ಚಂದನವನದ ಹೊಸ ಪ್ರತಿಭೆ ನಿಖಿಲ್

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ನವ ಪ್ರತಿಭೆಗಳ ಆಗಮನ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ಹಾದಿಯಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ರೂಪಗೊಂಡು ಬಂದಿರುವವರು ಬೆಂಗಳೂರಿನ ನಿಖಿಲ್. ಇವರ ಅನುಭವದ ಪಯಣ ಹತ್ತಕ್ಕೂ ಹೆಚ್ಚು ವರ್ಷವಾಗಿದೆ.

ಸಿನಿಮಾರಂಗಕ್ಕೆ ಬೇಕಾದ ಎಲ್ಲಾ ಹಂತದ ಕೆಲಸಗಳನ್ನು ಮಾಡಿ ತಿಳಿದುಕೊಂಡಿದ್ದಾರೆ. ಖ್ಯಾತ ಹಿರಿಯ ನಿರ್ದೇಶಕ ಬಿ.ರಾಮಮೂರ್ತಿÀ ಶಿಷ್ಯನಾಗಿ ಗುರುತಿಸಿಕೊಂಡು, ಮುಂದೆ ಗುರುಗಳು ಅಭಿನಯಿಸಿದ ‘ಕೊನೆಯ ಮಾತುಗಳು’ ಚಿತ್ರ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ.
ಇದರಿಂದ ಇಲ್ಲಿನ ಉದ್ಯಮದ ಆಸಕ್ತಿ ಇನ್ನಷ್ಟು ಹೆಚ್ಚಾಗಿಸಿದೆ. ಹೊಸ ಪ್ರತಿಭೆಗಳಿಗೆ ಅಂತಲೇ ‘ರಾಮೈಥಿಲಿ’ ಹಾಗೂ ‘6 ಡೇಸ್’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಾಕ್ಡೌನ್ ಕಾರಣದಿಂದ ಚಿತ್ರಗಳು ತಡವಾಗಿದ್ದು, ಪ್ರಸಕ್ತ ಎಲ್ಲವು ಕೊನೆ ಹಂತದಲ್ಲಿದೆ.
ಇದಲ್ಲದೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿದ್ದಗೊಂಡಿರುವ ವೆಬ್ ಸೀರೀಸ್ ಸರಣಿಗಳಲ್ಲಿ ನಾಯಕನಾಗಿ ಅಲ್ಲದೆ ಆಕ್ಷನ್ ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ಮನು, ಮಹೇಶ್, ಪ್ರಿಯ, ಸುಷ್ಮಾ, ಅಕ್ಷಯ್, ಅಲೋಕ್, ಶಾಂತರಾಜ್ ನಟಿಸಿದ್ದಾರೆ. ನೈನ್ ರೀಲ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ರವಿ ಛಾಯಾಗ್ರಹಣ ಇರಲಿದೆ.
ಸದ್ಯ ಇನ್ನೆರಡು ಹೊಸ ತಂಡಗಳೊಂದಿಗೆ ಸೇರಿಕೊಂಡು ನಾಯಕನಾಗಿ ಅಭಿನಯಿಸಲಿದ್ದು, ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರಂತೆ. ಇವರ ನಿರ್ದೇಶನದ ಲವ್ ಡ್ರಾಮಾ ಹೊಂದಿರುವ ಸಿನಿಮಾ ‘ಮತ್ತೆ ಪ್ರೀತ್ಸೋಣ’ ಇಷ್ಟರಲ್ಲೇ ಶುರುವಾಗಲಿದೆ. ಈಗಾಗಲೇ ಆಕ್ಷನ್ ಕಥೆ ಸಿದ್ದವಾಗಿದ್ದು, ನಾಯಕನ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತನ್ನ ಕೈಲಾದಷ್ಟು ಪ್ರತಿಭೆಗಳನ್ನು ಬಣ್ಣದಲೋಕಕ್ಕೆ ಪರಿಚಯಿಸುವುದೇ ನಿಖಿಲ್ ಗುರಿಯಾಗಿದೆಯಂತೆ.