ಶಿವಾಜಿ ಸೂರತ್ಕಲ್-2 ಕಡೆತನಕ ಕಾಡುವ ಚಿತ್ರ

ಚಿತ್ರ: ಶಿವಾಜಿ ಸೂರತ್ಕಲ್-2
ನಿರ್ದೇಶನ: ಆಕಾಶ್ ಶ್ರೀವತ್ಸ
ನಿರ್ಮಾಣ: ಅನೂಪ್ ಗೌಡ
ತಾರಾಗಣ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್ , ಮೇಘನಾ ಗಾಂವಕರ್, ರಾಘು ರಮಣಕೊಪ್ಪ, ನಾಸರ್, ವಿನಾಯಕ ಜೋಷಿ, ವಿದ್ಯಾಮೂರ್ತಿ ಹಾಗು ಬೇಬಿ ಆರಾಧ್ಯ ಮತ್ತಿತರರು
ರೇಟಿಂಗ್: ** 4/5
ಒಂದರ ಹಿಂದೆ ಒಂದರಂತೆ ಕೊಲೆ, ಒಂದೇ ರೀತಿಯ ಕುರುಹು,ಕೊಲೆಗಾರ ಯಾರೆನ್ನುವುದೇ ಕುತೂಹಲ.ಅವರಾ ಇವರಾ,ಎನ್ನುವ ಗೊಂದಲ, ಒಬ್ಬೊಬ್ಬರ ಮೇಲೆ ಮತ್ತೊಬ್ಬರಿಗೆ ಅನುಮಾನ… ಜೊತೆಗೆ ತಂಡವನ್ನೇ ನಂಬದ ಸ್ಥಿತಿ..
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರಣಿ ಕೊಲೆಗಾರನ ಬೆನ್ನು ಹತ್ತುವುದೇ ರಣರೋಚಕ. ಕುತೂಹಲ ಭರಿತ ಕಥೆ,ತುದಿಗಾಲ ಮೇಲೆ ನಿಲ್ಲಿಸಿ ಕೊನೆ ತನಕ ನೋಡುವಂತೆ ಮಾಡಿದ ಚಿತ್ರ “ಶಿವಾಜಿ ಸೂರತ್ಕಲ್-2”.
ಮೊದಲ ಭಾಗದಲ್ಲಿ ರಣಗಿರಿ ರಹಸ್ಯ ಭೇದಿಸಿದ್ದ ಪೋಲಿಸ್ ಅಧಿಕಾರಿ ಶಿವಾಜಿ, ಭಾಗ-2ರಲ್ಲಿ ಸರಣಿ ಕೊಲೆಗಾರ ಯಾರು ಎನ್ನುವುದರ ಹಿಂದೆ ಬಿದ್ದವ. ತನ್ನ ಮೇಲೆ ಆರೋಪ ಬಂದು ಗೃಹ ಬಂಧನದಲ್ಲಿದ್ದಾಗ ಆತನಿಗೆ ಸಿಕ್ಕ ಸುಳಿವು ಕೊಲೆಗಾರನ ಬಣ್ಣ ಬಯಲು ಮಾಡಿ ಬಿಡುತ್ತದೆ. ಹಾಗಾದರೆ ಮಾಯಾವಿ ಕೊಲೆಗಾರ ಯಾರು. ತಂಡದಲ್ಲಿ ಇರುವರಾ.. ಇಲ್ಲ ಹೊರಗಿನವರಾ. ಕುತೂಹಲಕ್ಕೆ ಉತ್ತರ ಕಂಡುಕೊಳ್ಳಲು ಶಿವಾಜಿ ಸೂರತ್ಕಲ್ ನೋಡಬೇಕು..
ಪತ್ತೆದಾರಿ ಚಿತ್ರ ಪ್ರತಿಪಕ್ಷವೂ ಕುತೂಹಲ ಹೆಚ್ಚಿಸುತ್ತಲೇ ಸಾಗಿದೆ. ಪತ್ತೆದಾರಿ ಕಾದಂಬರಿ ಓದಿದವರಿಗೆ ಅದರ ಅನುಭವವನ್ನು ಹೀಗೆಲ್ಲಾ ಇರಬಹದಾ ಎಂದು ಊಹೆ ಮಾಡಿಕೊಂಡವರಿಗೆ. ಪತ್ತೆದಾರಿ ಕಥನ ಹೀಗೂ ಉಂಟು ಎಂದು ತೋರಿಸಿಕೊಟ್ಟ ಚಿತ್ರ ಶಿವಾಜಿ ಸೂರತ್ಕಲ್-2.
ಶಿವಾಜಿ ಸೂರತ್ಕಲ್ (ರಮೇಶ್ ಅರವಿಂದ್) ಹೆಂಡತಿ ಜನನಿ (ರಾಧಿಕಾ ನಾರಾಯಣ್ )ಗೆ ಕೊಟ್ಟ ಭರವಸೆಯಂತೆ ಚುಕ್ಕಿ -ಸಿರಿ ಸೂರತ್ಕಲ್ (ಬೇಬಿ ಆರಾಧ್ಯ)ಳನ್ನು ದತ್ತು ಸ್ವೀಕಾರ ಮಾಡುತ್ತಾನೆ. ತನಗಿರುವ ಆರೋಗ್ಯ ಸಮಸ್ಯೆ ನಡುವೆ ಮಗಳನ್ನು ನೋಡಿಕೊಳ್ಳುತ್ತಿರುವಾಗ ಡಿಸಿಪಿ ದೀಪಾ ಕಾಮತ್ (ಮೇಘನಾ ಗಾಂವಕರ್) ತುರ್ತು ಕರೆ. ಕೊಲೆಗಾರನ್ನು ಪತ್ತೆ ಹಚ್ಚುವ ಜವಾಬ್ದಾರಿ.

ಕೊಲೆಯ ಜಾಡು ಹಿಡಿದು ಹೊರಟ ಶಿವಾಜಿಗೆ ಕೊಲೆಯ ರಹಸ್ಯ ಕಂಡುಹಿಡುವುದೇ ಸವಾಲು. ಒಂದರ ಸುಳಿವು ಪಡೆದವನಿಗೆ ಮತ್ತೆ ನಾಲ್ಕು ಕೊಲೆ ಒಂದೇ ಕಾರಣಕ್ಕಾಗಿ ಎನ್ನುವ ಸತ್ಯ ತಿಳಿದ ನಂತರ ಐದನೇ ಕೊಲೆ ತಾನೇ ಎಂದಾಗ ಮುಂದೇನು ಮಾಡುತ್ತಾನೆ. ಕೊಲೆಗಾರನನ್ನು ಹೆಡೆ ಮುರಿ ಕಟ್ಟುತ್ತಾನಾ ಎನ್ನುವುದ ಚಿತ್ರದ ಕುತೂಹಲ.
ನಟ ರಮೇಶ್ ಅರವಿಂದ್ ಪತ್ತೆದಾರಿ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ನಟಿಸಿದ್ದಾರೆ. ರಮೇಶ್ ಅವರು ಬಿಟ್ಟರೆ ಬೇರೊಬ್ಬರು ಪಾತ್ರಕ್ಕೆ ಜೀವ ತುಂಬಲಾರರು ಎನ್ನುವ ಮಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.ಈ ಮೂಲಕ ತ್ಯಾಗರಾಜನ ಪಾತ್ರದಿಂದ ಮತ್ತೊಂದು ಬಗೆಯ ಪಾತ್ರದಲ್ಲಿ ಮಿಂಚಿದ್ದಾರೆ.
ಪತ್ತೆದಾರಿಯ ಜೊತೆಗೆ ನಿರ್ದೇಶಕ ಆಕಾಶ್ ಶ್ರೀವತ್ಸ, ಮಗಳಿಗಾಗಿ ಹಾತೊರೆಯುವ ತಂದೆ, ಮಗನಿಗಾಗಿ ಹಂಬಲಿಸುವ ತಂದೆ, ಜೊತೆಗೆ ಗಂಡನ್ನು ನೆರಳಾಗಿ ಹಿಂಬಾಲಿಸುವ ಹೆಂಡತಿ ಇದರ ನಡುವೆಯೇ ಸಂಬಂಧವನ್ನು ಕೌತುಕಮಯವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನಟಿ ರಾಧಿಕಾ ನಾರಾಯಣ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.ಅದೇ ರೀತಿ ಮೇಘನಾ ಗಾಂವಕರ್ ಕೂಡ. ರಾಘುರಮಣಕೊಪ್ಪ, ನಾಸರ್, ವಿದ್ಯಾಮೂರ್ತಿ,ಬೇಬಿ ಆರಾಧ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಹೊಡಿ,ಬಡಿ ಅಬ್ಬರ,ಆರ್ಭಟದ ನಡುವೆ ಸೈಲೆಂಟ್ ಆಗಿಯೇ ಸದ್ದು ಮಾಡಿದ ಚಿತ್ರ ಶಿವಾಜಿ ಸೂರತ್ಕಲ್-2.