ಜನರ ಮನ ಗೆದ್ದ “ಮಾವು ಬೇವು” ಚಿತ್ರ ಈಗ ಪುಸ್ತಕರೂಪದಲ್ಲಿ ಪ್ರಕಟ

ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ನಿರ್ದೇಶಿಸಿರುವ ಹಾಗೂ ಸಂದೀಪ್, ಚೈತ್ರ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸಮೂರ್ತಿ ಮುಂತಾದವರು ಅಭಿನಯಿಸಿರುವ ಸಂಗೀತ ಸುಭಗದ ಕನ್ನಡ ಕಥಾಚಿತ್ರ “ಮಾವು ಬೇವು” ಬಿಡುಗಡೆಯಾಗಿ ಎಲ್ಲರ ಮನಸ್ಸಿಗೆ ಹತ್ತಿರವಾಗಿತ್ತು. ಹಲವು ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡು ಪ್ರಶಸ್ತಿಯ ಜೊತೆಗೆ ಮೆಚ್ಚುಗೆಯನ್ನು ಪಡೆದಿತ್ತು. ಈಗ ಈ ಚಿತ್ರ ಆಕರ ಗ್ರಂಥವಾಗಿ ಹೊರಹೊಮ್ಮಿದೆ.

ಶ್ರೀ ಸಾಯಿಗಗನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್ ರಾಜಶೇಖರ್ ಅವರು ನಿರ್ಮಿಸಿರುವ ಚಿತ್ರ “ಮಾವು ಬೇವು” ಕಾವ್ಯ ಸ್ಪಂದನ ಪಬ್ಲಿಕೇಶನ್‍ನ ಭದ್ರಾವತಿ ರಾಮಾಚಾರಿ ಪ್ರಕಟಿಸಿದ್ದಾರೆ. ಇತ್ತೀಚೆಗೆ “ಮಾವು ಬೇವು” ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಖ್ಯಾತ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ, ನಟಿ ತಾರಾ ಅನುರಾಧಾ, ಡಾ.ವಿಜಯಲಕ್ಷ್ಮೀ ದೇಶಮಾನೆ, ಲಹರಿ ವೇಲು ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಚಿತ್ರದಲ್ಲಿ ನಟಿಸಿರುವ ಸಂದೀಪ್, ಚೈತ್ರ, ಡ್ಯಾನಿ ಕುಟ್ಟಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಂಗೀತ ಸುಭಗದ ಕನ್ನಡ ಕಥಾಚಿತ್ರ “ಮಾವು ಬೇವು” ನನ್ನ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಎಸ್ ರಾಜಶೇಖರ್ ನಿರ್ಮಿಸಿರುವ “ಮಾವು ಬೇವು” ಚಿತ್ರವನ್ನು ಈಗ ಆಕರ ಗ್ರಂಥವಾಗಿ ಪುಸ್ತಕರೂಪದಲ್ಲಿ ಕಾವ್ಯ ಸ್ಪಂದನ ಪ್ರಕಾಶನದ ಭದ್ರಾವತಿ ರಾಮಾಚಾರಿ ಅವರು ಹೊರ ತಂದಿದ್ದಾರೆ.
ಈ ಪುಸ್ತಕಕ್ಕೆ ಖ್ಯಾತ ಸಹಿತಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್ ಲಕ್ಷ್ಮಣ್ ರಾವ್, ನಿರ್ದೇಶಕ ಲಿಂಗದೇವರು ಮುಂತಾದವರು ಬೆನ್ನುಡಿ ಬರೆದಿದ್ದಾರೆ. ಚಿತ್ರಸಾಗಿ ಬಂದ ಬಗ್ಗೆ ಈ ಪುಸ್ತಕದಲ್ಲಿ ವಿವರಣೆ ಇದೆ.