The Rise of Ashoka Movie Review : ಶೋಷಣೆ, ದೌರ್ಜನ್ಯದಲ್ಲಿ ನೊಂದು, ಬೆಂದ ಸಮುದಾಯದ ಜನರ ಕಥನ
ಚಿತ್ರ ; ದಿ ರೈಸ್ ಆಫ್ ಅಶೋಕ
ನಿರ್ದೇಶಕ ; ವಿನೋಧ್ ಧೋಂಡಳೆ
ತಾರಾಗಣ: ಸತೀಶ್ ನೀನಾಸಂ, ಸಪ್ತಮಿ ಗೌಡ, ಸಂಪತ್ ಮೈತ್ರೇಯ, ಬಿ, ಸುರೇಶ್, ಜಗ್ಗಪ್ಪ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಮತ್ತಿತರರು
ರೇಟಿಂಗ್ : **** 4/5
“ಈಗಾಗಲೇ ಸತ್ತು ಹೋಗಿದ್ದೇವೆ.. ಇನ್ನೊಂದು ಸಾಯಲು ಭಯ ಯಾಕೆ.. ಟೆಂಡರ್ಗೆ ಅರ್ಜಿ ಹಾಕೊದೇ. ಬೆನ್ನಲ್ಲಾ.. ಕೂದಲು ಬಗ್ಗಲ್ಲ…”
“ನಿನ್ನ ಜೀವ ನಿನಗಷ್ಟೇ ಅಲ್ಲ.. ನಿನ್ನ ಸಮುದಾಯಕ್ಕೂ ಮುಖ್ಯ,, ನಿನ್ನೊಂದಿಗೆ ನಾನಿರುತ್ತೇನೆ ಮುಂದೆ ಸಾಗು…”
ತಲೆ ತಲಾಂತರಿಂದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ,ಜಾತಿ ತಾರತಮ್ಯಕ್ಕೆ ಸಿಲುಕಿ ನೊಂದು ಬೆಂದ ಸಮುದಾಯ ಒಂದೆಡೆಯಾದರೆ, ಸಿಕ್ಕ ಸರ್ಕಾರಿ ಉದ್ಯೋಗವನ್ನು ತಿರಸ್ಕರಿಸಿ ತನ್ನ ಜನರ ಬೆಂಬಲಕ್ಕೆ ನಿಲ್ಲುವ ಬಿಸಿರಕ್ತದ ಯುವಕನ ಸವಾಲು.
ನಿನ್ನಂಥ ಯುವಕ ಬೇಕಿತ್ತು ಮುಂದೆ ಸಾಗು ಎಂದು ಆತ್ಮ ವಿಶ್ವಾಸ ತುಂಬುವ ಅಧಿಕಾರಿ..ಇಷ್ಟಕ್ಕೂ ಇದೆಲ್ಲಾ ಏನು, ಯಾತಕ್ಕಾಗಿ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಆಗಿತ್ತೇನು ಎನ್ನುವುದನ್ನು ತಿಳಿಯಬೇಕಾದರೆ “ದಿ ರೈಸ್ ಆಫ್ ಅಶೋಕ” ಚಿತ್ರದ ನೋಡಬೇಕು.
ನಿರ್ದೇಶಕ ವಿನೋದ್ ಧೋಂಡಳೆ, ಸಮುದಾಯದಾಯವೊಂದರ ನೋವು, ನಲಿವು, ಪಡುವ ಕಷ್ಟ, ಯಾತನೆಗಳನ್ನು ನೈಜತೆಯ ನೆಲೆಗಟ್ಟಿನಲ್ಲಿ ಚಿತ್ರರೂಪಕ್ಕೆ ತಂದುಕೊಟ್ಟಿದ್ದಾರೆ, ತೆರೆಯ ಮೇಲೆ ಬಂದಿದ್ದನ್ನು ಕಣ್ಣಾರೆ ಕಂಡಿದ್ದರೆ ಆ ಜೀವ ಎಷ್ಟು ಖುಷಿ ಪಟುತ್ತಿತ್ತೋ ಏನೋ.. ಆದರೆ ಇಡೀ ಚಿತ್ರವನ್ನು ಹೆಗಲ ಮೇಲೆ ಹಾಕಿಕೊಂಡು ನಾ ನಿದ್ದೇನೆ ಎಂದು ಮುಂದೆ ಸಾಗಿದ ನಟ ಸತೀಶ್ ನೀನಾಸಂಗೆ ನಿಜಕ್ಕೂ ಈ ಶ್ರೇಯ ಸಲ್ಲಬೇಕು.
ಶಹನಾಯಿ ನುಡಿಸುವ ಕಲೆಗಾರ ಅಶೋಕ (ನೀನಾಸಂ ಸತೀಶ್) ನನ್ನು ಅವರಪ್ಪ (ಬಿ ಸುರೇಶ್) ರೆವಿನ್ಯೂ ಇನ್ಸ್ ಪೆಕ್ಟರ್ ಮಾಡಬೇಕೆನ್ನುವ ಕನಸು. ಅದಕ್ಕಾಗಿ ತಾನು ಮಾಡುವ ಕೆಲಸದ ಕಡೆಗೆ ಮಗನ ಕಾಲು ಸುಳಿದಂತೆ ನೋಡಿಕೊಂಡ ಜೀವ ಅದು. ನನ್ನ ಕೆಲಸ ನನಗಷ್ಟೇ ಸಾಕು, ಮಗನಿಗೆ ಬೇಡ ಎಂದುಕೊಂಡ ಅಪ್ಪ. ಓದಿ ಮುಗಿಸಿ ಊರಿಗೆ ಬರುವ ಅಶೋಕನನ್ನು ಅಪ್ಪ ಪ್ರೀತಿಯಿಂದ ನೋಡಿಕೊಂಡವ ಊರ ಹಬ್ಬದಲ್ಲಿ ಅಚಾನಕ್ ಆಗಿ ಕಂಡ ಅಂಬಿಕಾ ( ಸಪ್ತಮಿ ಗೌಡ) ಕಡೆ ಗೊತ್ತಿಲ್ಲದೆ ಮನಸು ಜಾರಿ ಬಿಡುತ್ತದೆ.
ಅಪ್ಪನ ಆಸೆಯಂತೆ ಮಗನಿಗೆ ರೆವಿನ್ಯೂ ಅಧಿಕಾರಿಯಾಗಿ ಸರ್ಕಾರಿ ಕೆಲಸವೂ ಸಿಗುತ್ತದೆ, ಇದೇ ಖುಷಿಯಲ್ಲಿ ಅಶೋಕನಿಗೆ ಹುಡುಗಿ ನೋಡುವ ಶಾಸ್ತ್ರವೂ ಮುಗಿದಿರುತ್ತದೆ. ಇಷ್ಟರೊಳಗೆ ಕುಟ್ಟಿ ಜಾಬ್ಜಿ (ಸಂಪಯ್ ಮೈತ್ರೇಯಾ) ಮತ್ತು ಅವನ ಮಗ (ಯಶ್ ಶೆಟ್ಟಿ) ದೌರ್ಜನ್ಯ,ದಬ್ಬಾಳಿಕೆ ಮಿತಿ ಮೀರಿ ಹೋಗುತ್ತದೆ. ಇಂತಹ ಸಮಯದಲ್ಲಿ ಸಿಕ್ಕ ಸರ್ಕಾರಿ ಕೆಲಸವನ್ನು ಕಣ್ಣಿಗೆ ಒತ್ತಿಕೊಂಡು ಅದರ ಕಡೆಗೆ ಹೆಜ್ಜೆ ಹಾಕ್ತಾನಾ, ಇಲ್ಲ ತನ್ನ ಜನ ಪಡುವ ಯಾತನೆ ನೋವಿಗೆ ಧ್ವನಿಯಾಗುತ್ತಾನಾ ಎನ್ನುವುದು ಚಿತ್ರದ ಕಥಾನಕ.
ಅಷ್ಟಕ್ಕೂ ಕುಟ್ಟಿ ಬಾಜ್ವಿ ದೌರ್ಜನ್ಯ ನಡೆಸುವುದಾದರೂ ಯಾಕೆ, ಆತ ಮಾಡುವ ಕಾಯಕ ಯಾವುದು ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು,. ನಿರ್ದೇಶಕ ವಿನೋದ್ ಧೋಂಡಳೆ, ಕುತೂಹಲಕಾರಿಯಾದ ಮತ್ತು ಎಲ್ಲಾ ಭಾಷೆಗಳಿಗೂ ಸಲ್ಲಬಹುದಾದ ಸಾರ್ವತ್ರಿಕ ವಿಷಯವನ್ನು ಮುಂದಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ನಾಯಕ ಸತೀಶ್ ನೀನಾಸಂ, ವಿಭಿನ್ನ ಲುಕ್ನಲ್ಲಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ಧಾರೆ, ಇದುವರೆಗಿನ ಚಿತ್ರ ಜೀವನದಲ್ಲಿ ಸತೀಶ್ ಅವರ ಉತ್ತಮ ಚಿತ್ರ ಮತ್ತು ಪಾತ್ರಗಳಲ್ಲಿ ಒಂದು. ಇದು ರೈಸ್ ಆಫ್ ಸತೀಶ ಕೂಡ,
ನಾಯಕಿ ಸಪ್ತಮಿಗೌಡ ಚಿತ್ರಕ್ಕೆ ಪೂರಕವಾಗಿದ್ದಾರೆ. ಚಿತ್ರದಲ್ಲಿ ನಾಯಕನಷ್ಟೇ ಗಮನ ಸೆಳೆಯುವುದು ಮತ್ತೊಂದು ಪಾತ್ರ ಕುಟ್ಟಿ ಬಾಬ್ಜಿ. ಈ ಪಾತ್ರವನ್ನು ರಂಗಭೂಮಿ ಕಲಾವಿದ ಸಂಪತ್ ಮೈತ್ರೇಯಾ ಮಾಡಿದ್ದು ತಮಿಳು ಕನ್ನಡ ಮಿಶ್ರಿತ ಭಾಷೆಯಲ್ಲಿ ಪಾತ್ರವನ್ನು ತಿಂದುಹಾಕಿದ್ದಾರೆ, ಇದು ಅವರ ಚಿತ್ರ ಜೀವನದ ಹೆಗ್ಗುರುತಿನ ಚಿತ್ರ.
ಜೊತೆಗೆ ಅಪ್ಪನ ಪಾತ್ರದಲ್ಲಿ ಬಿ ಸುರೇಶ್ ಪಾತ್ರವನ್ನು ಜೀವಿಸಿಬಿಟ್ಟಿದ್ದಾರೆ. ಜೊತೆಗೆ ಯಶ್ ಶೆಟ್ಟಿ ಗಮನ ಸೆಳೆದಿದ್ದಾರೆ, ಉಳಿದಂತೆ ರವಿಶಂಕರ್, ಜಗ್ಗಪ್ಪ, ಗೋಪಾಲಕೃಷ್ಣ ದೇಶಪಾಂಡೆ ಮತ್ತಿತರ ಕಲಾವಿದರು ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ಧಾರೆ
ದಿ ರೈಸ್ ಆಫ್ ಅಶೋಕ ಸಮುದಾಯವೊಂದರ ನೋವು,ಸಂಕಷ್ಠ ಬವಣೆಯ ಸುತ್ತ ಸಾಗುವ ಕಥನ, ಈ ರೀತಿಯ ನೆಲ ಮೂಲದ ಕಥೆಗಳು ಎಲ್ಲಾ ಕಡೆ ಸಲ್ಲುತ್ತವೆ. ಪರಭಾಷೆಯಲ್ಲಿ ಈ ಮಾದರಿ ಸಿನಿಮಾ ಬಂದಾಗ ನಮ್ಮಲ್ಲಿ ಬರಲ್ಲ ಎಂದು ಹೇಳುವ ಮಂದಿ ನಮ್ಮಲ್ಲಿ ಅಂತಹ ಸಿನಿಮಾ ಬಂದಿದೆ ಇದೀಗ ನೋಡುವ ಸಮಯ. ರೈಸ್ ಆಫ್ ಸ್ಯಾಂಡಲ್ ವುಡ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುವ ಸಮಯ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

