Sidlingu-2 Review: ವಿಡಂಬನೆ ಜೊತೆಗೆ ನಗುವಿನ ಕಲರವದ ಚಿತ್ರ ಸಿದ್ಲಿಂಗು-2
ಚಿತ್ರ: ಸಿದ್ಲಿಂಗು -2
ನಿರ್ದೇಶನ : ವಿಜಯ್ ಪ್ರಸಾದ್
ತಾರಾಗಣ: ಯೋಗಿ, ಸೋನುಗೌಡ, ಪದ್ಮಜಾ ರಾವ್, ಸುಮನ್ ರಂಗನಾಥ್, ವಿಜಯ್ ಪ್ರಸಾದ್, ಮಹಂತೇಶ್ ಹಿರೇಮಠ್ ಸೀತಾ ಕೋಟೆ, ಬಿ. ಸುರೇಶ್ ಮತ್ತಿತರರು
ರೇಟಿಂಗ್ : *** 3.5 /5
ತುಂಟತನ, ವ್ಯಂಗ್ಯ,ವಿಡಂಬನೆ, ಒಂದಷ್ಟು ಹೆಚ್ಚಾಗಿಯೇ ಡಬ್ಬಲ್ ಮೀನಿಂಗ್ ಸೇರಿಸಿ ಕೆಲವೊಮ್ಮೆ ನೇರಾ ನೇರ ವಿಷಯಕ್ಕೆ ಬರುತ್ತಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಬದಲಾಗಿದ್ದಾರೆ. ಹೀಗಾಗಿಯೇ “ಸಿದ್ಲಿಂಗು-2” ಮೂಲಕ ಸೋತು ಗೆದ್ದಿದ್ದಾರೆ.
ಅತಿಯಾದರೆ ಅಮೃತವೂ ವಿಷವಾಗಲಿದೆ ಎನ್ನುವುದನ್ನು ಅರಿತ ನಂತರ ಹಿತ ಮಿತವಾಗಿ ಅಗತ್ಯಕ್ಕೆ.ಎಲ್ಲಿ ಬೇಕೋ ಅಲ್ಲಿ ಯಾವ ವಿಷಯ ಹೇಳಬೇಕು ಎನ್ನುವ ಕಲೆ ಕರೆಗತ ಮಾಡಿಕೊಂಡ ನಿರ್ದೇಶಕರು ಯಾವುದನ್ನು ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತಲೇ ಅಲ್ಲಲ್ಲಿ ಹೊಟ್ಟೆ ಹುಣ್ಣಾಗಿಸಿದ್ದಾರೆ . ಇದರ ಜೊತೆ ಜೊತೆಗೆ ಸಮಾಜದಲ್ಲಿ ನಡೆದ ಹಲವು ಘಟನೆಗಳಿಗೆ ಕನ್ನಡಿ ಹಿಡಿದಿದ್ದಾರೆ.
ಸಿನಿಮಾ, ರಾಜಕೀಯ, ಉದ್ಯಮಿಗಳನ್ನು ಅಲ್ಲಲ್ಲಿ ಕೆಣಕಿದ್ದಾರೆ ಅವರನ್ನು ಕಿಚ್ಚಾಯಿಸಿ ಹಲವು ವಿಷಯಗಳನ್ನು ಅಲ್ಲಲ್ಲಿ ಸಹಜವಾಗಿಯೇ ಸೇರಿಸಿದ್ದಾರೆ. ಎಲ್ಲಿ ಕೂಡ ಅತಿರೇಕ ಅನ್ನಿಸದು .ಈ ಕಾರಣಕ್ಕೆ ಯೋಗಿ ಅಭಿನಯದ ಸಿದ್ಲಿಂಗು- 2 ಚಿತ್ರ ಪ್ರೇಕ್ಷಕರಿಗೆ ಹಿಡಿಸಿದೆ.

ಹನ್ನೆರಡು ವರ್ಷಗಳ ಹಿಂದೆ ತೆರೆಗೆ ಬಂದು ಯಶಸ್ಸು ಕಂಡಿದ್ದ ಸಿದ್ಲಿಂಗು ಚಿತ್ರದ ಮುಂದುವರಿದ ಭಾಗ ಇದು. ಆ ಚಿತ್ರ ಕೆಲ ಸನ್ನಿವೇಶಗಳನ್ನು ನೆನಪಿಸುತ್ತಲೇ ಸಿದ್ಲಿಂಗು- 2 ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.
ಸಿದ್ಲಿಂಗು ಚಿತ್ರದಲ್ಲಿ ಹಳೆಯ ಕಾಲದ ಕಾರಿಗಾಗಿ ಎಲ್ಲವನ್ನು ಕೆಳದುಕೊಂಡಿದ್ದ ಸಿದ್ಲಿಂಗು (ಯೋಗಿ) ಈ ಚಿತ್ರದಲ್ಲಿ ಕಳೆದಿದ್ದನ್ನು ಪಡೆಯುವ ಜೊತೆಗೆ ಒಂದಷ್ಟು ಹೊಸ ಕಲಾವಿದರೊಂದಿಗೆ ಲವಲವಿಕೆಯಿಂದ ಸಾಗಿದೆ.ಮನೆ ಕೆಲಸ ಮಾಡುವ ವಿಶಾಲು ( ಸೀತಾ ಕೋಟೆ) ಮೂಲಕ ಪರಿಚಯವಾದ ಸರ್ಕಾರಿ ಶಾಲೆಯ ಶಿಕ್ಷಕಿ ನಿವೇದಿತಾ (ಸೋನು ಗೌಡ)ರಲ್ಲಿ ಮಂಗಳ ಮೇಡಂ ( ಹಿಂದಿನ ಚಿತ್ರದಲ್ಲಿ ರಮ್ಯಾ) ಕಂಡವ. ಆಕೆ ಸಂಕಷ್ಟಕ್ಕೆ ಭಾಗಿಯಾದವ.
ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿದ್ಲಿಂಗು ಗೆ ಮನೆ ಕಾರು, ಎಲ್ಲವೂ ಇದ್ದರೂ ಹಳೆ ಕಾರಿನ ಮೇಲೆ ಅಸೆ, ಮತ್ತೊಂದೆಡೆ ಮಗಳನ್ನು ಬೀದಿ ನಾಯಿಗಿಂತ ಕಡೆಯಾಗಿ ಕಾಣುವ ಅಪ್ಪ, ( ಬಿ. ಸುರೇಶ) ತಾಯಿಯಷ್ಟೇ ಪ್ರೀತಿ ಮಾಡುತ್ತಿದ್ದ ಸೀತಮ್ಮ ( ಪದ್ಮಜಾ ರಾವ್) ಗಂಡನ ಬಿಟ್ಟು ಬಂದಿರುವ ಅಂಡಾಳಮ್ಮ ( ಸುಮನ್ ರಂಗನಾಥ್) ಅಪ್ಪ ಮಗಳನ್ಜು ಒಂದು ಮಾಡ್ತಾನಾ,, ಬಯಸಿದ ಕಾರು ಪಡೆಯುತ್ತಾನಾ, ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ವಿಜಯ್ ಪ್ರಸಾದ್ ಹಿಂದಿನ ಚಿತ್ರಗಳಿಂದ ಪಾಠ ಕಲಿತಿದ್ದಾರೆ. ಹೀಗಾಗಿಯೇ ಅವರ ಪೆನ್ನಿಗೆ ಲಗಾಮು ಹಾಕಿದ್ದಾರೆ. ಮಾತನ್ನು ಹಿಗ್ಗಾ ಮಗ್ಗಾ ಹರಿ ಬಿಡದೆ ಎಷ್ಟು ಬೇಕೋ ಅಷ್ಟು ಬಳಸಿದ್ದಾರೆ. ಅದರಲ್ಲಿ ಯಶಸ್ಸು ಕಂಡಿದ್ದಾರೆ. ಜೊತೆಗೆ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕರ ಮುಖದಲ್ಲಿ ನಗುತರಿಸಿದ್ದಾರೆ.
ನಾಯಕ ಯೋಗಿ, ಸಹಜ ಅಭಿನಯದಿಂದಲೇ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಈ ಮೂಲಕ ತಾವೊಬ್ಬ ಪರಿಪೂರ್ಣ ಪಕ್ವ ಕಲಾವಿದ ಎನ್ನುವುದು ಇನ್ನೊಮ್ಮೆ ಸಾಬೀತು ಮಾಡಿದ್ದಾರೆ. ಒಳ್ಳೆಯವರಿಗೆ ಒಳ್ಳೆಯ ಕಾಲ ಬರುತ್ತದೆ ಅದಕ್ಕಾಗಿ ಕಾಯಬೇಕು ಎನ್ನುವುದನ್ನು ಸಿದ್ಲಿಂಗು-;2 ನಿರೂಪಿಸಿದೆ.
ನಾಯಕಿ ಸೋನು ಗೌಡ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಪದ್ಮಜಾ ರಾವ್, ಸೀತಾ ಕೋಟೆ,ಮಹಂತೇಶ್ ಹಿರೇಮಠ, ಬಿ.ಸುರೇಶ್, ಸುಮನ್ ರಂಗನಾಥ್ ಸೇರಿದಂತೆ ಹಲವು ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ.
ಅನೂಪ್ ಸೀಳಿನ್ ಸಂಗೀತ ಕೂಡ. ಒಂದೇ ರೀತಿಯ ಸಿನಿಮಾ ನೋಡಿ ಬೋರಾಗಿದ್ದರೆ ಒಂದಷ್ಟು ರಿಪ್ರಶ್ ಗೆ , ಹೊಟ್ಟೆ ಹುಣ್ಣಾಗಿಸುವಷ್ಟು ನಗಬೇಕಾದರೆ ಸಿದ್ಲಿಂಗು- 2 ಚಿತ್ರ ನೋಡಬಹುದು.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

