ಆಗ “ಆ ದಿನಗಳು” ಇದೀಗ “ಬಲರಾಮನ ದಿನಗಳು” : ಕುತೂಹಲ ಹೆಚ್ಚಳ
‘ಆ ದಿನಗಳು” ಚಿತ್ರ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಚಿತ್ರಗಳನ್ನೂ ಹೀಗೂ ತೋರಿಸಬಹುದು ಎನ್ನುವುದನ್ನು ನಿರ್ದೇಶಕ ಕೆ,ಎಂ ಚೈತನ್ಯ ತೆರೆಯ ಮೇಲೆ ಕಟ್ಟಿಕೊಟ್ಟಿದ್ದರು, ಚಿತ್ರದ ಕಥೆ, ನಿರೂಪಣಾ ಶೈಲಿ, ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಎಲ್ಲ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತ್ತು.
ಆ ದಿನಗಳು ಚಿತ್ರ ತೆರೆಗೆ ಬಂದು ಹೆಚ್ಚು ಕಡಿಮೆ ದಶಕದ ಬಳಿಕ ನಿರ್ದೇಶಕ ಕೆ,ಎಂ ಚೈತನ್ಯ ಇದೀಗ “ಬಲರಾಮನ ದಿನಗಳು” ಚಿತ್ರ ಕೈಗೆತ್ತಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಈ ಬಾರಿ ವಿನೋದ್ ಪ್ರಭಾಕರ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದು ವಿನೋದ್ ಪ್ರಭಾಕರ್ ಅವರ 25 ನೇ ಚಿತ್ರ ಎನ್ನುವುದು ಮತ್ತೊಂದು ಹೆಗ್ಗಳಿಕೆ
ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ “ಬಲರಾಮನ ದಿನಗಳು” ಚಿತ್ರವನ್ನು ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಾಣ ಮಾಡುತ್ತಿದ್ದಾರೆ. “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರದ ಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 23 ರಂದು “ಬಲರಾಮನ ದಿನಗಳು” ಚಿತ್ರದ ಕುರಿತು ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿದೆ. ಒಟ್ಟಿನಲ್ಲಿ ಪದ್ಮಾವತಿ ಫಿಲಂಸ್ ನಿರ್ಮಾಣದ, ಕೆ.ಎಂ.ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.