“ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ” ಟೀಸರ್ ಬಿಡುಗಡೆ ಮಾಡಿದ ಸಚಿವ ಎಚ್.ಕೆ ಪಾಟೀಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಾಹುಲಿ ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡಿದ್ದ ಹೊನ್ನರಾಜ್ ಇದೀಗ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಇದೇ ಮೊದಲಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ.
ಹೊನ್ನರಾಜ್ ಅವರೇ ನಾಯಕನಾಗಿಯೂ ನಟಿಸಿರುವ “ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ” ಬಿಡುಗಡೆಗೆ ಸಿದ್ದವಾಗಿದ್ದು, ಹೊನ್ನರಾಜ್ ರ ಹುಟ್ಟುಹಬ್ಬದಂದು ಚಿತ್ರದ ಟೀಸರನ್ನು ಸಚಿವ ಹೆಚ್.ಕೆ.ಪಾಟೀಲ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಸಚಿವ ಎಚ್.ಕೆ ಪಾಟೀಲ್ ಮಾತಮಾಡಿ ಹೊನ್ನರಾಜ್ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ಈ ಚಿತ್ರ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಬೆವರು, ರಕ್ತ ಸುರಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಪ್ರಶಸ್ತಿ ಬರುವಂತಾಗಲಿ, ಎನ್ನುತ್ತಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ನಾಯಕ ಹೊನ್ನರಾಜ್ ಮಾತನಾಡಿ ನಾನು ಎಚ್ಕೆ ಪಾಟೀಲರ ಮನೆಯ ಮುಂದೆ ಆಡಿ ಬೆಳೆದ ಹುಡುಗ. ಈ ಕಥೆ ರೆಡಿ ಮಾಡಿಕೊಂಡು ಅವರಿಗೆ ಹೇಳಿದೆ. ನಂತರ ಅವರು ತಮ್ಮ ಸ್ನೇಹಿತರಿಗೆ ಹೇಳಿ ನನ್ನನ್ನು ಪರಿಚಯಿಸಿದರು. ಅವರು ನೀಡಿದ ಸಹಕಾರದಿಂದ ಚಿತ್ರವೀಗ ಬಿಡುಗಡೆ ಹಂತ ತಲುಪಿದೆ. ನೈಜ ಘಟನೆಯನ್ನು ಆಧರಿಸಿದ ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು ಸೆನ್ಸಾರ್ ನಿಂದ ಯು/ಎ ಸಿಕ್ಕಿದೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ಕಥೆ. ಯಶ್ ಅವರಿಗೂ ಚಿತ್ರದ ಬಗ್ಗೆ ಹೇಳಿದೆ, ಒಳ್ಳೆದಾಗಲಿ ಎಂದು ಹಾರೈಸಿದರು. ಇಲ್ಲಿ ನಾನೊಬ್ಬನೇ ಪ್ರೊಡ್ಯೂಸರ್ ಅಲ್ಲ. ನನ್ನ ಹಿಂದೆ ನೂರಾರು ಜನ ಕೈಜೋಡಿಸಿದ್ದಾರೆ.ಚಿತ್ರವನ್ನು ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದರು.

ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಚಿತ್ರದ ನಿರ್ಮಾಪಕಿ ಮಂಜುಳಾ ರಾಘವೇಂದ್ರ, ಕಾರ್ಯಕಾರಿ ನಿರ್ಮಾಪಕ ಸಂಜಯ್ ಶ್ರೀನಿವಾಸ್ ಅಲ್ಲದೆ ಮಾಜಿ ಮಹಾಪೌರರಾದ ಹುಚ್ಚಪ್ಪ, ನಿರ್ಮಾಪಕರಾದ ಕಲ್ಕೆರೆ ಸುನಿಲ್, ಎಂ. ಮುನಿರಾಜು ಇತರರಿದ್ದರು.
ವಿನು ಮನಸು ಸಂಗೀತ, ಶಿವಪುತ್ರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

