`ಸೇನಾಪುರ’ ಟ್ರೇಲರ್ ಬಿಡುಗಡೆ: ನವೆಂಬರ್ ನಲ್ಲಿ ಚಿತ್ರ ತೆರೆಗೆ
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಡೆದ ನೈಜಘಟನೆ ಆಧಾರಿತ ಚಿತ್ರ ಸೇನಾಪುರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್, ನಟಿ ಪ್ರಿಯಾ ಹಾಸನ್ ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.
ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮಾತನಾಡಿ, ಚಿತ್ರತಂಡ ಬಂದು ಕೇಳಿದಾಗ ಸೇನಾಪುರ ಏನೋ ವಿಶೇಷವಾಗಿದೆ. ಬಳಿಕ ಎಲ್ಲಾ ವಿವರಗಳು ಗೊತ್ತಾಯಿತು. ಟ್ರೇಲರ್ ಲಾಂಚ್ ಆಗಿದೆ. ಇಡೀ ತಂಡದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
ನಿರ್ದೇಶಕ ಗುರು ಸಾವನ್ ಮಾತನಾಡಿ, ಸೇನಾಪುರ ಸಿನಿಮಾ ಮಾಡಲು ಹೊರಟಿರಲಿಲ್ಲ. ವೆಬ್ ಸೀರಿಸ್ ಮಾಡಬೇಕು ಎಂದುಕೊಂಡಿದ್ದೆ. ಕುಂದಾಪುರ ಹಾಗೂ ಕರಾವಳಿ ಭಾಗದಲ್ಲಿ ನಡೆದ ಕೆಲ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿಭಿನ್ನವಾಗಿ ಕಥೆ ಎಣೆಯಲಾಗಿದೆ. ಚಿತ್ರ ನೈಜತೆಗೆ ಹತ್ತಿರವಾಗಿದೆ. ಸೇನಾಪುರ ಸಿನಿಮಾ ರೆಡಿಯಾಗಿದೆ. ನವೆಂಬರ್ 2ನೇ ವಾರ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಒಂದು ಕಾಲಘಟ್ಟದಲ್ಲಿ ಅಕ್ರಮ ಗಣಿ ದಂಧೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಬಿಸಿಲು ನಾಡಿನ ಒಡಲಲ್ಲಿ ನಡೆದಿದ್ದ, ದಂಧೆಯ ಕಬಂಧ ಬಾಹುಗಳು ಕರಾವಳಿಯ ಕಿನಾರೆಗಳವರೆಗೂ ಮೈಚಾಚಿಕೊಂಡಿತ್ತು. ಇಂತಹ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು ‘ಸೇನಾಪುರ’ ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ಕುಂದಾಪುರದ ನವ ಪ್ರತಿಭೆ ಗುರುಸಾವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅಮಿತ್ ಕುಮಾರ್ ಮತ್ತು ರಾಹುಲ್ ದೇವ್ ಬಂಡವಾಳ ಹಾಕಿದ್ದಾರೆ.
ಕಾಡು ಮತ್ತು ಸಮಾಜದ ನಡೆಯುವ ತಿಕ್ಕಾಟದಲ್ಲಿ ಅರಿವು ಮೂಡಿಸುವ ಪಾತ್ರದಲ್ಲಿ ಗಾಯಕಿ ಅನನ್ಯ ಭಟ್ ಕಾಣಿಸಿಕೊಂಡಿದ್ದಾರೆ.
ದಿನೇಶ್ ಮಂಗಳೂರು ಸಾವುಕಾರ್ ಪಾತ್ರ ಮಾಡಿದ್ದಾರೆ . ಅನನ್ಯ ಭಟ್ ಮೊದಲ ಬಾರಿ ಮಹಿಳಾ ಪ್ರಧಾನ ಕತೆಯಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿರುವುದರ ಜೊತೆಗೆ ಎರಡು ಹಾಡುಗಳಿಗೆ ಸಂಗೀತದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ತಾರಾಗಣದಲ್ಲಿ ದಿನೇಶ್ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ, ಶೇಖರ್‍ರಾಜ್, ರೀನ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಪ್ರಶಾಂತ್‍ಸಾಗರ್, ಅರ್ಜುನ್ ಸಂಕಲನ, ಪ್ರಮೋದ್ ಮರವಂತೆ ಸಾಹಿತ್ಯ, ಅರ್ಜುನ್ ಶ್ರೀನಿವಾಸಯ್ಯ ಸಂಕಲನವಿದೆ. ಮಂಗಳೂರು, ಸಂಪೆಕಟ್ಟೆ ತಾಣದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೇ ನವೆಂಬರ್ ಗೆ ಸೇನಾಪುರ ಸಿನಿಮಾ ತೆರೆಗೆ ಬರಲಿದೆ.