ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ‘ಅಲೈಕ್ಯಾ’ ಚಿತ್ರದ ಟ್ರೈಲರ್ ಆಡಿಯೋ ಬಿಡುಗಡೆ
ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯ ಕಥಾಹಂದರ ಒಳಗೊಂಡ ಚಿತ್ರ ಅಲೈಕ್ಯಾ. 21-21-21 ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಡುಗಳು ಬಿಡುಗಡೆಯಾಗಿದ್ದು ಹಿರಿಯನಟ ಸುಚೇಂದ್ರಪ್ರಸಾದ್ ಹಾಗೂ ನಟಿ ಸಂಜನಾ ನಾಯ್ಡು ತಂಡಕ್ಕೆ ಶುಭ ಹಾರೈಸಿದರು.
ಹಿತೇಶ್ ಮೂವೀಸ್ ಲಾಂಛನದಲ್ಲಿ ಎಂ.ಭೂಪತಿ ನಿರ್ಮಿಸಿರುವ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಲೈಕ್ಯಾ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಈ ಹಿಂದೆ ಮಳೆಬಿಲ್ಲು ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾತ್ವಿಕ್ ಎಂ.ಭೂಪತಿ ಅವರು ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ.
ಒಂದಷ್ಟು ಸ್ನೇಹಿತರ ತಂಡ ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಅವರು ಗೆಸ್ಟ್ ಹೌಸ್ ವೊಂದಕ್ಕೆ ತೆರಳಿ ಅಲ್ಲಿ ತಂಗುತ್ತಾರೆ. ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಗಳಿಂದ ಆ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ಗೊತ್ತಾಗಿ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿ ಬೆಲೆಬಾಳುವ ಅಮೂಲ್ಯ ವಜ್ರವಿದ್ದು, ಈ ಆತ್ಮಗಳೆಲ್ಲ ಅದಕ್ಕೆ ಕಾವಲಾಗಿರುತ್ತವೆ ಅಂತ ಅವರಿಗೆ ಗೊತ್ತಾಗುತ್ತದೆ. ಅದರಲ್ಲಿ ಒಂದು ಅತ್ಮ ಮಾತ್ರ ಇವರನ್ನು ಅಲ್ಲಿಂದ ಹೊರ ಕಳಿಸಲು ನೋಡಿದರೆ, ಮತ್ತೊಂದು ಆತ್ಮ ಅಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ಆ ಆತ್ಮದ ಸಹಾಯದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಂಡು ಹೊರಬರುತ್ತಾರೆ, ಅಷ್ಟಕ್ಕೂ ಅವರಿಗೂ, 21-21-21 ನಂಬರಿಗೂ ಇರುವ ಸಂಬಂಧವೇನು ಎಂಬುದೇ ಚಿತ್ರದ ಕಥಾಹಂದರ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಾತ್ವಿಕ್, ಇದೊಂದು ಹಾರರ್ , ಥ್ರಿಲ್ಲರ್ ಚಿತ್ರ. ನಾಲ್ಕು ಪಿಲ್ಲರ್ ಗಳ ಸಹಕಾರದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ ಎಂದರು.
ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಸಾಯಿ ಸೋಮೇಶ್ ಅವರ ಸಂಗೀತ, ಬುಗುಡೆ ವೀರೇಶ್ ಅವರ ಛಾಯಾಗ್ರಹಣ, ಮುತ್ತುರಾಜ್ ಅವರ ಸಂಕಲನ, ಹರಿಪ್ರಸಾದ್ ಅವರ ಸಾಹಿತ್ಯ ಹಾಗೂ ತೇಜ್ ಆರಾಧ್ಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಪಂಚಮಜೀವ, ಸುಪ್ರೀತ್ ಶರ್ಮ ಹಾಗೂ ಸುರಭಿ ಭಾರದ್ವಾಜ್ ಚಿತ್ರದ ಹಾಡುಗಳಿಗೆ ಧನಿಯಾಗಿದ್ದಾರೆ. ದರ್ಶಿನಿ ಆರ್.ಒಡೆಯರ್, ನಿಸರ್ಗ ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್, ಜಾಹ್ನವಿ, ವಿ, ನಾರಾಯಣ ಸ್ವಾಮಿ ಡಿ.ಎಂ., ಸಾತ್ವಿಕ್ ಎಂ.ಭೂಪತಿ, ಶಿವಕುಮಾರ್, ಡಿ.ಕೆ. ಮಂಜು, ಶಿವಮ್ಮ ಮುಂತಾದವರು ನಟಿಸಿದ್ದಾರೆ.ಡಿ.ಎಸ್.ಕೆ. ಸಿನಿಮಾಸ್ ನ ಸುನಿಲ್ ಕುಂಬಾರ್ ಅವರು ಈ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.