ವಿದ್ಯಾರ್ಥಿಗಳಿಂದ ಚಂದನ್ ಶೆಟ್ಟಿ ಹೊಸ ಚಿತ್ರ “`ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಶೀರ್ಷಿಕೆ ಬಿಡುಗಡೆ
ಸಂಗೀತ ನಿರ್ದೇಶಕ ಕಮ್ ನಟ ಚಂದನ್ ಶೆಟ್ಟಿ ನಾಯಕನಾಗಿ ಕಾಣಸಿಕೊಳ್ಳುತ್ತಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಗಿದ್ದು ಚಿತ್ರ ಕುತೂಹಲ ಕೆರಳಿಸುವಂತೆ ಮಾಡಿದೆ.
ಕಾಲೇಜಿನ ಸುತ್ತ ನಟೆಯುವ ಘಟನೆಗಳನ್ನಾಧರಿಸಿ ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ಈ ಹಿಂದೆ ಶ್ರೀಮುರುಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದವರು ಅರುಣ್. ಅವರೀಗ ಈ ದಿನಮಾನದ ಟ್ರೆಂಡಿಗೆ ತಕ್ಕಂತೆ, ಹೊಸಾ ಬಗೆಯ ಕಥಾನಕದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.
ರಾಜ್ಯದ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಈ ಶೀರ್ಷಿಕೆ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ತಂಡ ಮಾಡಿದೆ.
ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂಥಾ ಚಿತ್ರಗಳು ದೊಡ್ಡ ಪ್ರಮಾಣದಲ್ಲಿಯೇ ಗೆಲುವು ದಾಖಲಿಸಿದ್ದವು. ಆ ನಂತರ ಒಂದಷ್ಟು ವರ್ಷಗಳ ಕಾಲ ಆ ಶೈಲಿಯ ಸಿನಿಮಾಗಳು ಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ದೇರ್ ಡೆವಿಲ್ ಮುಸ್ತಫಾದ ಕಾಲೇಜು ಕೇಂದ್ರಿತ ಕಥನಗಳು ಸೂಪರ್ ಹಿಟ್ ಆಗಿವೆ. ಅದೇ ಹಾದಿಯಲ್ಲಿ ಸಾಗಲು `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಸೇರಲು ಮುಂದಾಗಿದೆ.
ಚಿತ್ರದ ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ತಯಾರಾಗಿದೆ.
ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನವಿದೆ.