ಕುತೂಹಲ ಮೂಡಿಸಿದ “ತಿಮ್ಮನ ಮೊಟ್ಟೆಗಳು” ಜೂನ್ 27 ರಂದು ತೆರೆಗೆ

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ, ಆದರ್ಶ ಅಯ್ಯಂಗಾರ್ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರದ ಟ್ರೇಲರ್ ಅನ್ನು ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಉರಗ ತಜ್ಞ ಗೌರಿ ಶಂಕರ್, ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ ಚಿತ್ರವನ್ನು ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತಹ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಈಗ ದಿನಕ್ಕೊಂದು ಚಿತ್ರದಂತೆ ವರ್ಷಕ್ಕೆ 360 ಚಿತ್ರಗಳು ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರಮಂದಿರಕ್ಕೆ ಜನರು ಬರುವ ಸಂಖ್ಯೆ ಕಡಿಮೆಯಾಗಿದೆ. ಚಿತ್ರ ಬಿಡುಗಡೆ ಸಂಖ್ಯೆ ಕಡಿಮೆಯಾಗಬೇಕು. ಸದಭಿರುಚಿಯ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎಂದರು
ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮಾತನಾಡಿ ನಾನೇ ಬರೆದಿರುವ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆ “ತಿಮ್ಮನ ಮೊಟ್ಟೆಗಳು” ಸಿನಿಮಾವಾಗಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರದ ಪ್ರಮುಖ ಕಥೆಯಿದ್ದು, ಮನುಷ್ಯನಲ್ಲಿರುವ ಹಾಗೆ ಪ್ರಾಣಿಗಳಲ್ಲೂ ಬಾಂಧವ್ಯವಿದೆ.

ಈತರಹದ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕರು ಇತ್ತೀಚೆಗೆ ಅಮೇರಿಕಾದ ಡಾಲಸ್ ನಲ್ಲಿ ಪ್ರಿಮೀಯರ್ ಶೋ ಸಹ ಆಯೋಜಿಸಿದ್ದರು. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು
ಹಿರಿಯ ನಟ ಸುಚೇಂದ್ರ ಪ್ರಸಾದ್ ಮಾತನಾಡಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದರು.

ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್ ಜೋಯಿಷ್ ಮತ್ತಿತರು ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು