ಟೋಬಿ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ: ಶೀಘ್ರ ಮಲೆಯಾಳಂ ನಲ್ಲಿಯೂ ಬಿಡುಗಡೆ
ವಿಭಿನ್ನ ಕಥಾಹಂದರ ಜೊತೆಗೆ ನಟ ರಾಜ್ ಬಿ ಸೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ “ಟೋಬಿ” ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಕಡೆ, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.ಇದೇ ಖುಷಿಯಲ್ಲಿ ಮಲೆಯಾಳಂನಲ್ಲಿ ಟೋಬಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಟೋಬಿ ಚಿತ್ರದಲ್ಲಿ ಮೂಗನಾಗಿ ನಟ ರಾಜ್ ಬಿ ಶೆಟ್ಟಿ ಮನಸ್ಸು ತಟ್ಟುವ ಪಾತ್ರ ಎಲ್ಲರಿಗೂ ಹಿಡಿಸಿದೆ. ಇದು ಸಹಜವಾಗಿಯೇ ನಿರ್ಮಾಪಕರಾದ ರವಿ ರೈ ಕಳಸ, ಕಾಫಿ ಗ್ಯಾಂಗ್ ಸ್ಟುಡಿಯೋ ಮತ್ತು ಬಾಲು ಅರವಣಕರ್ ಅವರಲ್ಲಿ ಒಳ್ಳೆಯ ಚಿತ್ರ ಮಾಡಿದ ಖುಷಿ ಇದೆ.

ರಾಜ್ ಬಿ ಶೆಟ್ಟಿ ಅವರಲ್ಲದೆ ಚೈತ್ರಾ ಆಚಾರ್,ಸಂಯುಕ್ತ ಹೊರನಾಡು, ರಾಜ್ ದೀಪಕ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ನಟರ ಸಹಜಾಭಿನಯ ಎಲ್ಲರ ಗಮನ ಸೆಳೆದಿರುವುದೇ ಟೋಬಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲು ಕಾರಣವಾಗಿದೆ.
ಚಿತ್ರದ ಯಶಸ್ಸು ಮತ್ತು ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ಬಾಲು ಅರವಣಕರ್ ಅವರು, ಮೊದಲ ವಾರದಲ್ಲಿ ಒಟ್ಟಾರೆ 10 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇತ್ತು.7 ಕೋಟಿ ಸಂಗ್ರಹಾವಾಗಿದೆ, ಚಿತ್ರಕ್ಕೆ ಮತ್ತೆ ಜನರು ಮೇಲಿಂದ ಮೇಲೆ ಬರುತ್ತಿದ್ದಾರೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬಂದಿರುವುದು ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು.
ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರದಿಂದ ತುಸು ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಮಾಡಿ ಉಳಿದ ಚಿತ್ರಮಂದಿರಗಳ ಕಡೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಒಳ್ಳೆಯ ಚಿತ್ರ ಮಾಡಿದ ಖುಷಿ, ನೆಮ್ಮದಿ ಕಂಡಿತಾ ಇದೆ ಎನ್ನುವ ಮಾಹಿತಿ ನೀಡಿದರು.

ಎಲ್ಲಾ ಚಿತ್ರಗಳು ಎಲ್ಲರಿಗೂ ಇಷ್ಟವಾಗಬೇಕು ಅಂದೇನಿಲ್ಲ, ಕಾಮಿಡಿ ಇಷ್ಟಪಡುವ ಮಂದಿಗೆ ಆಕ್ಷನ್, ಥ್ರಿಲ್ಲರ್ ಇಷ್ಟ ಆಗುವುದಿಲ್ಲ ಅದು ಪ್ರೇಕ್ಷಕರ ಅಭಿರುಚಿಗೆ ಬಿಟ್ಟ ಸಂಗತಿ. ಅದನ್ನು ನಾವು ತಪ್ಪು ಎಂದು ಹೇಳಲಾಗದು. ಆದರೇ ಟೋಬಿ ಚಿತ್ರ ನೋಡಿದ ಬಹುತೇಕರು ಇಷ್ಟಪಟ್ಟಿದ್ದಾರೆ. ಚಿತ್ರದ ಪ್ರಮುಖ ಕಲಾವಿದರ ಬಗ್ಗೆ ಗುಣಗಾನ ಮಾಡಿದ್ದಾರೆ. ನಿರ್ಮಾಪಕರಾಗಿ ನಾವು ಮಾಡಿದ ಕೆಲಸಕ್ಕೆ ತೃಪ್ತಿ ಇದೆ. ಎಲ್ಲರನ್ನು ಖುಷಿ ಪಡಿಸಲು ಸಾದ್ಯವಿಲ್ಲ .

ಮೈಸೂರಿನಲ್ಲಿ ಆದ ಘಟನೆಯಿಂದ ಚಿತ್ರಕ್ಕೆ ತುಸು ಹೊಡೆತ ಬಿದ್ದಿದೆ. ಅದು ಯಾವ ಕಾರಣಕ್ಕೆ ಆಗಿದೆ ಎನ್ನುವುದು ಇನ್ನೂ ಚಿತ್ರತಂಡಕ್ಕೆ ಅರ್ಥವಾಗಿಲ್ಲ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಕ್ತಿ ಚಿತ್ರತಂಡಕ್ಕೆ ಸೇರಿದವರಲ್ಲ. ಅವರು ಯಾಕೆ ಹೀಗೆ ಮಾಡಿದರು , ಇದರ ಹಿಂದೆ ಉದ್ದೇಶ ಏನಾದರು ಇದೆಯಾ ಅಥವಾ ಅನಿರೀಕ್ಷಿತವಾಗಿ ಆಗಿದ್ದಾ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಟೋಬಿ ಚಿತ್ರ ನೋಡಿದ ಶಿವಣ್ಣ, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ರಂಗಾಯಣ ರಘು, ಸೃಜನ್ ಲೋಕೇಶ್, ಮಾಲಾಶ್ರೀ, ಹಂಸಲೇಖ ಹಾದಿ ಯಾಗಿ ಎಲ್ಲರೂ ಬಹುವಾಗಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಒಂದು ತಂಡಕ್ಕೆ ಇನ್ನೇನು ಬೇಕು ಹೇಳಿ.ಒಂದು ಕಡೆ ಬಹುಪಾಲು ಪ್ರೇಕ್ಷಕರು ಮತ್ತೊಂದು ಕಡೆ ಸಿನಿಮಾ ಮಂದಿ ಅಪ್ಪಿ ಒಪ್ಪಿದ್ದಾರೆ.
ಮಲೆಯಾಳಂನಲ್ಲಿ ಬಿಡುಗಡೆಗೆ ಸಜ್ಜು:
ಕನ್ನಡದಲ್ಲಿ ಟೋಬಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಪರಭಾಷೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದು ಮೊದಲು ಮಲೆಯಾಳಂನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು. ಎಲ್ಲಾ ಅಂದುಕೊಂಡಂತೆ ಆದರೆ ಸೆಪೆಂಬರ್ 7ರ ನಂತರ ಕೇರಳದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು ಬಾಲು ಅರವಣಕರ್.

ಚಿತ್ರವನ್ನು ಯಾರು ಪ್ರೆಸೆಂಟ್ ಮಾಡ್ತಾರೆ. ಯಾರು ಬಿಡುಗಡೆ ಮಾಡ್ತಾರೆ ಎನ್ನವುವುದು ಸೇರಿದಂತೆ ಸದ್ಯದಲ್ಲಿಯೇ ಎಲ್ಲಾ ಮಾಹಿತಿ ಹಂಚಿಕೊಳ್ಳಲಾಗುವುದು.ಮಲೆಯಾಳಂ ನಲ್ಲಿ ಚಿತ್ರ ಬಿಡುಗಡೆಗೆ ಬೇಡಿಕೆ ಹೆಚ್ಚಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿಯೂ ಚಿತ್ರಕ್ಕೆ ಪ್ರತಿಕ್ರಿಯೆ ಚೆನ್ನಾಗಿದೆ. ಚೆನ್ನೈನಲ್ಲಿ ಹಾಕಿದ ಎರಡು ಶೋಗಳು ಕೂಡ ಹೌಸ್‍ಫುಲ್ ಪ್ರದರ್ಶನ ಕಂಡಿವೆ. ಇದರಿಂದ ಪರಭಾಷೆಯಲ್ಲಿಯೂ ಅವರದೇ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ಚಿತ್ರದ ಡಿಜಿಟಲ್ ಹಕ್ಕು ಮಾರಾಟವಾಗಿಲ್ಲ. ಚಿತ್ರ ಬಿಡುಗಡೆಯಾಗಿ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಬಹುದು ಎನ್ನುವ ವಿಶ್ವಾಸವಂತೂ ಇದೆ. ಒಂದೆರಡು ಕಡೆ ಕೆಟ್ಟ ಅನುಭವ ಹೊರತಾಗಿಯೂ ಚಿತ್ರ ನಿರ್ಮಾಣ ಮಾಡಿ ನಾವಂತೂ ಹ್ಯಾಪಿಯಾಗಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

