Exclusive Intreview: Emphasis on content, making: Aim to deliver a film that appeals to people: Ashwini Puneeth Rajkumar

ಕಂಟೆಂಟ್, ಮೇಕಿಂಗ್‍ಗೆ ಒತ್ತು: ಜನರಿಗೆ ಇಷ್ಟವಾಗುವ ಚಿತ್ರ ನೀಡುವಾಸೆ- ಅಶ್ವಿನಿ ಪುನೀತ್ ರಾಜ್‍ಕುಮಾರ್ - CineNewsKannada.com

ಕಂಟೆಂಟ್, ಮೇಕಿಂಗ್‍ಗೆ ಒತ್ತು: ಜನರಿಗೆ ಇಷ್ಟವಾಗುವ ಚಿತ್ರ ನೀಡುವಾಸೆ- ಅಶ್ವಿನಿ ಪುನೀತ್ ರಾಜ್‍ಕುಮಾರ್

“ಅತ್ತೆ ಪಾರ್ವತಮ್ಮ ರಾಜ್‍ಕುಮಾರ್ ಹಾಕಿಕೊಟ್ಟ ಪರಂಪರೆ ಮತ್ತು ಸ್ಪೂರ್ತಿ ಜೊತೆಗೆ ಪತಿ ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ಮೇಲೆ ಇದ್ದ ಫ್ಯಾಶನ್, ಹೊಸ ಹೊಸ ಬಗೆಯ ಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಿಸಿದೆ. ಅದರಲ್ಲಿಯೂ ಹೊಸಬರು ಮತ್ತು ಪ್ರತಿಭಾನ್ವಿತರಿಗೆ ವೇದಿಕೆ ಮಾಡಿಕೊಡುವುದು ಪಿಆರ್ ಕೆ ಸಂಸ್ಥೆ ಉದ್ದೇಶ…”ಹೀಗಂತ ಮಾತು ಆರಂಭಿಸಿದರು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್.

ಸಾಮಾನ್ಯವಾಗಿ ಅವರ ನಿರ್ಮಾಣ ಯಾವುದೇ ಪತ್ರಿಕಾಗೊಷ್ಠಿಯಲ್ಲಿ ಹೆಚ್ಚು ಮಾತನಾಡದ ಅವರು ಕೆಲಸಕ್ಕೆ ಪ್ರಾಧಾನ್ಯತೆ ನೀಡಿದವರು. ಪಿಆರ್ ಕೆ ಆಡಿಯೊ ಮತ್ತು ಪ್ರೋಡಕ್ಷನ್ ಜವಾಬ್ದಾರಿ ಹೆಗಲ ಮೇಲೆ ಹಾಕಿಕೊಂಡು ಮುನ್ನೆಡೆಯುತಿದ್ದಾರೆ.

ಅಪರೂಪಕ್ಕೆ ಮಾತಿಗೆ ಪತ್ರಕರ್ತರವನ್ನು ತಮ್ಮ ಮನೆಗೆ ಆಹ್ವಾನಿಸಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿರುವ “ಆಚಾರ್ ಅಂಡ್ ಕೋ” ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಮನೆ ಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ ಮಾಡಿದ್ದೇವೆ ಈಗಾಗಲೇ ನೋಡಿದರೂ ಮೆಚ್ಚಿಕೊಂಡಿದ್ದಾರೆ. ಜನ ನೋಡಿ ಇಷ್ಟಪಡಬೇಕು.ಪುನೀತ್ ರಾಜ್ ಕುಮಾರ್ ಇದ್ದಾಗಲೇ ಕಥೆ ಕೇಳಿ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡರು.

ಇದುವರೆಗೂ ನಮ್ಮ ಸಂಸ್ಥೆಯ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. 60ರ ದಶಕದ ಕಾಮಿಡಿ, ಫ್ಯಾಮಿಲಿ ಎಂಟಟೈನ್ ಮೆಂಟ್ ಸಿನಿಮಾ “ಆಚಾರ್ ಅಂಡ್ ಕೋ” ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಸಹಜವಾಗಿ ಭಯವಾಗುತ್ತಿದೆ. ಪರೀಕ್ಷೆ ಬರೆದಿದ್ದೇವೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ.

  • ನಿರ್ದೇಶಕರಿಗೆ ಸ್ವಾತಂತ್ರ್ಯ:

ಕಥೆ ಇಷ್ಟವಾದರೆ ನಿರ್ದೇಶಕರಿಗೆ ಸ್ವಾತಂತ್ರ್ಯ ನೀಡುತ್ತೇವೆ. ಕೆಲ ಸಣ್ಣ ಪುಟ್ಟ ಸಲಹೆ ನೀಡುತ್ತೇವೆ.ಅದನ್ನು ಕೊನಗೆ ಸ್ವೀಕರಿಸುವುದು ಬಿಡುವುದು ಅಂತಿಮವಾಗಿ ನಿರ್ದೇಶಕರಿಗೆ ಬಿಟ್ಟವಿಷಯ. ಇದನ್ನು ಪುನೀತ್ ರಾಜ್‍ಕುಮಾರ್ ಅವರಿಂದ ಕಲಿತದ್ದು, ಹೊಸ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿಕೊಂಡರು.
ಆಚಾರ್ ಅಂಡ್ ಕೋ ಚಿತ್ರ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅವರು ಬೆಂಗಳೂರಿನ 60ರ ದಶಕ ಕತೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು. ನಿರ್ದೇಶಕಿ ಸಿಂಧು ಶೇ.100 ರಷ್ಟು ತಮ್ಮ ಸಾಮಥ್ರ್ಯವನ್ನು ಹಾಕಿದ್ದಾರೆ. ಒಳ್ಳೆಯ ಚಿತ್ರವಾಗಲಿದೆ ಎಂದರು.

ಕಾಕತಾಳೀಯ ಎಂದರೆ ಚಿತ್ರದಲ್ಲಿ ಮಹಿಳಾ ತಂತ್ರಜ್ಞರೇ ಹೆಚ್ಚಿದ್ದಾರೆ.ಇದು ಕೂಡ ಖುಷಿಯ ಸಂಗತಿ. ಸಿಂಧು ಮಾಡಿದ್ದ ಕಥೆಯನ್ನು ಪುನೀತ್ ರಾಜ್ ಕುಮಾರ್ ಕೇಳಿ ಇಷ್ಟಪಟ್ಟಿದ್ದರು. ಅಲ್ಲದೆ ನಿರ್ದೇಶಕರು ಮಾಡಿದ್ದ 6 ನಿಮಿಷದ ವಿಡಿಯೋ ನೋಡಿ, ಇವರು ಸಿನಿಮಾ ಮಾಡ್ತಾರೆ ಎನ್ನುವ ನಂಬಿಕೆ ಮೇಲೆ ಕೆಲಸ ಒಪ್ಪಿಸಿದೆವು. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ.

  • ಕನಿಷ್ಠ ಎರಡು ಸಿನಿಮಾ ನಿರ್ಮಾಣ:

ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ಪಿಆರ್‍ಕೆ ಪ್ರೋಡಕ್ಷನ್ ನಿಂದ ನಿರ್ಮಾಣ ಮಾಡುವ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಕಥೆ ಕಲಾವಿದರು ಸಿಗಬೇಕು. ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುವ ಸಂಸ್ಥೆಗಳಲ್ಲಿ ಕಂಟೆಂಟ್ ಮತ್ತು ಮೇಕಿಂಗ್ ಕಡೆ ಹೆಚ್ಚಿನ ಗಮನ ಹರಿಸುತ್ತೇವೆ. ಜೊತೆಗೆ ಸಿನಿಮಾ ಜನರಿಗೆ ಇಷ್ಟವಾಗಬೇಕು ಎಂದು ಮಾಹಿತಿ ನೀಡಿದರು ಅಶ್ವಿನಿ ಪುನೀತ್ ರಾಜ್ ಕುಮಾರ್.

ಅತ್ತೆ ಪಾರ್ವತಮ್ಮ ರಾಜ್‍ಕುಮಾರ್ ಹಾಗು ರಾಘಣ್ಣ ಅವರು ಸಿನಿಮಾ ನಿರ್ಮಾಣ ಮಾಡುವ ತೆಗೆದುಕೊಳ್ಳುತ್ತಿದ್ದ ರಿಸ್ಕ್ ಅನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ನಾವೂ ನಿರ್ಮಾಣ ಮಾಡುವಾಗ ಅದೇ ರಿಸ್ಕ್ ಎದುರಿಸುತ್ತಿದ್ದೇನೆ. ಸಿನಿಮಾ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಮುಂದೆ ಕಮರ್ಷಿಯಲ್ ಸಿನಿಮಾ ಮಾಡುವ ಬಗ್ಗೆಯೂ ಚಿಂತನೆ ಇದೆ ನೋಡೋಣ ಎಂದರು.

  • ಮೂರು ಮಂದಿ ನಿರ್ದೇಶಕರು ಬೆನ್ನೆಲುಬು:

ಪಿಆರ್ ಕೆ ಸಂಸ್ಥೆ ನಿರ್ಮಾಣ ಮಾಡುವ ಪ್ರತಿಯೊಂದು ಚಿತ್ರದ ಹಿಂದೆ ಮೂರು ಮಂದಿ ನಿರ್ದೇಶಕರ ಪಾತ್ರ ಇದೆ. ಕಥೆ ಮೊದಲು ನನಗೆ ಇಷ್ಟವಾದರೆ ಅದನ್ನು ಈ ಮೂರು ಮಂದಿಗೆ ಕಳುಹಿಸುವೆ. ಅವರೂ ಇಷ್ಟಪಟ್ಟು, ಕೆಲ ಸಲಹೆ ಸೂಚನೆ ನೀಡಿದ ಬಳಿಕ ಚಿತ್ರರೂಪಕ್ಕೆ ಬರಲಿದೆ. ಆದರೆ ಆ ಮೂರು ನಿರ್ದೇಶಕರು ಯಾರು ಎನ್ನುವುದು ಬೇಡ ಎಂದು ರಹಸ್ಯ ಕಾಪಾಡಿಕೊಂಡರು. ಸಂಸ್ಥೆಗೆ ಅವರು ಬೆನ್ನೆಲುಬು. ಜೊತೆಗೆ ಸತೀಶ್ ಕೂಡ ಎಂದು ಸಂಸ್ಥೆಗಾಗಿ ದುಡಿಯುತ್ತಿರುವ ಮಂದಿಯ ಶ್ರಮವನ್ನು ಪ್ರಶಂಸಿದರು.
ಪಿಆರ್ ಕೆ ಆಡಿಯೋ ಸಂಸ್ಥೆಯಿಂದ ಎಲ್ಲಾ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ. ಅಳೆದು ತೂಗಿ ಉತ್ತಮ ಚಿತ್ರಗಳಿಗ ಹೊಸಬರ ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್.

  • ಮೂರು ಕಾದಂಬರಿ ಮೇಲೆ ಕಣ್ಣು

ಪಾರ್ವತಮ್ಮ ರಾಜ್‍ಕುಮಾರ್ ಅವರು ಕಾದಂಬರಿ ಆಧಾರಿತ ಚಿತ್ರಗಳನ್ನು ಹೆಚ್ಚು ನಿರ್ಮಾಣ ಮಾಡುತ್ತಿದ್ದರು.ಅಲ್ಲದೆ ಅವರೂ ಕೂಡ ಕಾದಂಬರಿ ಓದುತ್ತಿದ್ದರು. ನಾನೂ ಕೂಡ ಮೂರು ಕಾದಂಬರಿ ಓದುತ್ತಿದ್ದೇನೆ. ಸಿನಿಮಾ ಮಾಡುವ ಉದ್ದೇಶವಿದೆ. ಅವು ಯಾವ ಕಾದಂಬರಿ ಎನ್ನುವುದು ಸದ್ಯಕ್ಕೆ ಬೇಡ ಎಂದರು.
ಥ್ರಿಲ್ಲರ್ ಸಿನಿಮಾ ಇಷ್ಟ. ಅದೇ ರೀತಿಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ ಮುಂದೆ ನೋಡೋಣ. ಅವಕಾಶ ಬಂದಾಗ ಎಂದು ಹೇಳಿಕೊಂಡರು.

  • ಚಿಕ್ಕ ಮಗಳಿಗೆ ಆಸಕ್ತಿ:

ದೊಡ್ಡ ಮಗಳು ಓದಿನ ಕಡೆ ಗಮನ ಹರಿಸಿದ್ದಾರೆ. ಚಿಕ್ಕ ಮಗಳಿಗೆ ಸಿನಿಮಾ ಬಗ್ಗೆ ಆಸಕ್ತಿ ಇದೆ. ಅದು ತಂತ್ರಜ್ಞರಾಗಬೇಕು ಎನ್ನುವ ಆಸೆ. ಆಗಾಗ ವಿನಯ್ ರಾಜ್‍ಕುಮಾರ್, ಯುವರಾಜ್ ಕುಮಾರ್ ಜೊತೆ ಚರ್ಚೆ ಮಾಡುತ್ತಾರೆ. ವಿನಯ್ ಕೂಡ ಅವರಿಗೆ ಬಂದ ಕತೆಗಳ ಬಗ್ಗೆ ಚರ್ಚೆ ಮಾಡ್ತಾರೆ. ಯುವ ಇನ್ನೂ ಮೊದಲ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಮಾಡುವುದು ನಮ್ಮ ಉದ್ದೇಶ ಎಂದರು ಅಶ್ವಿನಿ ಪುನೀತ್ ರಾಜ್‍ಕುಮಾರ್.

  • ವರ್ಷಾಂತ್ಯಕ್ಕೆ ಮತ್ತೊಂದು ಸಿನಿಮಾ:

ವರ್ಷಾಂತ್ಯಕ್ಕೆ ಮತ್ತೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಆ ಸಿನಿಮಾವನ್ನು ಪತ್ರಕರ್ತರೊಬ್ಬರು ನಿರ್ದೇಶನ ಮಾಡಲಿದ್ದಾರೆ. ಅವರ ಹೆಸರು ಮತ್ತು ಚಿತ್ರದ ವಿವರ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿಕೊಂಡರು ಅಶ್ವಿನಿ ಪುನೀತ್ ರಾಜ್‍ಕುಮಾರ್,

ಮೆಡಿಕಲ್, ಥ್ರಿಲ್ಲರ್ ನಿಂದ ಕೂಡಿದ “ಒ2” ಸಿನಿಮಾ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಆಶಿಕಾ ರಂಗನಾಥ್ ಚಿತ್ರದಲ್ಲಿದ್ದಾರೆ ಉಳಿದಂತೆ ಎಲ್ಲಾ ಹೊಸಬರು.. ಮೂರು ಕಾದಂಬರಿ ಓದುತ್ತಿದ್ದೇನೆ. ಸಿನಿಮಾ ಮಾಡುವ ಉದ್ದೇಶ ಇದೆ. ಆದರೆ ಅವು ಯಾವುದು ಎಂದು ಹೇಳುವುದಿಲ್ಲ.ಸಿನಿಮಾ ಆಗುವ ತನಕ ರಹಸ್ಯವಾಗಿರಲಿ ಎಂದರು ಅಶ್ವಿನಿ ಪುನೀತ್ ರಾಜ್‍ಕುಮಾರ್.

  • ಹೊಸಬರಿಗೆ ಪ್ರೋತ್ಸಾಹ

ಹೊಸ ಹೊಸ ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರಗಳ ಆಡಿಯೋ ಟ್ರೈಲರ್ ಬಿಡುಗಡೆಗೆ ಕರೆಯುತ್ತಾರೆ, ಪುನೀತ್ ರಾಜ್ ಕುಮಾರ್ ಇದ್ದಾಗ ಅವರನ್ನು ಬೆಂಬಲಿಸುತ್ತಿದ್ದರು. ನಾನೂ ಕೂಡ ಹೋಗಿ ಭೇಟಿ ಮಾಡಿ ಶುಭ ಹಾರೈಸುತ್ತಿದ್ದೇನೆ. ಹೊಸಬರು ಚಿತ್ರರಂಗದಲ್ಲಿ ಬೆಳೆಯಲಿ ಎನ್ನುವುದ ನಮ್ಮ ಹಾರೈಕೆಯೂ ಕೂಡ ಎಂದರು.

  • ಪಾಲುದಾರಿಕೆ ಬಗ್ಗೆ ಚಿಂತಿಸಿಲ್ಲ:

ಪರಭಾಷೆಯ ನಿರ್ಮಾಣ ಸಂಸ್ಥೆಗಳ ಜೊತೆಗೂಡಿ ಪಾಲುದಾರಿಕೆಯಲ್ಲಿ ಸಿನಿಮಾ ಮಾಡುವ ಬಗ್ಗೆ ಯಾವುದೇ ಉದ್ದೇಶ ಸದ್ಯಕ್ಕಿಲ್ಲ. ಮುಂದೆ ಆ ರೀತಿಯ ಪ್ರಾಜೆಕ್ಟ್ ಬಂದರೆ ನೋಡೋಣ.
ಅತ್ತೆ ಪಾರ್ವತಮ್ಮ ಆಗಲಿ, ಶಿವಣ್ಣ, ರಾಘಣ್ಣ ಸೇರಿದಂತೆ ಕುಟುಂಬದಲ್ಲಿ ಯಾರೂ ಕೂಡ ಪರಭಾಷೆಯ ಸಿನಿಮಾ ನಿರ್ಮಾಣ ಮಾಡಿಲ್ಲ. ಕನ್ನಡ ಸಿನಿಮಾಗಳನ್ನೇ ನಿರ್ಮಾಣ ಮಾಡಿಕೊಂಡು ಬಂದಿರುವುದು. ಹೀಗಾಗಿ ಪಿಆರ್ ಕೆ ಸಂಸ್ಥೆಯಿಂದಲೂ ಕನ್ನಡದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಮುಂದೆ ಯಾರಾದರೂ ಬಂದು, ಕಥೆ ಇಷ್ಟವಾದರೆ ನೋಡೋಣ, ಸದ್ಯಕ್ಕಂತೂ ಯೋಚನೆ ಮಾಡಿಲ್ಲ ಎಂದರು ಅಶ್ವಿನಿ ಪುನೀತ್ ರಾಜ್‍ಕುಮಾರ್.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin