Interview: ನೇಟಿವಿಟಿಗಿಂತ ಹೊಸತನ,ಇಮೇಜ್, ಜನರಿಗೆ ಇಷ್ಟ ಆಗುವುದು ಮುಖ್ಯ: ಕಿಚ್ಚ ಸುದೀಪ್
“ವಿಕ್ರಾಂತ್ ರೋಣ ” ಚಿತ್ರ ಬಿಡುಗಡೆ ನಂತರ ಬಾದ್‍ಶಾ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ ” ಮ್ಯಾಕ್ಸ್” ಚಿತ್ರ ಡಿಸೆಂಬರ್ 25 ರಂದು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಎರಡೂವರೆ ವರ್ಷಗಳ ಬಳಿಕ ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕಿಚ್ಚನ ನೆಚ್ಚಿನ ಅಭಿಮಾನಿಗಳಲ್ಲಿ ಕಾತುಕ, ಕುತೂಹಲ ಹೆಚ್ಚು ಮಾಡಿದೆ.
ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ಅವಧಿಯಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆ ” ಮ್ಯಾಕ್ಸ್ ” ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳು ಮತ್ತು ಸಿನಿ ಪ್ರಿಯರಲ್ಲಿ ಸಿನಿಮಾ ಬಗ್ಗೆ ಕಾತುರತೆಯನ್ನು ಹಿಮ್ಮಡಿಗೊಳಿಸಿದೆ.
ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸುಂದರ ಪರಿಸರದಲ್ಲಿ ಕಿಚ್ಚ ಸುದೀಪ್ ” ಮ್ಯಾಕ್ಸ್ ” ಚಿತ್ರದ ಕುರಿತು ಮುಕ್ತವಾಗಿ ಮಾಹಿತಿ ಹಂಚಿಕೊಂಡರು.
- ಮ್ಯಾಕ್ಸ್ ” ಚಿತ್ರದ ವಿಶೇಷತೆ ಏನು. ಸಿನಿಮಾ ಬಗ್ಗೆ ಹೇಳುವುದಾದರೆ
ಚಿತ್ರದ ಕಥೆ ಇಷ್ಡವಾಯಿತು. ಈ ರೀತಿಯ ಕಥೆ ನನ್ನ ಚಿತ್ರ ಜೀವನದಲ್ಲಿ ಹೊಸದು. .ಕಥೆ ಇಷ್ಟ ಆಗಿದ್ದರೆ ಬೇರೆಯವರ ಬಳಿ ನಿರ್ದೇಶನ ಮಾಡಿಸುವ ಸ್ವಾತಂತ್ರ್ಯವೂ ಇತ್ತು. ಕಥೆಯ ಬಗ್ಗೆ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರಿಗಿದ್ದ ಕ್ಲಾರಿಟಿ ಇಡಿಸಿತು. ಹೀಗಾಗಿ ಅವರೇ ನಿರ್ದೇಶನ ಮಾಡಲಿ ಎಂದು ನಿರ್ಧರಿಸಲಾಯಿತು ಆ ಬಳಿಕ ಕಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಅಂತಿಮವಾಗಿ ಚಿತ್ರ ಮಾಡಿದ್ದೇವೆ. ಇದೇ 25 ರಂದು ಚಿತ್ರ ಬಿಡುಗಡೆಯಾಗುತ್ತಿದೆ.
- ಸಿನಿಮಾ ಇಲ್ಲಿನ ನೆಟಿವಿಟಿಗೆ ಎಷ್ಟರ ಮಟ್ಟಿಗೆ ಒಗ್ಗಿಸಿಕೊಂಡಿದ್ದೀರಿ. ಅದರ ಬಗ್ಗೆ ಹೇಳುವುದಾದರೆ
ಚೈನೀಸ್‍ಸಿನಿಮಾ ನೋಡುವಾಗ ನೇಟೀವೀಟಿ ಎಲ್ಲಿಂದ ಬರುತ್ತದೆ. ಕನ್ನಡದ ‘ಕಾಂತಾರ’ ಚಿತ್ರ ಉತ್ತರಭಾರತದಲ್ಲಿಯೂ ಯಶಸ್ವಿ ಆಯ್ತು. ನೆಟೀವಿಟಿ ಎನ್ನುವುದಕ್ಕಿಂತ ಹೊಸತನ ಬರುತ್ತೆ. ಈ ರೀತಿಯ ಸಿನಿಮಾಗಳಲ್ಲಿ ನೆಟೀವೀಟಿಗಿಂತ ಮುಖ್ಯವಾಗಿ ಇಮೇಜ್ ಬರುತ್ತೆ. ಜನ ಏನನ್ನು ನಿರೀಕ್ಷೆ ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತೆ.
- ಚಿತ್ರದ ಬಹುತೇಕ ಚಿತ್ರೀಕರಣವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ ಭಾಗದಲ್ಲಿ ನಡೆಯುವ ಕಥೆಯೇ.
ಇಲ್ಲ.ಚಿತ್ರ ನಡೆಯುವುದು ಬೆಂಗಳೂರು ಹೊರವಲಯದಲ್ಲಿ. ಮಹಾಬಲಿಪುರಂನಲ್ಲಿ ಚಿತ್ರೀಕರಣ ಮಾಡಲು ಎಲ್ಲಾ ಅನುಕೂಲ ಇದ್ದುದರಿಂದ ಅಲ್ಲಿ ಚಿತ್ರೀಕರಣ ಮಾಡಲಾಯಿತು. ನಿರ್ಮಾಪಕರು ತಮಿಳಿನಾಡಿನವರು ಆಗಿದ್ದ ಹಿನ್ನೆಲೆಯಲ್ಲಿ ಅಲ್ಲಿ ಅವರಿಗೆ ಹೋಲ್ಡ್ ಇತ್ತು. ಹೀಗಾಗಿ ಅಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ.
- ಸಿನಿಮಾದಲ್ಲಿ ಹೊಸದೇನಿದೆ. ಅದರ ಬಗ್ಗೆ ಮಾಹಿತಿ ನೀಡುವುದಾದರೆ..
ಅಮ್ಮನ ಊಟದಲ್ಲಿ ದಿನಾ ಹೊಸದು ಏನಿರುತ್ತೆ ಎಂದು ಹುಡುಕಲು ಸಾದ್ಯವೇ. ಅಲ್ಲಿ ಬಡಿಸುವಾಗ ಪ್ರೀತಿ ಜಾಸ್ತಿ ಇರುತ್ತೆ. ಹೀಗಾಗಿ ಏನೇ ಮಾಡಿದರೂ ಅದು ಹೊಸದು ಅನ್ನಿಸುತ್ತದೆ. ನನ್ನನ್ನು ಜನ ಒಪ್ಪಿಕೊಂಡು ಬಹಳ ವರ್ಷವೇ ಆಯ್ತು. ಅವರಿಗಾಗಿ ನಿರತಂತವಾಗಿ ಸಿನಿಮಾ ನೀಡುವ ಆಸೆ. ನಾನು ಮಾಡುವ ಪಾತ್ರದಲ್ಲಿ ಹೊಸದನ್ನು ಹುಡುಕುತ್ತೇನೆ. ಇದುವರೆಗೆ ಏನು ಮಾಡಿಲ್ಲ. ಈ ರೀತಿಯ ಚಿತ್ರ ಮಾಡಿದ್ದೇನಾ ಎನ್ನುವುದನ್ನು ಕಥೆ ಒಪ್ಪಿಕೊಳ್ಳುವಾಗ ನೋಡುತ್ತೇನೆ. “ಮ್ಯಾಕ್ಸ್” ಚಿತ್ರದ ಕಥೆ ಹೊಸದು. ವ್ಯಕ್ವಿತ್ವ ಬಾಡಿಲಾಂಗ್ವೇಜ್ ಎಲ್ಲದೂ ಹೊಸದು ಕಮರ್ಷಿಯಲ್ ಸಿನಿಮಾ, ಹೊಡೆದಾಟ ಬಡಿದಾಟ ಥ್ರಿಲ್ಲಿಂಗ್ ಅನಿಸಿತು. ಅಭಿಮಾನಿಗಳಿಗೆ ಇಷ್ಟ ಆಗುತ್ತೆ.
- ಮಾಕ್ಸ್ ಚಿತ್ರ ಮಾಡುವಾಗ ಎದುರಿಸಿದ ಸವಾಲು ಏನು?
ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಆಗಿದ್ದರಿಂದ ಚಿತ್ತದ ಕಂಟಿನ್ಯುಟಿ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಸಿನಿಮಾ ಒಂದೇ ರಾತ್ರಿಯಲ್ಲಾದರೂ ಏಳೆಂಟು ತಿಂಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಫೈಟ್ ಸನ್ನಿವೇಶ ಸೇರಿದಂತೆ ಯಾವುದರಲ್ಲಿಯೂ ಕಂಟಿನ್ಯುಟಿ ಮಿಸ್ ಆಗದಂತೆ ನೋಡಿಕೊಳ್ಳಬೇಕಾಗಿತ್ತು. ಏಳೆಂಟು ತಿಂಗಳ ಕಾಲ ದಪ್ಪ ಸಣ್ಣ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ಹಾಗೇನಾದರೂ ಆಗಿದ್ದರೆ ಒಂದೇ ರಾತ್ರಿಯಲ್ಲಿ ಹೀಗೆಲ್ಲಾ ಬದಲಾವಣೆ ಸಾದ್ಯತೆ ಅನ್ನಿಸಬಾರದು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ.ಚಿತ್ರೀಕರಣ ಮಾಡುವಾಗ ಸಾಕಷ್ಟು ಧೂಳು ಇದ್ದುದರಿಂದ ಅದರ ಮದ್ಯೆ ಮಾಡುವುದೂ ಕೂಡ ದೊಡ್ಡ ಸವಾಲಾಗಿತ್ತು .ಯಾವುದೂ ರೆಡ್ ಕಾರ್ಪೆಟ್ ಹಾಕಿದ ಹಾಗೆ ಬರುವುದಿಲ್ಲ. ಅದಕ್ಕಾಗಿ ಶ್ರಮ ಹಾಕಬೇಕು.
- ಮ್ಯಾಕ್ಸ್ ಚಿತ್ರ ತಡ ಆಯ್ತು ಯಾಕೆ.. ಎರಡೂವರೆ ವರ್ಷದ ನಂತರ ಸಿನಿಮಾ ಬರುತ್ತಿದೆ.ಈ ಬಗ್ಗೆ ಮಾಹಿತಿ ನೀಡುವುದಾದರೆ
28ವರ್ಷದ ಚಿತ್ರದಲ್ಲಿ 46ಸಿನಿಮಾಗಳಲ್ಲಿ ಕಾಣಕಸಿಕೊಂಡಿದ್ದೇನೆ. ಎಷ್ಟು ಸಾದ್ಯವಾಗುತ್ತೋ ಅಷ್ಟು ಜನರನ್ನು ರಂಜಿಸಲು ಕೆಲಸ ಮಾಡುತ್ತೇನೆ. ವಿಕ್ರಾಂತ್‍ರೋಣ ಚಿತ್ರ ಬಿಡುಗಡೆ ವೇಳೆ ಕೋವಿಡ್ ಸಮಸ್ಯೆಯಿಂದ ತಡ ಆಯ್ತು. ಜೊತೆಗೆ ನನಗೂ ಕೂಡ ಕೋವಿಡ್ ಬಂದಿದ್ದರಿಂದ ಹೈಡೋಸ್ ಔಷಧಿ ತೆಗೆದುಕೊಂಡಿದ್ದೆ. ವ್ಯಾಯಾಮ ಹೆಚ್ಚು ಮಾಡದಂತೆ ವೈದ್ಯರು ಸೂಚಿಸಿದ್ದರು. ಅದರಿಂದ ಚೇತರಿಸಿಕೊಳ್ಳಲು ತಡ ಆಯ್ತು. 2023ರಲ್ಲಿ ಚಿತ್ರೀಕರಣ ಆರಂಭ ಮಾಡಿದೆವು. ಜನವರಿಯಲ್ಲಿ ಬಿಡುಗಡೆ ಮಾಡುವ ಉದ್ದೇಶವಿತ್ತು. ಡೇಟ್ ಸಮಸ್ಯೆ, ನಿರ್ಮಾಣದ ವಿಷಯದಲ್ಲಿ ಒಂದಿಷ್ಟು ಅಡೆ ತಡೆ ಆಯ್ತು. ಈಗ ಅಂತಿವಾಗಿ ಜನರ ಮುಂದೆ ಬರುತ್ತಿದ್ದೇವೆ.
- ನಿಮ್ಮ ಸಿನಿಮಾಗಳನ್ನು ಇನ್ನು ಮುಂದೆ ತಡ ಆಗುತ್ತೋ.. ಬೇಗ ಬರುತ್ತೋ..ಯಾವ ರೀತಿಯ ಸಿನಿಮ ಮಾಡುವ ಆಸೆ
ಮುಂದಿನ 18 ತಿಂಗಳಲ್ಲಿ ಎರಡು ಸಿನಿಮಾ ತೆರೆಗೆ ಬರುತ್ತೆ. ಈಗಾಗಲೇ ಕಥೆ ಸೇರಿದಂತೆ ಎಲ್ಲವೂ ಸಿದ್ದವಾಗಿರುವ ಹಿನ್ನೆಲೆಯಲ್ಲಿ ತಡ ಮಾಡದೆ ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತರಲಾಗುವುದು. ವಿಷ್ಣುವರ್ಧನ, ವೀರ ಮದಕರಿ ಚಿತ್ರಗಳ ರೀತಿಯ ಸಿನಿಮಾ ಮಾಡುವ ಆಸೆ ಒಂದೊಂದು ಸಮಯದಲ್ಲಿ ಒಂದೊಂದು ಸಿನಿಮಾ ನಾನಾ ಕಾರಣದಿಂದ ಜನರಿಗೆ ಹಿಡಿಸಿವೆ
- ಮ್ಯಾಕ್ಸ್ ಚಿತ್ರದಲ್ಲಿ ನಿಮಗೆ ನಾಯಕಿ ಇಲ್ಲ. ಈ ಬಗ್ಗೆ ಮಾಹಿತಿ ನೀಡುವುದಾದರೆ
ಚಿತ್ರದಲ್ಲಿ ನಾಯಕಿ ಪಾತ್ರ ಅಗತ್ಯವಾಗಿರಲಿಲ್ಲ, ಅನಗತ್ಯವಾಗಿ ತುರುಕುವುದು ಇಷ್ಟವಿಲ್ಲ. ಅಭಿಮಾನಿಗಳಿಗೆ ರಂಜಿಸಲು ಏನೆಲ್ಲ ಬೇಕೋ ಆ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಜನರಿಗೆ ಹಿಡಿಸಲಿವೆ.
- ಸಾಮಾನ್ಯವಾಗಿ ದುಬಾರಿ ಬಜೆಟ್‍ನ ಚಿತ್ರ ಬಂದಾಗ ಟಿಕೆಟ್ ದರ ಹೆಚ್ಚು ಮಾಡಲಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ
ಯಾವುದೇ ಒಂದು ಸಿನಿಮಾ ನಿರ್ಮಾಣದ ವೆಚ್ಚ ಆಧರಿಸಿ ಚಿತ್ರಮಂದಿರದಲ್ಲಿ ಟಿಕೆಟ್ ದರ ನಿಗಧಿ ಪಡಿಸುತ್ತಾರೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅಂದುಕೊಂಡರೆ ಚಿತ್ರಮಂದಿರಲ್ಲಿ 550 ಕೋಟಿ ರೂಪಾಯಿ ಒಟ್ಟಾರೆ ಕಲೆಕ್ಷನ್ ಮಾಡಿದರೆ ನಿರ್ಮಾಪಕರು ಹಾಕಿದ ಹಣ ಬರುತ್ತೆ. 35-40 ಅಥವಾ ಅದಕ್ಕಿಂತ ಹೆಚ್ಚಿನ ಬಜೆಟ್ ಮೊತ್ತದಲ್ಲಿ ಚಿತ್ರ ನಿರ್ಮಾಣ ಮಾಡಿದವರು ಯಾರೂ ಕೂಡ ಟಿಕೆಟ್ ಬೆಲೆ 700- 800 ರೂಪಾಯಿ ಇಡುವುದಿಲ್ಲ. ಟಿಕೆಟ್ ದರ ಹೆಚ್ಚು ಮಾಡ್ತಾರೆ ಅಂದರೆ ಚಿತ್ರವನ್ನು ಮೊದಲ ದಿನವೇ ನೋಡುವ ಮಂದಿಯೂ ಇರುತ್ತಾರೆ. ಕೊಡುವ ಮನಸ್ಸಿರುವ ಮಂದಿಯನ್ನು ಗಮನದಲ್ಲಿಟ್ಟಿಕೊಂಡು ಮಾಡ್ತಾರೆ. ಸಿನಿಮಾ ಸೋತರೆ ಸಾಲ,ಬಡ್ಡಿ ತಂದು ಹಾಕಿ ನಿರ್ಮಾಪಕನ ಬೆಂಬಲಕ್ಕೆ ನಾವು ನೀವೂ ಹೋಗುವುದಿಲ್ಲ ಅಲ್ಲವೇ.. ವಿಮಾನ ನಿಲ್ದಾಣಕ್ಕೆ ಹೋಗಿ ರೇಟ್ ಜಾಸ್ತಿ ಮಾಡಬೇಡಿ ಅಂದ್ರೆ ಹೇಗೆ. ವಿಮಾನದಲ್ಲಿ ಹೋಗುವರೆ ತಾನೆ ಅಲ್ಲಿಗೆ ಹೋಗಿರುವುದು. ರೇಟೆ ನಿಗಧಿ ಮಾಡದಿದ್ದರೆ ವಿಮಾನ ಟೇಕಾಫ್ ಆಗುವುದಿಲ್ಲ.
- ಟಿಕೆಟ್ ದರ ಹೆಚ್ಚಳ ಬಗ್ಗೆ ನಿಮ್ಮ ಅಭಿಪ್ರಾಯ
ಮಗಧೀರದಂತಹ ದುಬಾರಿ ಬಜೆಟ್ ಸಿನಿಮಾ ಮಾಡಿ ಆ ನಂತರ ಮರ್ಯಾದೆ ರಾಮಣ್ಣ ನಂತಹ ಕಡಿಮೆ ಬಜೆಟ್ ಸಿನಿಮಾ ಮಾಡ್ತಾರೆ. ಆರ್ ಆರ್ ಆರ್ ನಂತರ ಬಾರಿ ಮೊತ್ತದ ಸಿನಿಮಾವನ್ನೂ ರಾಜಮೌಳಿಯಂತ ನಿರ್ದೇಶಕರು ಮಾಡುತ್ತಾರೆ. ದುಬಾರಿ ವೆಚ್ಚಕ್ಕೆ ತಕ್ಕಂತೆ ಟಿಕೆಟ್ ದರ ನಿಗಧಿ ಪಡಿಸಿದರೆ ತಪ್ಪೇನು. ನಾವಂತೂ ಸಿನಿಮಾಗೆ ಇನ್ನೂ ಟಿಕೆಟ್ ದರ ಹೆಚ್ಚು ಮಾಡಿಲ್ಲ. ಅಡುಗೆ ಆಗುವುದಕ್ಕಿಂತ ಮುಂಚೆ ಆ ಬಗ್ಗೆ ಚರ್ಚೆ ಅನಗತ್ಯ. ಟಿಕೆಟ್ ದರ ಹೆಚ್ಚು ಮಾಡಿದ ಅಲ್ಲು ಅರ್ಜುನ್ ಕೇಳಿ.
- ಮ್ಯಾಕ್ಸ್ ಚಿತ್ರದ ಕಥೆ ಏನು..
ಅಮಾನತ್ತುಗೊಂಡ ಪೊಲೀಸ್ ಅಧಿಕಾರಿ. ಅಮಾನತ್ತು ತೆರವಾಗಿ ಬೆಳಗ್ಗೆ ಆತ ಕರ್ತವ್ಯಕ್ಕೆ ಹಾಜರಾಗಬೇಕು. ಈ ನಡುವೆ ರಾತ್ರಿಯಲ್ಲಿ ನಡೆಯುವ ಕಥೆ. ಆತ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುತ್ತಾನಾ ಎನ್ನುವುದು ಕುತೂಹಲ. ಪೊಲೀಸ್ ಅಧಿಕಾರಿ ಅಮಾನತ್ತುಗೊಂಡಿದ್ದರೂ ಆತ ಪೊಲೀಸ್.ಹೀಗಾಗಿ ಆತನಿಗೆ ಇಲಾಖೆಯಲ್ಲಿರುವ ಸಹಾಯವೂ ಸಿಗುತ್ತದೆ. ಮುಂದೇನು ಚಿತ್ರ ನೋಡಿ ಎಂದರು.
- ಚಿತ್ರೀಕರಣದ ಸಮಯದಲ್ಲಿ ಮೇಕಪ್ ಮ್ಯಾನ್ ಕೂಡ ಆಗಿದ್ದಂತೆ ಹೌದಾ
ಚಿತ್ರೀಕರಣ ಸಮಯದಲ್ಲಿ ಬಿಡುವಿನ ವೇಳೆ ಎಲ್ಲಾ ಕೆಲಸ ಮಾಡಬೇಕಾಗುತ್ತದೆ. ಯಾರ ಟೇಸ್ಟ್ ಏನು ಅಂತ ಗೊತ್ತಾದಾಗ ಅದೇ ರೀತಿ ನಡೆದುಕೊಳ್ಳುತ್ತೇವೆ. ಕಲಾವಿದರನ್ನು ಹುರಿದುಂಬಿಸಲು ಅಷ್ಟೇ.
- ಬಿಲ್ಲಾ ರಂಗ ಭಾಷಾ ಚಿತ್ರದ ಕುರಿತು ಹೇಳುವುದಾದರೆ
“ಬಿಲ್ಲಾ ರಂಗ ಭಾಷ” ಚಿತ್ರದ ಒಂದೊಂದು ಪಾತ್ರವೂ ವಿಭಿನ್ನವಾಗಿರಲಿದೆ.ನಾನೂ ಕೂಡ ಪಾತ್ರದಲ್ಲಿ ಕಾಣಿಸಿಕೊಳ್ಳಲು ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಒಂದೊಂದು ಪಾತ್ರಕ್ಕೂ ತಯಾರಾಗಲು ಸಾಕಷ್ಟು ಸಮಯ ಬೇಕು. ಈ ಚಿತ್ರದಲ್ಲಿ ಎರಡು ಮೂರು ಮಂದಿ ನಾಯಕಿಯರಿದ್ದಾರೆ. ಕಥೆಗೆ ಪೂರಕವಾಗಿದ್ದಾಗ ನಾಯಕಿಯ ಆಯ್ಕೆ ಮಾಡಿಕೊಂಡರೆ ಪಾತ್ರಕ್ಕೂ ಹೆಚ್ಚು ತೂಕ ಬರುತ್ತೆ.