“ರಾಜರಾಣಿ” ಟೀಸರ್ ಹಾಡು ಬಿಡುಗಡೆ, ಗಮನ ಸೆಳೆದ ಹಾಡು
‘ರಾಜರಾಣಿ’ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿದೆ.’ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ. ವಿಜಯ್‍ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಬಳ್ಳಾರಿ ಮೂಲದ ರಣಧೀರ್ ನಾಯಕ ಮತ್ತು ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ.
ಹಿರಿಯ ಪತ್ರಕರ್ತ ಸದಾಶಿವಶಣೈ, ಸಮಾಜಸೇವಕ ಕೃಷ್ಣಮೂರ್ತಿ ಮತ್ತು ನಟಿ ಅದ್ವಿತಿಶೆಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅದ್ವಿತಿಶೆಟ್ಟಿ ಹಾಡು, ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಹೊಸಬರ ತಂಡ ಅನಿಸುವುದಿಲ್ಲ. ನಾನು ಸಹ ಚಿತ್ರರಂಗಕ್ಕೆ ಬಂದಾಗ ಹೊಸಬಳಾಗಿದ್ದೆ. ನನ್ನ ಅಭಿನಯದ ‘ಧೀರ ಸಾಮ್ರಾಟ್’ 25 ದಿನಗಳನ್ನು ಪೂರೈಸಿದೆ. ಅದರಂತೆ ಇದು ಸಹ ಬಿಡುಗಡೆಯಾಗಿ ನಿರ್ಮಾಪಕರಿಗೆ ಹಣ ವಾಪಸ್ಸು ಬರಲಿ. ಈಗಿನ ಪರಿಸ್ಥಿತಿಯಲ್ಲಿ ರಿಲೀಸ್‍ಗಿಂತ ಪ್ರಚಾರ ಮುಖ್ಯವಾಗಿರುತ್ತದೆ. ಬೇರೆಯವರ ಮಾತನ್ನು ನಂಬಿ ಚಿತ್ರದ ಬಗ್ಗೆ ಮಾತನಾಡಬೇಡಿ. ನೀವುಗಳು ನೋಡಿ ಅಭಿಪ್ರಾಯ ತಿಳಿಸಿದರೆ ಒಳ್ಳೆಯದು ಎಂದರು.
ನಿರ್ದೇಶಕ ರಣಧೀರ್ ಮಾತನಾಡಿ ‘ಪುದಿಯವರುಗಳ್’ ತಮಿಳು ಚಿತ್ರಕ್ಕೆ ನಾಯಕನಾಗಿ ಅವಕಾಶ ಒದಗಿಬಂತು. ನಂತರ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಸಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಯೋಗಿ ಸರ್ ಆಂಜನೇಯನ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅನಾಥನಾಗಿದ್ದ ನನಗೆ ಅಜ್ಜಿ ಯಾವಾಗಲೂ ನಿನಗೆ ರಾಣಿ ಸಿಕ್ತಾಳೆ. ಅವಳ ಮೂಲಕ ಎಲ್ಲವು ಸಿಗುತ್ತದೆಂದು ಹೇಳಿರುತ್ತಾಳೆ. ಅದರಂತೆ ಚಿತ್ರವು ಆಕೆಯ ಸುತ್ತ ಸಾಗುತ್ತದೆ ಎಂಬುದಾಗಿ ಮಾಹಿತಿ ಹರಿಬಿಟ್ಟರು.
ಮಂಡ್ಯ ಮೂಲದ ರಿತನ್ಯಶೆಟ್ಟಿ ನಾಯಕಿ. ಜೀವನ್ ಉಪನಾಯಕ. ಉಳಿದಂತೆ ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‍ವೆಂಕಟೇಶ್, ಗಿರೀಶ್‍ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ. ಒಟ್ಟು ನಾಲ್ಕು ಗೀತೆಗಳ ಪೈಕಿ ಎರಡು ಹಾಡು ಬರೆದು ಸಂಗೀತ ಒದಗಿಸಿರುವುದು ಸುಧನ್‍ಪ್ರಕಾಶ್. ಛಾಯಾಗ್ರಹಣ ಮಧುಮ್ಯಾಡಿ, ಸಾಹಸ ಥ್ರಿಲ್ಲರ್‍ಮಂಜು, ಸಂಕಲನ ನಿಶಿತ್‍ಪೂಜಾರಿ ಅವರದಾಗಿದೆ.
ಬೆಂಗಳೂರು, ಮಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಕಡೆಗಳಲ್ಲಿ 75 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.