Teaser released of "Sinharupini" directed by Kinnal Raj featuring Maramma Devi

ಕಿನ್ನಾಳ್ ರಾಜ್ ನಿರ್ದೇಶನದ ಮಾರಮ್ಮ ದೇವಿ ಸಮ್ಮುಖದಲ್ಲಿ “ಸಿಂಹರೂಪಿಣಿ” ಟೀಸರ್ ಬಿಡುಗಡೆ - CineNewsKannada.com

ಕಿನ್ನಾಳ್ ರಾಜ್ ನಿರ್ದೇಶನದ ಮಾರಮ್ಮ ದೇವಿ ಸಮ್ಮುಖದಲ್ಲಿ “ಸಿಂಹರೂಪಿಣಿ” ಟೀಸರ್ ಬಿಡುಗಡೆ

ಗುರು ಪೂರ್ಣಿಮೆ ದಿನದಂದು ‘ಸಿಂಹರೂಪಿಣಿ’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆಯಾಗಿದೆ. ಖ್ಯಾತ ಚಿತ್ರ ಸಾಹಿತಿ ಕಿನ್ನಾಳ್ ರಾಜ್ ಆಕ್ಷನ್ ಕಟ್ ಹೇಳಿರುವ ಎರಡನೇ ಚಿತ್ರ ಇದು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು ವಿಶೇಷವಾಗಿತ್ತು.

ನಿರ್ದೇಶಕ ಕಿನ್ನಾಳ್‍ರಾಜ್ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್‍ಪರ್ವ ಸಂಗೀತ, ಕಿರಣ್‍ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ, ಕಿಶೋರ್ ಕಲರಿಸ್ಟ್, ಸಾಹಸ ಥ್ರಿಲ್ಲರ್‍ಮಂಜು-ಚಂದ್ರು ಬಂಡೆ-ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಶ್ರಮದ ಫಲವಾಗಿ ನಿರ್ಮಾಣವಾಗಿರುವ 1.45 ನಿಮಿಷದ ತುಣುಕು ಬಿಡುಗಡೆಯಾಯಿತು

ಈ ವೇಳೆ ಮಾತನಾಡಿದ ಸಂಗೀತ ನಿರ್ದೇಶಕ ರವಿಬಸ್ರೂರು ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಞರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನಿರ್ದೇಶಕರ ಪಯಣ ಸುಮಾರು 15 ವರ್ಷದಷ್ಟು ಹಳೆಯದು. ನಿರ್ದೇಶನದಲ್ಲಿ ಸಂಗೀತ ಕಂಪೋಸ್ ಮಾಡಬೇಕೆಂದು ಆ ಸಮಯದಲ್ಲಿ ಮಾತಾಡಿಕೊಂಡಿದ್ದೇವು. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಾವಿಬ್ಬರು ಸೇರಿದ್ದೇವು. ಉದ್ಯಮದ ಬೆಳವಣಿಗೆಗೆ ಇಂತಹ ಪ್ರತಿಭೆಗಳ ಪಾತ್ರ ತುಂಬ ಅಗತ್ಯವಿದೆ ಎಂದರು.

ನಿರ್ದೇಶಕ ಜಡೇಶ್‍ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ನಿರ್ದೇಶಕರು ನಮ್ಮ ಊರಿನ ಪಕ್ಕದವರು. ಪ್ರಾರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ನಮ್ಮ ಊರಿನ,ಭಾಗದ ಸಂಸ್ಕ್ರತಿ ತೋರಿಸಲಾಗಿದೆ. ಅಂತಹ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತದೆ. ಮ್ಯೂಸಿಕ್ ಚೆನ್ನಾಗಿದೆ. ಕಾಟೇರ ಕೋಣ ಇಲ್ಲಿಗೆ ಯಾಕೆ ಬಂತು ಅಂತ ಕೇಳಿದೆ. ಸಿನಿಮಾ ನೋಡಿ ಅಂತಾರೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ನಿರ್ದೇಶಕ ಕಿನ್ನಾಳ್ ರಾಜ್ ಮಾತನಾಡಿ ಜೀವನದಲ್ಲಿ ನನ್ನ ಹೆಸರು ಟೈಟಲ್ ಕಾರ್ಡ್‍ದಲ್ಲಿ ಕಾಣಿಸಬೇಕೆಂದು ಆಸೆಪಟ್ಟವನು. ರವಿಬಸ್ರೂರು ‘ಅಂಜನಿಪುತ್ರ’ ಸಿನಿಮಾಕ್ಕೆ ಹಾಡು ಬರೆಯಲು ಅವಕಾಶ ಮಾಡಿಕೊಟ್ಟರು. ನಂತರ ‘ಕೆಜಿಎಫ್’ನಿಂದ ಎಲ್ಲರೂ ಗುರುತು ಹಿಡಿಯುವಂತಾಯಿತು. ಈಗ ತಾಯಿ ಚಿತ್ರ ಮಾಡುತ್ತಿದ್ದೇನೆ. ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯ ಅವತಾರ.

ನಿರ್ಮಾಪಕ ಕೆ.ಎಂ.ನಂಜುಡೇಶ್ವರ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಅನುಭವ ಆಗಿರುತ್ತದೆ. ತಾಯಿ ವಿರಾಜಮಾನವಾಗಿ ಕೂತಿದ್ದಾಳೆ. ನೀವುಗಳು ದರ್ಶನ ಮಾಡಿದ್ದೀರಾ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ತಾಯಿಯ ಅನುಭವವನ್ನು ಫೀಲ್ ಮಾಡಿ. ತ್ರಿಮೂರ್ತಿ, ತ್ರಿಶಕ್ತಿ , ಸರ್ವಶಕ್ತಿ ಸ್ವರೂಪಿಣಿ ಗ್ರಾಮ ದೇವತೆ ಮಾರಮ್ಮ. ಮೂರು ದೇವತೆಗಳು, ತ್ರಿಮೂರ್ತಿಗಳು. ಎಲ್ಲಾ ದೇವರುಗಳಿಗೆ ಮೂಲ ದೇವರು ಗ್ರಾಮ ದೇವತೆ. ನಿಮ್ಮೂರಿನ ದೇವತೆಯ ಪೂಜೆ ಮಾಡಿ, ಶ್ರೀಮನ್ ನಾರಾಯಣ ತಿರುಪತಿಯಲ್ಲಿ ದರ್ಶನವಾದಂತೆ ಆಗುತ್ತದೆ. ಚಿತ್ರ ನೋಡಿದ ಮೇಲೆ ನೀವುಗಳು ತಾಯಿ ಪ್ರೀತಿ ಬಗ್ಗೆ ಮಾತನಾಡುತ್ತಿರಾ. ಮನುಷ್ಯನಾಗಿ ಹುಟ್ಟಿ ಎಲ್ಲವನ್ನು ದೇವರ ಅನುಗ್ರಹದಿಂದ ಪಡೆದುಕೊಂಡು ನಾವು ಏನು ಮಾಡಿಲ್ಲ. ಅದಕ್ಕಾಗಿ ಸಿನಿಮಾ ಮಾಡಿದ್ದೇನೆ. ಅಮ್ಮ ಅಂತ ಒಂದು ಹೆಜ್ಜೆ ಇಟ್ಟರೆ, ತಾಯಿ ಮೂರು ಹೆಜ್ಜೆ ಮುಂದಿಡುತ್ತಾಳೆ. ನಮಗೆ ಹರಸಲು ಎಲ್ಲಾ ವರ್ಗದಿಂದ ಹಿತೈಷಿಗಳು ಬಂದಿದ್ದಾರೆ. ನಿಮ್ಮಗಳ ಪ್ರೋತ್ಸಾಹ ಇದೇ ರೀತಿ ಇರಬೇಕೆಂದು ಕೋರಿಕೊಂಡರು.

ತಾಯಿಯ ಮಹಿಮೆ,ಪವಾಡಗಳು, ಈಗಿನ ಟ್ರೆಂಡ್‍ಗೆ ತಕ್ಕಂತೆ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಿರ್ಮಾಪಕರ ಹುಟ್ಟಿದ ಹಬ್ಬ, ಗುರುಪೂರ್ಣೀಮೆ ಶುಭದಿನವಾಗಿದ್ದರಿಂದ ಕಾರ್ಯಕ್ರಮ ಏರ್ಪಾಟು ಮಾಡಲಾಗಿದೆ. ಚಿತ್ರದಲ್ಲಿ 132 ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕರ ಕಥೆಗೆ ಚಿತ್ರರೂಪ ಕೊಟ್ಟಿದ್ದೇನೆ. ಹಾಡು ಬರೆಯಲು ಹೋದವನು, ಅಂತಿಮವಾಗಿ ನಿರ್ದೇಶನ ಮಾಡಲು ಹೇಳಿದ್ದೆ, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಗ್ರಾಫಿಕ್ಸ್ 15 ನಿಮಿಷದ ಕಾಲ ಬರುತ್ತದೆ. ಸದ್ಯ ಸಿಜಿ ನಡೆಯುತ್ತಿದ್ದು, ಕೋಣ ಯಾಕೆ ಇದೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆ ಎಂದರು

ನಿರೂಪಕಿ ಅಂಕಿತಾಗೌಡ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿ ಕೊಂಡಿದ್ದಾರೆ. ದೇವಿಯಾಗಿ ಯಶಸ್ವಿನಿಸಿದ್ದೇಗೌಡ, ರವಿಬಸ್ರೂರು ಪುತ್ರಿ ಕುಮಾರಿ.ಖುಷಿ ಬಸ್ರೂರು ಬಾಲ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹರೀಶ್‍ರಾಯ್, ಯಶ್‍ಶೆಟ್ಟಿ, ದಿನೇಶ್‍ಮಂಗಳೂರು, ಪುನೀತ್‍ರುದ್ರನಾಗ್, ಭಜರಂಗಿ ಪ್ರಸನ್ನ, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಮನ್, ತಮಿಳಿನ ದಿನಾ, ಸಾಗರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ತಬಲನಾಣಿ, ವಿಜಯ್‍ಚೆಂಡೂರು, ದಿವ್ಯಾ ಆಲೂರು, ಮನಮೋಹನ್‍ರೈ, ಆರವ್ ಲೋಹಿತ್, ಪಿಳ್ಳಣ್ಣ, ಮಧುಶ್ರೀ, ವೇದಾಹಾಸನ್, ಸುನಂದಕಲ್ಬುರ್ಗಿ, ಶಶಿಕುಮಾರ್, ಕೆ.ಬಾಲಸುಬ್ರಮಣ್ಯಂ ಮುಂತಾದವರು ನಟಿಸಿದ್ದಾರೆ.

ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರಕ್ಕೆ ದುಡಿದವರನ್ನು ವೇದಿಕೆಗೆ ಆಹ್ವಾನಿಸಿ ಅವರುಗಳಿಗೂ ಮಾತನಾಡಲು ಅವಕಾಶ ಕಲ್ಪಸಿದ್ದು ನಿರ್ದೇಶಕರ ದೊಡ್ಡ ಗುಣ ಕಾರ್ಯಕ್ರಮದ ವಿಶೇಷವಾಗಿತ್ತು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin