ್ ಗೌಡ, ವಿಭಿನ್ನ ಕಥೆ ಆಧರಿಸಿ ಚಿತ್ರ ಮಾಡಿದ್ದಾರೆ, ತಾತ್ಸಾರ ಬೇಡ ಸಹಕಾರ ನೀಡಿ ಎಂದು ಕೇಳಿಕೊಂಡರು

ಚಿತ್ರ ಯಾವಾಗ ಬಿಡುಗಡೆ
ತೊನ್ನಿನ ಸಮಸ್ಯೆಯ ಕುರಿತು ತಯಾರಾಗಿರುವ “ಬಿಳಿಚುಕ್ಕಿ ಹಳ್ಳಿಹಕ್ಕಿ” ಚಿತ್ರ ಅಕ್ಟೋಬರ್ 24 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕಿರಣ್ ಸಿಹೆಚ್‍ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ನಾರಾಯಣ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ.

