Dally Dhananjay starrer 'Kotee' releases in over 200 theaters on June 14

ಡಾಲಿ ಧನಂಜಯ್ ನಟನೆಯ ‘ಕೋಟಿ’ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೂನ್ 14ಕ್ಕೆ ಬಿಡುಗಡೆ - CineNewsKannada.com

ಡಾಲಿ ಧನಂಜಯ್ ನಟನೆಯ ‘ಕೋಟಿ’ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೂನ್ 14ಕ್ಕೆ ಬಿಡುಗಡೆ

ಡಾಲಿ, ನಟರಾಕ್ಷಸ ಎಂದೇ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿರುವ ಧನಂಜಯ ಅವರ ಹೊಚ್ಚ ಹೊಸ ಸಿನಿಮಾ ‘ಕೋಟಿ’ ಬಿಡುಗಡೆಗೆ ತಯಾರಾಗಿದೆ. ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಲಿದೆ. 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಸೆಟ್ಟೇರಿದ್ದ ‘ಕೋಟಿ’ ಈಗಾಗಲೇ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಎಲ್ಲ ಕೆಲಸಗಳ ಮುಗಿಸಿ ಜೂನ್ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಧನಂಜಯ್ ಪೂರ್ಣಪ್ರಮಾಣದ ಹೀರೋ ಆದಮೇಲೆ ಮಾಡಿದ ದೊಡ್ಡ ಬಜೆಟ್ಟಿನ ಸಿನಿಮಾ ಇದಾಗಿದೆ.

‘ಜಿಯೋ ಸ್ಟುಡಿಯೋಸ್’ನಂತಹ ದೊಡ್ಡ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು ಅವರ ನಾಯಕನಟನ ಆಯ್ಕೆ ‘ಧನಂಜಯ್’ ಆಗಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಜತೆಗೆ ಈ ಸಿನಿಮಾವನ್ನು ಬರೋಬ್ಬರಿ 85 ದಿನಗಳ ಕಾಲ ಬೆಂಗಳೂರು, ಮೈಸೂರು, ಚಿಕ್ಕಮಗಳೂರನಲ್ಲಿ ಚಿತ್ರೀಕರಿಸಲಾಗಿದೆ. ಧನಂಜಯ ಅವರ ಇಲ್ಲಿವರೆಗಿನ ಸಿನಿಮಾಗಳಲ್ಲಿ ಇದು ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರವಾಗಿದೆ.

ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ಯ ಗೆಲುವು ತೀರಾ ಅವಶ್ಯಕವಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮುಖಾಂತರ ಕೋಟಿ ಸದ್ದು ಮಾಡುತ್ತಿದ್ದು ಅಪ್ಪಟ ಕನ್ನಡ ಮಣ್ಣಿನ ಕತೆಯೆಂದು ಎಲ್ಲೆಡೆ ಮಾತಾಗುತ್ತಿದೆ.

ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಬಯಕೆಯ ಡ್ರೈವರ್ ‘ಕೋಟಿ’ಯ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಪ್ಯಾಮಿಲಿ ಮ್ಯಾನ್ ಅವತಾರ ಎಲ್ಲರಿಗೂ ಕನೆಕ್ಟ್ ಆಗುವ ಭರವಸೆಯನ್ನು ಟೀಸರ್ ಮತ್ತು ಹಾಡುಗಳು ನೀಡಿವೆ.

ದ್ವಿತೀಯಾರ್ಧದಲ್ಲಿ ಹಲವು ಸ್ಟಾರ್ ಸಿನಿಮಾಗಳು ಬರುವ ಸೂಚನೆ ನೀಡಿದ್ದು ‘ಕೋಟಿ’ ಮೊದಲ ಗೆಲುವಾಗುವ ಭರವಸೆ ನೀಡಿದೆ. ಜತೆಗೆ ‘ಕೋಟಿ’ಯ ಬಿಡುಗಡೆಯ ನಂತರ ಎರಡುವಾರಗಳ ಕಾಲ ಬಿಡುಗಡೆಗೆ ಸಿದ್ಧವಿರುವ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದು ‘ಕೋಟಿ’ಗೆ ವರದಾನವಾಗಲಿದೆ.

ಬಡವ ರಾಸ್ಕಲ್ ನಂತರ ಧನಂಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮತ್ತೊಂದು ಸಾಮಾನ್ಯ ಮಿಡಲ್ ಕ್ಲಾಸ್ ವ್ಯಕ್ತಿಯ ಪಾತ್ರದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆ ಸುಲಭಕ್ಕೆ ಯಾವುದೇ ಸಿನಿಮಾಗಳ ಪ್ರಮೋಷನ್‍ಗಳಿಗೆ ಹೋಗದ ಕಿಚ್ಚ ಸುದೀಪ್ ಇತ್ತಿಚೆಗೆ ನಡೆದ ‘ಕೋಟಿ’ ಪ್ರೀರಿಲೀಸ್ ಟೀವಿ ಕಾರ್ಯಕ್ರಮಕ್ಕೆ ತೆರಳಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ಡಾಲಿಗೆ ಶುಭ ಹಾರೈಸಿದ್ದಾರೆ.

‘ಕೋಟಿ’ ಸಿನಿಮಾ ಧನಂಜಯ್ ಅವರಿಗೆ ದೊಡ್ಡ ಯಶಸ್ಸು ತರಲಿ ಮತ್ತು ಚಂದನವನದ ಈ ವರ್ಷದ ಮೊದಲ ದೊಡ್ಡ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಬಯಕೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin