‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಆರಂಭಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.ತುಪ್ಪದ ಹುಡುಗಿ, ಸಾರಾಯಿ ಶಾಂತಮ್ಮ ರಾಗಿಣಿ ದ್ವಿವೇದಿ ನ್ಯಾಯ ಬೆಲೆ ಅಂಗಡಿ ತೆರೆಯಲು ಮುಂದಾಗಿದ್ದಾರೆ

ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ನಟಿ ರಾಗಿಣಿ ದ್ವಿವೇದಿ, ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಸ್ಕ್ರಿಪ್ಟ್ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನೆಮಾದ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿತ್ತು.ಹಾಡುಗಳ ಧ್ವನಿಮುದ್ರಣ ಆರಂಭಿಸುವ ಮೂಲಕ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ನೀಡಿದೆ.
ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಹಾಡುಗಳ ಮುದ್ರಣ ಕಾರ್ಯ ಅರಂಭಿಸಿದ್ದಾರೆ.

ಈ ವೇಳೆ ನಟಿ ರಾಗಿಣಿ ದ್ವಿವೇದಿ, ʼಕರ್ನಾಟ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘʼದ ಅಧ್ಯಕ್ಷ ಟಿ. ಕೃಷ್ಣಪ್ಪ, ನಟಿ ಗೀತಪ್ರಿಯ, ನಿರ್ಮಾಪಕಿಯರಾದ ತೇಜು ಮೂರ್ತಿ, ಎಸ್. ಪದ್ಮಾವತಿ ಚಂದ್ರಶೇಖರ್, ಹಿರಿಯ ನಿರ್ಮಾಪಕ ಭಾ. ಮ. ಹರೀಶ್, ಭಾ. ಮ. ಗಿರೀಶ್, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ, ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.

ನಟಿ ರಾಗಿಣಿ ದ್ವಿವೇದಿ ಮಾತನಾಡಿ ʼಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾದ ಕಥೆ ಮತ್ತು ಪಾತ್ರ ಈ ಸಿನೆಮಾದಲ್ಲಿದೆ. ಇಡೀ ಚಿತ್ರದ ಕಥೆ ನನ್ನ ಪಾತ್ರದ ಸುತ್ತ ನಡೆಯುತ್ತದೆ. ಆಹಾರ ವಿತರಣೆಯಲ್ಲೂ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಸಿನೆಮಾದಲ್ಲಿ ಹೇಳಲಾಗುತ್ತಿದೆ. ನಮಗೆ ಗೊತ್ತಿಲ್ಲದ ಶಾಕಿಂಗ್ ಎನಿಸುವ ಅನೇಕ ವಿಷಯಗಳು ಸಿನೆಮಾದಲ್ಲಿದೆ. ನನಗೂ ಕೂಡ ಸಿನೆಮಾದ ಕಥೆ ಮತ್ತು ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.ಸಿನೆಮಾ ಕೆರಿಯರ್‌ನಲ್ಲಿ ನಿಜವಾಗಿಯೂ ಇದೊಂದು ವಿಭಿನ್ನ ಸಿನೆಮಾವಾಗಲಿದೆ ಎಂಬ ನಂಬಿಕೆಯಿದೆʼ ಎಂದರು.
ʼಜಯಶಂಕರ ಟಾಕೀಸ್ʼ ಬ್ಯಾನರಿನಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ʼತಾಯವ್ವʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್ ಪವನ ಕುಮಾರ್ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ನಿರ್ದೇಶಕ ಸಾತ್ವಿಕ್ ಪವನ ಕುಮಾರ್ ಮಾತನಾಡಿ ʼಇದೊಂದು ನೈಜ ವಿಷಯ ಆಧರಿಸಿದ ಚಿತ್ರ. ನಮ್ಮ ನಡುವೆಯಿರುವ ʼಸರ್ಕಾರಿ ನ್ಯಾಯಬೆಲೆ ಅಂಗಡಿʼಗಳಲ್ಲಿ ನಡೆಯುವ ನೈಜ ವಿಷಯಗಳೇ ಈ ಚಿತ್ರದ ಕಥಾಹಂದರ. ಇದನ್ನು ಒಂದಷ್ಟು ಕುತೂಹಲಭರಿತವಾಗಿ ಈ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ರಾಗಿಣಿ ದ್ವಿವೇದಿ ಅವರಿಗೆ ಇಲ್ಲೊಂದು ಹೊಸಥರದ ಪಾತ್ರವಿದೆ. ʼಸರ್ಕಾರಿ ನ್ಯಾಯಬೆಲೆ ಅಂಗಡಿʼಯನ್ನು ನಡೆಸುವ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆʼ ಎಂದರು.

ಸದ್ಯ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು ಉಳಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ., ಇದೇ ವರ್ಷದ ಮಧ್ಯ ಭಾಗದಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ಚಿತ್ರಮಂದಿರಕ್ಕೆ ತರುವ ಉದ್ದೇಶ ಚಿತ್ರತಂಡದ್ದು

