SLV movie release soon

ಎಸ್ ಎಲ್ ವಿ ಚಿತ್ರ ಶೀಘ್ರ ಬಿಡುಗಡೆ - CineNewsKannada.com

ಎಸ್ ಎಲ್ ವಿ ಚಿತ್ರ ಶೀಘ್ರ ಬಿಡುಗಡೆ

ಕಿರುತೆರೆ ನಿರೂಪಕ ಸಂಜೀವ ಕುಲಕರ್ಣಿ ಪುತ್ರ ಸೌರಭ ಕುಲಕರ್ಣಿ ನಿರ್ದೇಶನದ “ಎಸ್.ಎಲ್.ವಿ” ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವೂ ಶೀರ್ಷಿಕೆಯಷ್ಟೇ ವಿಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ. ನಟನಾಗಿ, ನಿರೂಪಕನಾಗಿ ಗುರುತಿಸಿಕೊಂಡಿದ್ದ ಸೌರಭ ಕುಲಕರ್ಣಿಯ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ರಂಗಭೂಮಿ-ಕಿರುತೆರೆ ನಟ ಅಂಜನ್‌ ಎ ಭಾರದ್ವಾಜ್‌ ಮತ್ತು ಖ್ಯಾತ ನಟ ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಈ ಚಿತ್ರದ ನಾಯಕ ಹಾಗೂ ನಾಯಕಿ.

ಖ್ಯಾತ ನಟ-ನಿರ್ದೇಶಕ ಡಾ.ರಮೇಶ್‌ ಅರವಿಂದ್‌ ಅವರನ್ನೇ ತಮ್ಮ ಟೀಸರ್‌ನಲ್ಲಿ ತೋರಿಸಿ, ವಿಭಿನ್ನ ರೀತಿಯ ಟೀಸರ್‌ವೊಂದನ್ನು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿ ಚಿತ್ರತಂಡ ಸದ್ದು ಮಾಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಚಿತ್ರ ದುಬೈ, ಅಬುಧಾಬಿ, ಮಸ್ಕತ್‌ ಹಾಗೂ ಸೋಹಾರ್‌ ದೇಶಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಕಂಡು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಪೂರ್ಣ ಪ್ರಮಾಣದ ಕೌಟುಂಬಿಕ ಚಿತ್ರ ಇದಾಗಿದ್ದು, ಮಕ್ಕಳನ್ನೂ ಸೇರಿದಂತೆ ಎಲ್ಲ ವಯೋಮಾನದವರೂ ಈ ಚಿತ್ರವನ್ನು ನೋಡಬಹುದು ಎಂಬ ಮಾತು ಹರಿದಾಡಿತ್ತು.

ಎಸ್.ಎಲ್.ವಿ ಎಂದರೆ ಸಿರಿ ಲಂಬೋದರ ವಿವಾಹ. ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ವೆಡ್ಡಿಂಗ್‌ ಪ್ಲಾನರ್ಸ್‌ಗಳಾಗಿದ್ದು, ಇದೊಂದು ಹೊಸ ಬಗೆಯ ಕಥಾ ಹಂದರವನ್ನು ಹೊಂದಿದೆ. ಸಿರಿ ಹಾಗೂ ಲಂಬೋದರ ಎನ್ನುವವರ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯಮಯ, ಭಾವನಾತ್ಮಕ ಹಾಗೂ ರೋಚಕ ಸನ್ನಿವೇಶಗಳ ಮಿಶ್ರಣವೇ “ಎಸ್.ಎಲ್.ವಿ – ಸಿರಿ ಲಂಬೋದರ ವಿವಾಹ” ಎನ್ನುತ್ತಾರೆ ನಿರ್ದೇಶಕರು.

ಹಾಸ್ಯ-ಸಾಹಸ ಮತ್ತು ಕುತೂಹಲಕಾರಿ ಅಂಶಗಳನ್ನೊಳಗೊಂಡ ಈ ಚಿತ್ರದ ತಾರಾಂಗಣದಲ್ಲಿ ರಾಜೇಶ್‌ ನಟರಂಗ, ಸುಂದರ್‌ ವೀಣಾ, ಬಲ ರಾಜವಾಡಿ, ರೋಹಿತ್‌ ನಾಗೇಶ್‌, ಪಿ ಡಿ ಸತೀಶ್‌ಚಂದ್ರ, ಕಾಮಿಡಿ ಕಿಲಾಡಿ ಸದಾನಂದ ಕಾಳೆ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು – ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ಯುವ-ನವ ರಂಗಭೂಮಿ ನಟರೂ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವರ್ಸ್ಯಾಟೋ ವೆಂಚ್ಯೂರ್ಸ್‌, ಪವಮಾನ ಕ್ರಿಯೇಷನ್ಸ್‌, ಫೋರೆಸ್‌ ನೆಟ್‌ವರ್ಕ್‌ ಸಲ್ಯೂಷನ್ಸ್‌ ಹಾಗೂ ಧೂಪದ ದೃಶ್ಯ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ಈ ಚಿತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಸಹ ನಿರ್ಮಾಪಕರ ಬಂಡವಾಳ ಇರುವುದು ಮತ್ತೂ ವಿಶೇಷ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸುಮಾರು 39 ದಿನಗಳ ಕಾಲ ಚಿತ್ರೀಕರಣ ಮಾಡಿ, ಇದೇ ತಿಂಗಳಲ್ಲಿ ತೆರೆಗೆ ಚಿತ್ರವನ್ನು ತರಲು ಹುರುಪಿನಿಂದ ಕಾದಿದೆ ಎಸ್.ಎಲ್.ವಿ ತಂಡ.

ಕಿಟ್ಟಿ ಕೌಶಿಕ್‌ ಅವರ ಛಾಯಾಗ್ರಹಣ, ಸಂಘರ್ಷ್‌ ಕುಮಾರ್‌ ಅವರ ಸಂಗೀತ ನಿರ್ದೇಶನ, ವಿನೋದ್‌ ಅವರ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ಸಂಯೋಜನೆ, ನಮ್ಮನೆ ಪ್ರೊಡಕ್ಷನ್ಸ್‌ ತಂಡದ ಕ್ರಿಯಾಶೀಲತೆ ಸೇರಿದಂತೆ ಅನೇಕ ನುರಿತ ತಂತ್ರಜ್ಞರ ಹಾಗೂ ನವ ಯುವಕರ ಕೈ ಚಳಕ ಎಸ್‌.ಎಲ್‌.ವಿಯಲ್ಲಿದೆ. ಪ್ರಾಮಾಣಿಕ ತಂಡವೊಂದು ಅನೇಕ ಕನಸುಗಳನ್ನು ಹೊತ್ತು ಗಾಂಧಿನಗರಕ್ಕೆ ಕಾಲಿಡುತ್ತಿದೆ. ಕನ್ನಡಿಗರು ಈ ತಂಡದ ಪ್ರಯತ್ನವನ್ನು ಒಪ್ಪಿ, ಪ್ರೀತಿಸಿ, ಪೋಷಿಸಲಿ ಎನ್ನುವುದು ತಂಡದ ಹೆಬ್ಬಯಕೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin