Review: ಕಾವೇರಿ ಒಡಲಲ್ಲಿ ನಡೆಯುವ ಮರಳುಗಾರಿಕೆ ಸುತ್ತ ಸಾಗಿದ ನೆಲ ಮೂಲದ ಕಥೆ “ಕೊತ್ತಲವಾಡಿ”
ವಿಮರ್ಶೆ
ಚಿತ್ರ: ಕೊತ್ತಲವಾಡಿ
ನಿರ್ದೇಶನ: ಶ್ರೀರಾಜ್
ತಾರಾಗಣ: ಪೃಥ್ವಿ ಅಂಬರ್. ಕಾವ್ಯ ಶೈವಾ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ಅವಿನಾಶ್, ಮಾನಸಿ ಸುಧೀರ್, ಬಾಲರಾಜವಾಡಿ, ರಾಘು ರಮಣಕೊಪ್ಪ ಮತ್ತಿತರರು
ರೇಟಿಂಗ್: *** 3.5/5
ಕಾವೇರಿ ಒಡಲಲ್ಲಿ ನಡೆಯುವ ಮರಳು ಗಣಿಗಾರಿಕೆ, ರಾಜಕೀಯದ ತಂತ್ರ, ಕುತಂತ್ರ, ಮುದ್ದಾದ ಪ್ರೀತಿಯ ವಿಷಯನ್ನು ಮುಂದಿಟ್ಟುಕೊಂಡು ತೆರೆಗೆ ತಂದಿರುವ ಚಿತ್ರ “ ಕೊತ್ತಲವಾಡಿ”.
ಯುವ ನಿರ್ದೇಶಕ ಶ್ರೀರಾಜ್ ಮರಳು ಗಣಿಗಾರಿಕೆಯ ಸುತ್ತ ಇಡೀ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಸರಳವಾದ ಕಥೆ, ಮುಗ್ದ ಜನರನ್ನು ತಮ್ಮ ಸಾರ್ಥಕ್ಕಾಗಿ ಬಳಸಿಕೊಳ್ಳುವ ತಿರುಳು ಮತ್ತು ಅದರ ಸುತ್ತ ಸಾಗಿರುವ ಕಥೆ ಇದು.
ರಾಜ್ಯದ ಗಡಿ ಭಾಗ ಚಾಮರಾಜನಗರದ ಕೊತ್ತಲವಾಡಿಯ ಹಳ್ಳಿಯ ಕತೆ ಇದು. ಅಲ್ಲಿನ ಜನರು ಮುಗ್ದರು, ತಾವಾಯಿತು ತಮ್ಮ ಕೆಲಸ ಆಯಿತು ಎಂದು ಒಪ್ಪೊತ್ತಿನ ಗಂಜಿಗೆ ಬದುಕು ಸಾಗಿಸುವ ಮಂದಿ, ಅಲ್ಲೊಬ್ಬ ಮೇಸ್ತ್ರಿ ಮೋಹನ (ಪೃಥ್ವಿ ಅಂಬರ್) ತಂದೆ ತಾಯಿ ಇಲ್ಲದ ಅನಾಥ. ಅದೇ ಊರಿನ ಅಂಗನವಾಡಿ ಶಿಕ್ಷಕಿ ಮಂಜಿ (ಕಾವ್ಯ ಶೈವಾ) ಅಪ್ಪ-ಅಮ್ಮ ಇಲ್ಲದೆ ಅಜ್ಜಿಯ ನೆರಳಲ್ಲಿ ಬದುಕುತ್ತಿರುವಳು, ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ.
ಅದೇ ಊರಿನ ಗುಜರಿ ಬಾಬು (ಗೋಪಾಲ ಕೃಷ್ಣ ದೇಶಪಾಂಡೆ) ಗುಜರಿ ಅಂಗಡಿ ನಡೆಸುವಾತ. ಲಗೋರಿ ಕುಮಾರನ ಬಳಿ ಅಡವಿಟ್ಟ ಜಮೀನು ಬಿಡಿಸಿಕೊಳ್ಳಲು ಪರದಾಡುವ ಜನರಿಗೆ ಆಸರೆಯಾಗಿ ಬಂದ ಗುಜರಿ ಬಾಬು ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆಯುತ್ತದೆ. ಕಾವೇರಿ ನದಿಯಲ್ಲಿ ಮರಳು ತೆಗೆದು ಮಾರಾಟ ಮಾಡಲು ಮುಂದಾಗುತ್ತಾರೆ, ಅದಕ್ಕೆ ಎಸ್‍ಪಿ ಪರಶುರಾಮ (ರಾಜೇಶ್ ನಟರಂಗ) ಅಡ್ಡಿಯಾಗುತ್ತಾನೆ, ಮುಂದೇನು ಎನ್ನುವುದು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ನಿರ್ಮಾಣ ಮಾಡಿರುವ ಚಿತ್ರ ಎನ್ನುವ ನಿರೀಕ್ಷೆಯನ್ನು ಬದಿಗಿಟ್ಟು ಹೊಸ ನಿರ್ದೇಶಕನ ಚಿತ್ರ ಎಂದು ನೋಡಿದರೆ ಒಮ್ಮೆ ನೋಡಬಹುದು ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋದರೆ ತಲೆಕೆಳಗಾಗುವುದು ಸಹಜ. ಚಿತ್ರದ ಮೊದಲರ್ದ ಕಥೆ, ಹಿನ್ನೆಲೆಯಲ್ಲಿಯೇ ಸಾಗಲಿದೆ, ಕಥೆ ಆರಂಭವಾಗುದೇ ದ್ವಿತೀಯಾರ್ಧದಲ್ಲಿ. ನೆಲಮೂಲದ ಕಥೆಯನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ನಟ ಪೃಥ್ವಿ ಅಂಬರ್ ಲವ್ವರ್ ಬಾಯ್ ಇಮೇಜ್‍ನಿಂದ ಆಕ್ಷನ್ ಅವತಾರ ಎತ್ತಿದ್ದಾರೆ. ಉತ್ತಮ ನಟ ಎನ್ನುದರಲ್ಲಿ ಎರಡು ಮಾತಿಲ್ಲ, ಆಕ್ಷನ್ ಸನ್ನಿವೇಶಗಳಿಗೆ , ಅದಕ್ಕೆ ಬೇಕಾದ ಖದರ್ ಸಂಭಾಷಣೆಗೆ ಇನ್ನಷ್ಟು ಒಗ್ಗಿಕೊಂಡರೆ ಮತ್ತೊಬ್ಬ ಆಕ್ಷನ್ ಸ್ಟಾರ್ ಸಿಗುವುದರಲ್ಲಿ ಅನುಮಾನವಿಲ್ಲ.
ನಟಿ ಕಾವ್ಯ ಶೈವಾ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ಗೋಪಾಲಕೃಷ್ಣ ದೇಶಪಾಂಡೆ ನಟನೆ, ಮುಗ್ದತೆ, ನರಿಬುದ್ದಿ, ಕುತಂತ್ರ, ರಾಜಕಾರಣದಲ್ಲಿ ಹೆಸರು ಮಾಡುವ ಸ್ವಾರ್ಥಕ್ಕಾಗಿ ಜನರನ್ನು ಹೇಗೆಲ್ಲಾ ಮರಳು ಮಾಡುವ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ನಟರಂಗ ಮತ್ತು ಪೋಲೀಸ್ ಆಯುಕ್ತ ಅನಿವಾಶ್ವ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ಚರ್ಚೆಯ ಸನ್ನಿವೇಶ ಕಚೇರಿ ಹೊರಾಂಗದಲ್ಲಿ ನಡೆಯುತ್ತದೆ. ಇದು ಒಂದಿಷ್ಟು ಬಾಲಿಶ ಅನ್ನಿಸಲಿದೆ. ಇನ್ನುಳಿದಂತೆ ಬಾಲರಾಜವಾಡಿ, ಅಪೂರ್ವಶ್ರೀ, ರಾಘು ರಮಣಕೊಪ್ಪ,ಮಾನಸಿ ಸುಧೀರ್ ಚಿತ್ರದಲ್ಲಿ ಸಿಕ್ಕ ಪಾತ್ರಗಳಿಗೆ ನ್ಯಾಯೊದಗಿಸುವ ಕೆಲಸ ಮಾಡಿದ್ದಾರೆ.
ಮಣ್ಣಿಗಾಗಿ ನಡೆಯುವ ಹೋರಾಟದಲ್ಲಿ ಯಾರು ಮಣ್ಣಾಗುತ್ತಾರೆ. ಯಾರಿಗೆ ಮಣ್ಣು ಮುಕ್ಕಿಸುತ್ತಾರೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಪೊಲೀಸ್ ಅಧಿಕಾರ ಗುಡುಗುತ್ತಾನೆ, ಚಿತ್ರ ಹೇಗಿದೆ ಎನ್ನುವುದನ್ನು ಪ್ರೇಕ್ಷಕನೇ ನಿರ್ಧರಿಸಲಿದ್ದಾನೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

