ಚಂದನ್ ಶೆಟ್ಟಿ ಹೊಸ ಚಿತ್ರ : ವರಮಹಾಲಕ್ಷ್ಮಿ ಹಬ್ಬದಂದು ಆರಂಭ
ರಾಪರ್,ಬಿಗ್ ಬಾಸ್, ಗಾಯಕ, ಸಂಗೀತ ನಿರ್ದೇಶಕನಾಗಿ ಒಂದೊಂದೇ ಮೆಟ್ಟಿಲು ಹತ್ತುತ್ತಾ “ಎಲ್ರ ಕಾಲೆಳೆಯುತ್ತಾ ಕಾಲ” ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಚಂದನ್ ಶೆಟ್ಟಿ ಇದೀಗ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ವರ ಮಹಾಲಕ್ಷ್ಮಿ ಹಬ್ಬದಂದು ಚಿತ್ರ ಆರಂಭವಾಗಲಿದೆ.
ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಚಿತ್ರದ ಶೀರ್ಷಿಕೆ ಸೇರಿದಂತೆ ಇನ್ನಿತೆರೆ ಮಾಹಿತಿಯನ್ನು ಇದೇ 25ರಂದು ಅಂದರೆ, ವರಮಹಾಲಕ್ಷ್ಮಿ ಹಬ್ಬದ ದಿನದಂದು ಹಂಚಿಕೊಳ್ಳಲು ಚಿತ್ರತಂಡ ಮುಂದಾಗಿದ್ದಾರೆ.
ಚಿತ್ರತಂಡ ಟೈಟಲ್ ಪೆÇ್ರೀಮೋ ಬಿಡುಗಡೆಗೊಳಿಸಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗಳೂ ಸಿಕ್ಕಿವೆ. ಈ ಮೂಲಕವೇ ಚಿತ್ರದ ಶೀರ್ಷಿಕೆ ಏನಿರಬಹುದೆಂಬ ಕುತೂಹಲ ಕೆರಳಿಸಿದೆ.
ಪ್ರತಿಭಾನ್ವಿತ ಯುವ ತಂಡ, ಒಂದೊಳ್ಳೆ ಕಥೆಯ ಮೂಲಕ ಈ ಸಿನಿಮಾದೊಂದಿಗೆ ಚಂದನ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುವ ಲಕ್ಷಣಗಳೂ ದಟ್ಟವಾಗಿವೆ. ಒಟ್ಟಾರೆ ಸಿನಿಮಾ ಹೇಗಿರಬಹುದೆನ್ನುವುದು ಶೀರ್ಷಿಕೆ ಮೂಲಕ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಶ್ರೀ ಮುರುಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅರುಣ್ ಅಮುಕ್ತ. ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅನುಭವಗಳನ್ನು ಒಗ್ಗೂಡಿಸಿಕೊಂಡು ಒಂದೊಳ್ಳೆ ಕಥೆಯೊಂದಿಗೆ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಇದೊಂದು ಟೀನೇಜ್ ಡ್ರಾಮಾ ಆಗಿರಲಿದೆ ಎಂಬ ಏಕಮಾತ್ರ ಸುಳಿವು ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ಚಿತ್ರದ ತಾರಾಗಣದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಮತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ.
ಇನ್ನುಳಿದಂತೆ ತಾಂತ್ರಿಕ ವರ್ಗವೂ ಸೇರಿದಂತೆ, ಬಹುಮುಖ್ಯವಾದ ಇನ್ನೊಂದಷ್ಟು ವಿಚಾರಗಳನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ತೀರ್ಮಾನಿಸಿದೆ.