ಮಕ್ಕಳ ಸಾಹಸದ “ಭಗವತಿ” ಚಿತ್ರಕ್ಕೆ ಚಾಲನೆ
ಬಂಗಾರಿ, ಶಿವನಪಾದ ಸೇರಿದಂತೆ ಹಲವಾರು ಚಿತ್ರ ನಿರ್ದೇಶಿಸಿದ ಮಾಚಂದ್ರು ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮಕ್ಕಳ ಸಾಹಸದ ಕಥೆ ಇರುವ ಮತ್ತೊಂದು ಚಿತ್ರ ಭಗವತಿ. ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ವಿಜಯ ನಗರದ ಮಾರುತಿ ಮಂದಿರದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ವಿದ್ಯಾಧರೆ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ.
ಈ ಹಿಂದೆ ಲೂಸ್ ಮಾದ ಯೋಗಿ, ರಾಗಿಣಿ ಅಭಿನಯದ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಈ ಸಲ ಮಕ್ಕಳ ಸಾಹಸದ ಕಥಾನಕ ಒಳಗೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಮಕ್ಕಳ ಸಾಹಸಮಯ ಕಾಥಾಹಂದರ ಈ ಚಿತ್ರದಲ್ಲಿದೆ. ಈಗಿನ ಜನರೇಶನ್ ಕುರಿತಾದ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ಮಕ್ಕಳು ಹೇಗೆ ಹೋರಾಡಿ ಗೆಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ರಾಜೇಶ್ ಗೌಡ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.
ಆಗಸ್ಟ್ 5ರಿಂದ ಆರಂಭಿಸಿ ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಭಗವತಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ.ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ. ಹೇರಂಭ ಭಾನು, ಮೋಹನ್ ಕುಮಾರ್ ಡಿ.ಕೆ. ಸತೀಶ್, ಶರತ್, ಹರ್ಷ. ಮುಂತಾದವರು ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತಿದೆ.